ಎನ್.ಕೋಡಿಹಳ್ಳಿ ಗ್ರಾಮಸ್ಥರಿಂದ ಹುಲಿವಾಹನ ಉತ್ಸವ, ರಾತ್ರಿ 7 ಗಂಟೆಗೆ ಚನ್ನಪಟ್ಟಣ ತಾಲೂಕಿನ ಹುಣಸನಹಳ್ಳಿ ಗ್ರಾಮಸ್ಥರಿಂದ ದೇವರ ಪಲ್ಲಕ್ಕಿ ಉತ್ಸವ ಭಕ್ತಿಪೂರ್ವಕವಾಗಿ ನಡೆಯಿತು. ಶುಕ್ರವಾರ ಬೆಳಗ್ಗೆ ಪ್ರತಿವರ್ಷ ನಡೆಸಿಕೊಂಡು ಬರುತ್ತಿರುವ ಪೊಲೀಸರು ದೇವರಿಗೆ ಪೂಜೆ ಸಲ್ಲಿಸಿ ದೇವರ ಕೃಪೆಗೆ ಪಾತ್ರರಾದರು.
ಕನ್ನಡಪ್ರಭ ವಾರ್ತೆ ಹಲಗೂರು
ಮಳವಳ್ಳಿ ತಾಲೂಕಿನ ಮುತ್ತತ್ತಿ ಗ್ರಾಮದ ಆರಾಧ್ಯ ದೇವ ಶ್ರೀ ಮುತ್ತತ್ತಿರಾಯನ ಸನ್ನಿಧಿಯಲ್ಲಿ ಅದ್ಧೂರಿ ರಥೋತ್ಸವ ನಡೆದು ನಾಲ್ಕು ದಿನಗಳ ಜಾತ್ರಾ ಮಹೋತ್ಸವಕ್ಕೆ ತೆರೆ ಎಳೆಯಲಾಯಿತು.ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ನಡೆಯುವ ಶ್ರೀ ಮುತ್ತತ್ತಿರಾಯಸ್ವಾಮಿ ಭವ್ಯ ರಥೋತ್ಸವದಲ್ಲಿ ಅಪಾರ ಭಕ್ತರು ಹಾಲರವಿ ಸೇವೆ, ತೆಂಗಿನಕಾಯಿ ಸಿಪ್ಪೆಯನ್ನು ಎಡೆಯುವ ಸೇವೆ, ಪಲ್ಲಕ್ಕಿ ಸೇವೆ ಸೇರಿದಂತೆ ನಾಲ್ಕು ದಿನಗಳ ವಿಶೇಷ ಪೂಜೆ- ಪುನಸ್ಕಾರಗಳಲ್ಲಿ ಭಾಗವಹಿಸಿದರು.
ಕಳೆದ ಸೆ.1 ರಂದು ಪಾದಧಾರೆಯಲ್ಲಿ ಉಪವಾಸ, ದೇವರಿಗೆ ವಿಶೇಷ ಪೂಜೆಗಳು ನಡೆದವು. ಸೆ.2 ರಂದು ಮಧ್ಯಾಹ್ನ ಪಾದಧಾರೆಯಲ್ಲಿ ಹಾಲರವಿ ಸೇವೆ, ಕಾಯಿ ಒಡೆಯುವ ಸೇವೆ ಮತ್ತು ದೇವರ ಉತ್ಸವಗಳು ನಡೆದವು.ಸೆ.3 ರಂದು ಕಾವೇರಿ ನದಿಯಿಂದ ಗಂಗೆಯನ್ನು ತಂದು ಶ್ರೀ ಆಂಜನೇಯಸ್ವಾಮಿ ಮೂರ್ತಿಯನ್ನು ಶುಚಿಗೊಳಿಸಿ ಹಾಲಿನ ಅಭಿಷೇಕ, ಪಂಚಾಮೃತ ಅಭಿಷೇಕಗಳನ್ನು ನಡೆಸಿ ದೇವರಿಗೆ ಪ್ರಿಯವಾದ ತುಳಸಿ ಹಾರ ಸೇರಿ ವಿವಿಧ ಪುಷ್ಪಗಳಿಂದ ಅಲಂಕರಿಸಿ ವಿಶೇಷ ಪೂಜೆಗಳನ್ನು ನಡೆಸಲಾಯಿತು.
