ಸಾರಾಂಶ
ಕನ್ನಡಪ್ರಭ ವಾರ್ತೆ ಬಸವಕಲ್ಯಾಣ
ಮನುಷ್ಯನ ಬದುಕು ಎತ್ತಿನ ಬಂಡಿಯಂತೆ. ಒಂದು ಲಕ್ಷ ರು. ಎತ್ತುಗಳನ್ನು ಖರೀದಿಸಿ ಬಂಡಿಗೆ ಕಟ್ಟಿ ನಡೆಸಬಹುದು. ಆದರೆ ಆ ಬಂಡಿಗೆ ಚಿಕ್ಕದಾದ ಚಿಲಕ ಹಾಕದಿದ್ದರೆ ಅದು ಮುರಿದು ಬೀಳುತ್ತದೆ. ಅದರಂತೆ ಸುಂದರ ಜೀವನಕ್ಕೆ ಆಧ್ಯಾತ್ಮ ಎನ್ನುವ ಕೀಲಿ ಹಾಕಬೇಕು ಎಂದು ಧಾರವಾಡ ಮುರುಘಾಮಠದ ಡಾ.ಮಲ್ಲಿಕಾರ್ಜುನ ಸ್ವಾಮೀಜಿ ತಿಳಿಸಿದರು.ಹಾರಕೂಡದಲ್ಲಿ ಶನಿವಾರ ಸಂಜೆ ನಡೆದ ರಥೋತ್ಸವದ ನಂತರ ಸದ್ಗುರು ಚೆನ್ನಬಸವ ಶಿವಯೋಗಿಗಳ 73ನೇ ಜಾತ್ರಾ ಮಹೋತ್ಸವ ನಿಮಿತ್ತ ಆಯೋಜಿಸಿದ್ದ ಶಿವಾನುಭವ ಚಿಂತನಗೋಷ್ಠಿಯ ಸಾನಿಧ್ಯ ವಹಿಸಿ, ಜೀವನದಲ್ಲಿ ಸುಖ, ಶಾಂತಿ ದೊರೆಯಬೇಕಾದರೆ ಆಧ್ಯಾತ್ಮವನ್ನು ಅಳವಡಿಸಿಕೊಳ್ಳಬೇಕು ಎಂದರು.
ಹಾರಕೂಡಿನ ಡಾ.ಚನ್ನವೀರ ಶಿವಚಾರ್ಯರು ನೇತೃತ್ವ ವಹಿಸಿದ್ದರೆ ಬೇಲೂರಿನ ನಿಜಗುಣಾನಂದಪ್ರಭು ಸ್ವಾಮೀಜಿ ಅಧ್ಯಕ್ಷತೆ ವಹಿಸಿದರು. ಬೀದರ್ ಸಂಸದ ಸಾಗರ್ ಖಂಡ್ರೆ ಉದ್ಘಾಟಿಸಿದರು.ರಾಜಶಿವಯೋಗಿ ಸ್ವಾಮೀಜಿ ಶಹಾಬಾದ್, ಶಾಸಕರಾದ ಶರಣು ಸಲಗರ, ಬಸವರಾಜ ಮತ್ತಿಮಡು, ಡಾ.ಸಿದ್ದಲಿಂಗಪ್ಪ ಪಾಟೀಲ್, ಮಾಜಿ ಶಾಸಕ ರಾಜ ಕುಮಾರ ಪಾಟೀಲ್ ತೆಲ್ಕೂರ, ವಿಧಾನ ಪರಿಷತ್ ಸದಸ್ಯರಾದ ಡಾ.ಚಂದ್ರಶೇಖರ ಪಾಟೀಲ್, ಜಗದೇವ ಗುತ್ತೇದಾರ್, ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ಬಿ.ನಾರಾಯಣರಾವ್, ನಿವೃತ್ತ ನ್ಯಾಯಾಧೀಶ ಸುಭಾಷಚಂದ್ರ ನಾಗರಾಳೆ, ಪ್ರಮುಖರಾದ ಧನರಾಜ ತಾಳಂಪಳ್ಳಿ, ಅರ್ಜುನ ಕನಕ, ಶಿವರಾಜ ನರಶೆಟ್ಟಿ, ಶಶಿಕಾಂತ ದುರ್ಗೆ, ಶಿವರಾಜ ಪಾಟೀಲ್, ಜಗನ್ನಾಥ ಪಾಟೀಲ್, ಸಂತೋಷ ಪಾಟೀಲ್, ಮಲ್ಲಿನಾಥ ಹಿರೇಮಠ, ಜಗದೀಶ ಚಿರಡೆ, ನೀಲಕಂಠ ರಾಠೋಡ್, ಮೇಘರಾಜ ನಾಗರಾಳೆ ಇತರರಿದ್ದರು.
ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ರಾಜಕುಮಾರ ಸಿರಗಾಪುರ ಸ್ವಾಗತಿಸಿದರು. ನವಲಿಂಗ ಪಾಟೀಲ್ ನಿರೂಪಿಸಿದರೆ ಸಿದ್ರಾಮಯ್ಯ ಸ್ವಾಮಿ ಗೋರ್ಟಾ ಸಂಗೀತ ಸೇವೆ ಸಲ್ಲಿಸಿದರು. ರಾಜಕುಮಾರ ಹೂಗಾರ, ಜನಾರ್ಧನ ವಾಘಮಾರೆ ಸಾಥ್ ನೀಡಿದರು.ಭವ್ಯ ರಥೋತ್ಸವ:ಸಾಯಂಕಾಲ ನಡೆದ ಭವ್ಯ ರಥೋತ್ಸವದಲ್ಲಿ ಮಂಠಾಳ ಗ್ರಾಮದ ಜಗನ್ನಾಥ ಪಾಟೀಲ್‌ರ ಮನೆಯಿಂದ ತಂದಿರುವ ಜ್ಯೋತಿಯಿಂದ ರಥೋತ್ಸವಕ್ಕೆ ಪೂಜೆ ಸಲ್ಲಿಸಿ ನಂತರ ಚೆನ್ನವೀರ ಶಿವಚಾರ್ಯರ ನೇತೃತ್ವದಲ್ಲಿ ಜಯ ಘೋಷಗಳೊಂದಿಗೆ ರಥಕ್ಕೆ ಹಣ್ಣು, ಉತ್ತತ್ತಿ ಎಸೆದು ಸಹಸ್ರಾರು ಭಕ್ತರು ತಮ್ಮ ಭಕ್ತಿಯನ್ನು ಸಮರ್ಪಿಸಿದರು. ಇದೇ ವೇಳೆ ಸಿಡಿಮುದ್ದುಗಳ ಚಿತ್ತಾರ ಆಕಾಶದಲ್ಲಿ ಮೂಡಿಬಂದವು. ಸಮಾರಂಭದಲ್ಲಿ ಡಾ.ಮಲ್ಲಿಕಾರ್ಜುನ ಸ್ವಾಮೀಜಿ ಧಾರವಾಡ, ನಿಜಗುಣಪ್ರಭು ಸ್ವಾಮೀ, ಶಾಸಕರಾದ ಶರಣು ಸಲಗರ, ಡಾ.ಸಿದ್ದಲಿಂಗಪ್ಪ ಪಾಟೀಲ್, ಧನರಾಜ ತಾಳಂಪಳ್ಳಿ ಮುಂತಾದವರು ಭಾಗವಹಿಸಿದರು.