ಶ್ರೀ ಚೋಳೂರು ಮಣ್ಣಮ್ಮ ದೇವಿಯ ಅದ್ಧೂರಿ ರಥೋತ್ಸವ

| Published : Mar 23 2025, 01:35 AM IST

ಸಾರಾಂಶ

ಗುಬ್ಬಿ ತಾಲೂಕಿನ ಚೋಳೂರು ಹೋಬಳಿಯ ಮಾದಾಪುರ ಬಳಿ ಮಣ್ಣೆ ಮಾರಿ ಕಾವಲಿನಲ್ಲಿ 800 ವರ್ಷಗಳ ಐತಿಹಾಸಿಕ ಶ್ರೀ ಮಣ್ಣಮ್ಮ ದೇವಿಯ ರಥೋತ್ಸವ ಪಾಲ್ಗುಣ ಮಾಸ, ಕೃಷ್ಣ ಪಕ್ಷ, ಚತುರ್ದಶಿ, ಶುಭ ಲಗ್ನದ ಬೆಳಗಿನ ಜಾವ 3. 45ಕ್ಕೆ ಸಹಸ್ರಾರು ಭಕ್ತರ ನಡುವೆ ವೈಭವದಿಂದ ನಡೆಯಿತು.

ಕನ್ನಡಪ್ರಭ ವಾರ್ತೆ ಗುಬ್ಬಿ

ಗುಬ್ಬಿ ತಾಲೂಕಿನ ಚೋಳೂರು ಹೋಬಳಿಯ ಮಾದಾಪುರ ಬಳಿ ಮಣ್ಣೆ ಮಾರಿ ಕಾವಲಿನಲ್ಲಿ 800 ವರ್ಷಗಳ ಐತಿಹಾಸಿಕ ಶ್ರೀ ಮಣ್ಣಮ್ಮ ದೇವಿಯ ರಥೋತ್ಸವ ಪಾಲ್ಗುಣ ಮಾಸ, ಕೃಷ್ಣ ಪಕ್ಷ, ಚತುರ್ದಶಿ, ಶುಭ ಲಗ್ನದ ಬೆಳಗಿನ ಜಾವ 3. 45ಕ್ಕೆ ಸಹಸ್ರಾರು ಭಕ್ತರ ನಡುವೆ ವೈಭವದಿಂದ ನಡೆಯಿತು.

ರಥೋತ್ಸವ ಪ್ರಯುಕ್ತ ಶ್ರೀ ಮಣ್ಣಮ್ಮ ದೇವಿಗೆ ವಿಶೇಷ ಹೂವಿನ ಅಲಂಕಾರ ಹಾಗೂ ವಿವಿಧ ಪೂಜಾ ಕೈಂಕರ್ಯ ನೆರವೇರಿಸಲಾಯಿತು. ಬೆಳಗ್ಗೆಯಿಂದಲೇ ಭಕ್ತರು ಮಣ್ಣಮ್ಮ ದೇವಿಯ ದರ್ಶನ ಪಡೆದು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.

ವಾಡಿಕೆಯಂತೆ ಮುಂಜಾನೆ ಆರಂಭವಾದ ಮಣ್ಣಮ್ಮ ದೇವಿಯ ರಥೋತ್ಸವದಲ್ಲಿ ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ಭಾಗಿಯಾಗಿ ರಥಕ್ಕೆ ಬಾಳೆ ಹಣ್ಣು, ದವನ ಎಸೆದು ಭಕ್ತಿ ಸಮರ್ಪಿಸಿದರು.

ಮಣ್ಣಮ್ಮ ದೇವಿಯ ಜಾತ್ರೆಯನ್ನು 33 ಹಳ್ಳಿಗಳ ಜನರು ಸಡಗರ- ಸಂಭ್ರಮದಿಂದ ಆಚರಿಸುತ್ತಾರೆ. ಬಿದರೆ, ಮಾದಪುರ ,ಇರಕಸಂದ್ರ , ಮೂಕನಹಳ್ಳಿ ಪಟ್ಟಣ ಸೇರಿದಂತೆ ಭಕ್ತರು ಜಾತ್ರೆಯನ್ನು ಅದ್ಧೂರಿಯಿಂದ ಮಾಡುತ್ತಾರೆ. ಅದರಂತೆ ಶುಕ್ರವಾರ ಇಡೀ ದಿನ ಉಪವಾಸ ಮಾಡಿ ಅಮ್ಮನವರ ಅಗ್ನಿಕುಂಡ ತುಳಿದು ಭಕ್ತಿ ಸಮರ್ಪಸಿದರು.

ಪುಷ್ಪಗಳಿಂದ ಅಲಂಕರಿಸಲಾಗಿದ್ದ ರಥೋತ್ಸವಕ್ಕೆ ಶ್ರೀ ಮಣ್ಣಮ್ಮ ದೇವಿಯ ಉತ್ಸವಮೂರ್ತಿಯನ್ನು ಕೂರಿಸುತ್ತಿದಂತೆ ನೆರೆದಿದ್ದ ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ರಥೋತ್ಸವಕ್ಕೆ ಆಗಮಿಸಿದ ಭಕ್ತರಿಗೆ ಅಲ್ಲಲ್ಲಿ ಪ್ರಸಾದ ವಿನಿಯೋಗ ಏರ್ಪಡಿಸಲಾಗಿತ್ತು.

ಮಣ್ಣಮ್ಮ ದೇವಿಯ ಟ್ರಸ್ಟ್ ಅಧ್ಯಕ್ಷರು ಹಾಗೂ ಶಾಸಕರಾದ ಎಸ್. ಆರ್.ಶ್ರೀನಿವಾಸ್ ಕುಟುಂಬ ಸಮೇತ ಮಣ್ಣಮ್ಮ‌ ದೇವಾಲಯಕ್ಕೆ ಬಂದು ವಿಶೇಷ ಪೂಜೆ ಸಲ್ಲಿಸಿದರು. ಚೋಳೂರು ಪೊಲೀಸರು ಸೂಕ್ತ ಬಂದೋಬಸ್ತ್ ವಹಿಸಿದ್ದರು.