ಗದಗ ನಗರದ ಹೃದಯ ಭಾಗದಲ್ಲಿರುವ ಸುಮಾರು 35 ಎಕರೆ ಭೂಮಿಯಲ್ಲಿ ಆಧುನಿಕ ಹಾಗೂ ಸಮಗ್ರ ವಾಣಿಜ್ಯ ಕೇಂದ್ರ ನಿರ್ಮಿಸುವ ಮಹತ್ವಾಕಾಂಕ್ಷಿ ಯೋಜನೆಗೆ ವೇಗ ದೊರೆತಿದ್ದು, ಶನಿವಾರ ದ್ವಿತೀಯ ಸಮಾಲೋಚನಾ ಸಭೆ ನಡೆಯಿತು.
ಗದಗ: ನಗರದ ಹೃದಯ ಭಾಗದಲ್ಲಿರುವ ಸುಮಾರು 35 ಎಕರೆ ಭೂಮಿಯಲ್ಲಿ ಆಧುನಿಕ ಹಾಗೂ ಸಮಗ್ರ ವಾಣಿಜ್ಯ ಕೇಂದ್ರ ನಿರ್ಮಿಸುವ ಮಹತ್ವಾಕಾಂಕ್ಷಿ ಯೋಜನೆಗೆ ವೇಗ ದೊರೆತಿದ್ದು, ಗದಗ-ಬೆಟಗೇರಿ ವ್ಯಾಪಾರ, ಸಂಸ್ಕೃತಿ ಹಾಗೂ ವಸ್ತು ಪ್ರದರ್ಶನ ಪ್ರಾಧಿಕಾರದ ಆಶ್ರಯದಲ್ಲಿ ಶನಿವಾರ ಜಿಲ್ಲಾಡಳಿತ ಭವನದಲ್ಲಿ ದ್ವಿತೀಯ ಸಮಾಲೋಚನಾ ಸಭೆ ನಡೆಯಿತು.
ಶಾಸಕ ಡಾ. ಎಚ್.ಕೆ. ಪಾಟೀಲ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಗದಗ-ಬೆಟಗೇರಿ ಬ್ಯುಸಿನೆಸ್ ಸೆಂಟರ್ ಅನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವ (PPP) ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಸಂಬಂಧ ಆಹ್ವಾನಿಸಲಾಗಿರುವ ಎಕ್ಸ್‌ಪ್ರೆಶನ್ ಆಫ್ ಇಂಟರೆಸ್ಟ್ (EOI) ನಲ್ಲಿ ಭಾಗವಹಿಸಿರುವ ಬಿಡ್‌ದಾರರು, ಉದ್ಯಮಿಗಳು, ವ್ಯಾಪಾರಸ್ಥರು ಹಾಗೂ ಹೂಡಿಕೆದಾರರೊಂದಿಗೆ ಯೋಜನೆಯ ವಿವಿಧ ಆಯಾಮಗಳ ಕುರಿತು ಸಮಗ್ರ ಚರ್ಚೆ ನಡೆಯಿತು.ಶಾಸಕ ಡಾ. ಎಚ್.ಕೆ. ಪಾಟೀಲ ಮಾತನಾಡಿ, ಈಗಾಗಲೇ ಯೋಜಿತಗೊಳಿಸಿರುವ ಕಟ್ಟಡ ಮತ್ತು ಮೂಲಸೌಕರ್ಯಗಳು ಅತ್ಯುತ್ತಮ ಗುಣಮಟ್ಟದಲ್ಲಿ ನಿರ್ಮಾಣವಾಗಬೇಕು. ಗುಣಮಟ್ಟಕ್ಕೆ ಯಾವುದೇ ಕಾರಣಕ್ಕೂ ರಾಜಿಯಾಗಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ವಕಾರ ಸಾಲಿನ ಜಾಗದಲ್ಲಿ ನಿರ್ಮಾಣವಾಗಲಿರುವ ಯೋಜನೆಗೆ ರೂಪಿಸಲಾಗಿರುವ ವಿನ್ಯಾಸದಂತೆ ಅತ್ಯಾಕರ್ಷಕ ಹಾಗೂ ಜನೋಪಯೋಗಿ ಕಟ್ಟಡ ನಿರ್ಮಾಣವಾಗಬೇಕು ಎಂದರು.