ಸಾರಾಂಶ
ಹೊಯ್ಸಳರ ಕಾಲದ ಎರಡು ಪುರಾತನ ದೇವಾಲಯಗಳಾದ ಶ್ರೀಕಾಶಿವಿಶ್ವನಾಥ ಹಾಗೂ ಶ್ರೀಅನಂತಪದ್ಮನಾಭ ಸ್ವಾಮಿ ದೇವಾಲಯಗಳು ಹೊಸಬೂದನೂರು ಗ್ರಾಮದಲ್ಲಿದ್ದು, ಅವುಗಳನ್ನು ಪ್ರವಾಸಿ ತಾಣಗಳನ್ನಾಗಿ ಮಾಡಲು ಕಳೆದ ಫೆಬ್ರವರಿಯಲ್ಲಿ ಬೂದನೂರು ಉತ್ಸವಕ್ಕೆ ಚಾಲನೆ ನೀಡಲಾಗಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
೨೦೨೫ರ ಫೆಬ್ರವರಿ ತಿಂಗಳಲ್ಲಿ ಎರಡನೇ ವರ್ಷದ ‘ಬೂದನೂರು ಉತ್ಸವ’ವನ್ನು ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಶಾಸಕ ಪಿ. ರವಿಕುಮಾರ್‌ಗೌಡ ತಿಳಿಸಿದರು.ತಾಲೂಕಿನ ಹೊಸಬೂದನೂರು ಗ್ರಾಮದ ಹೊಯ್ಸಳರ ಕಾಲದ ಶ್ರೀಅನಂತಪದ್ಮನಾಭ ದೇವಾಲಯದಲ್ಲಿ ನಡೆದ ಶ್ರೀಅನಂತಪದ್ಮನಾಭ ಸ್ವಾಮಿ ಜನ್ಮದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ವಿಶೇಷ ಪೂಜೆಯಲ್ಲಿ ಭಾಗವಹಿಸಿ ದೇವರ ದರ್ಶನ ಪಡೆದು ನಂತರ ಮಾತನಾಡಿದರು.
ಹೊಯ್ಸಳರ ಕಾಲದ ಎರಡು ಪುರಾತನ ದೇವಾಲಯಗಳಾದ ಶ್ರೀಕಾಶಿವಿಶ್ವನಾಥ ಹಾಗೂ ಶ್ರೀಅನಂತಪದ್ಮನಾಭ ಸ್ವಾಮಿ ದೇವಾಲಯಗಳು ಹೊಸಬೂದನೂರು ಗ್ರಾಮದಲ್ಲಿದ್ದು, ಅವುಗಳನ್ನು ಪ್ರವಾಸಿ ತಾಣಗಳನ್ನಾಗಿ ಮಾಡಲು ಕಳೆದ ಫೆಬ್ರವರಿಯಲ್ಲಿ ಬೂದನೂರು ಉತ್ಸವಕ್ಕೆ ಚಾಲನೆ ನೀಡಲಾಗಿದೆ ಎಂದರು.‘ಬೂದನೂರು ಉತ್ಸವ’ವನ್ನು ಸರ್ಕಾರದ ವತಿಯಿಂದಲೇ ಪ್ರತಿ ವರ್ಷ ಆಚರಿಸುವಂತೆ ಮಾಡಲಾಗಿದೆ. ನಾನಲ್ಲದೆ ಮುಂದೆ ಯಾರೇ ಶಾಸಕರಾದರೂ ಉತ್ಸವ ಮುಂದುವರಿಯಲಿದೆ. ಗ್ರಾಮದ ಪ್ರವೇಶದ್ವಾರದಲ್ಲಿ ‘ಕಮಾನು’ ನಿರ್ಮಿಸಲು ೫ ಲಕ್ಷ ರು. ಅನುದಾನ ನೀಡಲಾಗುವುದು ಎಂದರು.
ಅಲ್ಲದೇ, ಗ್ರಾಮದ ರಸ್ತೆಗಳ ದುರಸ್ತಿ ಹಾಗೂ ಚರಂಡಿ ನಿರ್ಮಾಣಕ್ಕೆ ಗ್ರಾಮಸ್ಥರು ಮನವಿ ಮಾಡಿದ್ದು, ಶೀಘ್ರ ದುರಸ್ತಿ ಮಾಡಲಾಗುವುದು ಎಂದು ಭರವಸೆ ನೀಡಿದರು. ಇದೇ ವೇಳೆ ಶಾಸಕ ರವಿಕುಮಾರ್ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು.ವಿಶೇಷ ಪೂಜೆ:
ಸೋಮವಾರ ಬೆಳಗ್ಗೆಯಿಂದಲೇ ಶ್ರೀಅನಂತಪದ್ಮನಾಭ ಸ್ವಾಮಿ ದೇವರಿಗೆ ವಿಶೇಷ ಪೂಜೆ, ಅಭಿಷೇಕ ಹಾಗೂ ವಿಶೇಷ ಅಲಂಕಾರ ನೆರವೇರಿದವು. ವೈಷ್ಣವ ಪಂಥದ ಅನುಯಾಯಿಗಳು ರಾಜ್ಯದ ವಿವಿಧೆಡೆಗಳಿಂದ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನದ ಸಮಿತಿ ವತಿಯಿಂದ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.ಈ ಸಂದರ್ಭ ಗ್ರಾಪಂ ಸದಸ್ಯ ಕೆಂಪರಾಜು, ಮುಖಂಡರಾದ ಶೇಖರ್, ಚಂದ್ರು, ರವಿ, ಜಯರಾಂ, ಮರಿಗೌಡ, ಬಿ.ಪಿ. ಹರೀಶ್, ಶಂಕರ್ ಇತರರಿದ್ದರು.