ಮಹಾಮಂಗಳಾರತಿ ನಡೆಸಿದ ನಂತರ ಅರ್ಚಕ ರವಿ ಮಡಕೆಯಲ್ಲಿ ಹಾಲು, ಮೊಸರು ತುಂಬಿಕೊಂಡು ದೇವಸ್ಥಾನದ ಆವರಣದ ಅರಳಿ ಮರವನ್ನು ಏರಿ ಮಡಕೆಯನ್ನು ತೂಗುವಂತೆ ಆಡಿಸುತ್ತಿದ್ದಾಗ ಭಕ್ತರು ದೊಣ್ಣೆಗಳಿಂದ ಮಡಿಕೆ ಒಡೆಯುವುದನ್ನು ವಿಶೇಷವಾಗಿ ನಡೆಸಲಾಯಿತು.ನಂತರ ತೆಂಗಿನಕಾಯಿಯನ್ನು ಹಗ್ಗದಿಂದ ಬಿಗಿದು ತೆಂಗಿನಕಾಯಿ ಸಿಪ್ಪೆಯನ್ನು ಬಿದಿರು ದೊಣ್ಣೆಯಿಂದ ಎಡೆಯುವುದನ್ನು ವಿಶೇಷವಾಗಿ ಭಕ್ತಿ, ಭಾವ ಪೂರಕವಾಗಿ ನಡೆಸಲಾಯಿತು. ಮಧ್ಯಾಹ್ನ 12 ಗಂಟೆಗೆ ವಿವಿಧ ಬಗೆಯ ಹೂಗಳಿಂದ ಆಲಂಕಾರ ಮಾಡಿದ್ದ ಮುತ್ತತ್ತಿರಾಯನ ರಥೋತ್ಸವಕ್ಕೆ ಹಲಗೂರು ಉಪ ತಹಸೀಲ್ದಾರ್ ಕೆ. ನಟರಾಜು ಅವರು ವಿಶೇಷ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ದೇವಾಲಯದಿಂದ ಕಾವೇರಿ ನದಿ ದಂಡೆಯವರೆಗೂ ನಡೆದ ರಥೋತ್ಸವದಲ್ಲಿ ಸಾವಿರಾರು ಭಕ್ತಾದಿಗಳು ರಥ ಎಳೆದು ಮುತ್ತತ್ತಿರಾಯನ ಕೃಪೆಗೆ ಪಾತ್ರರಾದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಜಾನಪದ ಕಲಾ ತಂಡದಿಂದ ವೀರಗಾಸೆ, ಡೊಳ್ಳು ಕುಣಿತ, ಚಿಲಿಪಿಲಿ ಗೊಂಬೆ, ಪೂಜಾ ಕುಣಿತ ಕಾರ್ಯಕ್ರಮಗಳು ಜನರ ಮನಸೂರೆಗೊಂಡವು.
ಎನ್.ಕೋಡಿಹಳ್ಳಿ ಗ್ರಾಮಸ್ಥರಿಂದ ಹುಲಿವಾಹನ ಉತ್ಸವ, ರಾತ್ರಿ 7 ಗಂಟೆಗೆ ಚನ್ನಪಟ್ಟಣ ತಾಲೂಕಿನ ಹುಣಸನಹಳ್ಳಿ ಗ್ರಾಮಸ್ಥರಿಂದ ದೇವರ ಪಲ್ಲಕ್ಕಿ ಉತ್ಸವ ಭಕ್ತಿಪೂರ್ವಕವಾಗಿ ನಡೆಯಿತು. ಶುಕ್ರವಾರ ಬೆಳಗ್ಗೆ ಪ್ರತಿವರ್ಷ ನಡೆಸಿಕೊಂಡು ಬರುತ್ತಿರುವ ಪೊಲೀಸರು ದೇವರಿಗೆ ಪೂಜೆ ಸಲ್ಲಿಸಿ ದೇವರ ಕೃಪೆಗೆ ಪಾತ್ರರಾದರು.ಜಾತ್ರೋತ್ಸವದಲ್ಲಿ ಭಾಗವಹಿಸಿದ್ದ ಸಾವಿರಾರು ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಿತು. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ನಾಲ್ಕು ದಿನಗಳ ಜಾತ್ರೋತ್ಸವದಲ್ಲಿ ಮಳವಳ್ಳಿ, ಮಂಡ್ಯ, ಕನಕಪುರ, ರಾಮನಗರ, ಬೆಂಗಳೂರು ಸೇರಿದಂತೆ ವಿವಿಧ ನಗರಗಳಿಂದ ಸಾವಿರಾರು ಭಕ್ತಾದಿಗಳು ಆಗಮಿಸಿ ಮುತ್ತತ್ತಿರಾಯನ ಕೃಪೆಗೆ ಪಾತ್ರರಾದರು.