ಯೋಜನೆ ಕುರಿತು ಈಗಾಗಲೇ ಬೆಂಗಳೂರಿನಲ್ಲಿ ಸಭೆ ನಡೆಸಲಾಗಿದೆ. ಗದಗ-ಬೆಟಗೇರಿ ವ್ಯಾಪಾರ, ಸಂಸ್ಕೃತಿ ಹಾಗೂ ವಸ್ತು ಪ್ರದರ್ಶನ ಪ್ರಾಧಿಕಾರವು ಸರ್ಕಾರದ ಅಧಿಕೃತ ಸಂಸ್ಥೆಯಾಗಿದ್ದು, ನಗರದ ಹೃದಯ ಭಾಗದಲ್ಲಿರುವ ಸುಮಾರು 35 ಎಕರೆ ಭೂಮಿಯನ್ನು ಪ್ರಾಧಿಕಾರದ ಹೆಸರಿಗೆ ವರ್ಗಾಯಿಸಲಾಗಿದೆ. ಈ ಪ್ರದೇಶದಲ್ಲಿ ಅತ್ಯುತ್ತಮ ವಾಣಿಜ್ಯ ಕೇಂದ್ರ ನಿರ್ಮಿಸುವ ಉದ್ದೇಶ ಹೊಂದಲಾಗಿದೆ ಎಂದು ವಿವರಿಸಿದರು.
ಈ ಹಿನ್ನೆಲೆಯಲ್ಲಿ ಹೂಡಿಕೆದಾರರು ಮತ್ತು ಖಾಸಗಿ ಸಂಸ್ಥೆಗಳನ್ನು ಆಕರ್ಷಿಸುವ ಉದ್ದೇಶದಿಂದ ಸಭೆ ನಡೆಸಿ ಚರ್ಚಿಸಲಾಗಿದೆ. ಗದಗ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಮತ್ತು ವಾಣಿಜ್ಯ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ವಿಪುಲ ಅವಕಾಶಗಳಿವೆ. ಈ ಅವಕಾಶಗಳನ್ನು ಹೂಡಿಕೆದಾರರು ಹಾಗೂ ಸ್ಥಳೀಯ ಉದ್ಯಮಿಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.7 ಸೆಕ್ಟರ್‌ಗಳಲ್ಲಿ ಹಂತಹಂತವಾಗಿ ಅಭಿವೃದ್ಧಿ: ಬ್ಯುಸಿನೆಸ್ ಸೆಂಟರ್ ಯೋಜನೆಯನ್ನು ಒಟ್ಟು 7 ಸೆಕ್ಟರ್‌ಗಳಾಗಿ ವಿಂಗಡಿಸಿ ಹಂತ ಹಂತವಾಗಿ ಅನುಷ್ಠಾನಗೊಳಿಸುವ ಉದ್ದೇಶ ಹೊಂದಲಾಗಿದೆ. ಯೋಜನೆಯಡಿ ಪಂಚತಾರಾ ಹೋಟೆಲ್, ಆಧುನಿಕ ವಾಣಿಜ್ಯ ಮಳಿಗೆಗಳು, ಸಭಾಂಗಣ, ಟೆಕ್ಸ್‌ಟೈಲ್ ಕೇಂದ್ರ, ಮಕ್ಕಳ ಮನರಂಜನಾ ಪ್ರದೇಶ, ಗಾಂಧಿ ಭವನ, ಆಕರ್ಷಕ ವೃತ್ತಗಳು, ಅಗಲವಾದ ರಸ್ತೆಗಳು ಹಾಗೂ ವ್ಯವಸ್ಥಿತ ಸಾರಿಗೆ ಸಂಪರ್ಕ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಲು ಯೋಜಿಸಲಾಗಿದೆ. ವ್ಯಾಪಾರಸ್ಥರು, ಹೂಡಿಕೆದಾರರು ಮತ್ತು ಪ್ರವಾಸಿಗರಿಗೆ ಅನುಕೂಲವಾಗುವ ರೀತಿಯಲ್ಲಿ ಸಮಗ್ರ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಆಶಯ ಹೊಂದಲಾಗಿದೆ ಎಂದು ಹೇಳಿದರು.
ಸೆ. 10ರೊಳಗಾಗಿ ಹೂಡಿಕೆದಾರರು ಹಾಗೂ ವ್ಯಾಪಾರಸ್ಥರು ತಮ್ಮ ಅಗತ್ಯತೆಗಳು ಮತ್ತು ಸಲಹೆಗಳನ್ನು ಲಿಖಿತವಾಗಿ ಸಲ್ಲಿಸಬೇಕು ಎಂದು ಮನವಿ ಮಾಡಿದರು.ಕೆಪಿಎಂಸಿ ಸಂಸ್ಥೆಯಿಂದ ಯೋಜನೆ ಪ್ರಸ್ತುತಿ: ಸಭೆಯಲ್ಲಿ ಕೆಪಿಎಂಸಿ ಸಂಸ್ಥೆಯ ಪ್ರತಿನಿಧಿಗಳು ಬ್ಯುಸಿನೆಸ್ ಸೆಂಟರ್ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಿದ್ಧಪಡಿಸಿರುವ ಯೋಜನೆಯ ಸಮಗ್ರ ರೂಪುರೇಷೆ, ಕಟ್ಟಡ ವಿನ್ಯಾಸ, ಮೂಲಸೌಕರ್ಯ, ವಿವಿಧ ಸೆಕ್ಟರ್‌ಗಳ ಅಭಿವೃದ್ಧಿ ಹಾಗೂ ಹಂತಹಂತವಾಗಿ ಕೈಗೊಳ್ಳಬೇಕಾದ ಕಾಮಗಾರಿಗಳ ಕುರಿತು ಪ್ರಾತ್ಯಕ್ಷಿಕೆಯ ಮೂಲಕ ವಿವರಿಸಿದರು.
ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಮಾತನಾಡಿದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಜಿಪಂ ಮಾಜಿ ಅಧ್ಯಕ್ಷ ವಾಸಣ್ಣ ಕುರಡಗಿ, ಸಿದ್ದು ಪಾಟೀಲ, ಗ್ಯಾರಂಟಿ ಯೋಜನೆಗಳ ತಾಲೂಕು ಅಧ್ಯಕ್ಷ ಅಶೋಕ ಮಂದಾಲಿ, ಡಾ. ಎನ್.ಎಚ್. ನಾಗನೂರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಸಹಾಯಕ ಆಯುಕ್ತ ಗಂಗಪ್ಪ ಎಂ., ಬಸನಗೌಡ ಕೊಟೂರ, ರಾಜಾರಾಮ ಪವಾರ್, ಕೊಟ್ರೇಶ್ ವಿಭೂತಿ, ವಸಂತ ಮಡ್ಲೂರ, ಜಿ.ಜೆ. ರುದ್ರಣ್ಣಗೌಡ, ನಿಜಾಮುದ್ದೀನ್, ಜಂಟಿ ನಿರ್ದೇಶಕ (ಕೈಗಾರಿಕೆ) ಪ್ರಕಾಶ್, ಗೋಪಾಲ್ ಅಗರವಾಲ್, ಆಕಾಶ ಅಗರವಾಲ್, ನವೀನ್ ಇದ್ದರು.