ಸ್ಥಳೀಯ ಬುಡಕಟ್ಟು ಹಾಗೂ ದಲಿತ ಸಮುದಾಯಗಳ ಕಲೆ–ಸಂಸ್ಕೃತಿಗಳನ್ನು ಪರಿಚಯಿಸುವ ವೇದಿಕೆಯಾಗಿ ಈ ಉತ್ಸವ ರೂಪುಗೊಂಡಿದೆ.
ಕನ್ನಡಪ್ರಭ ವಾರ್ತೆ ಕಾರವಾರ
ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಚರಿತ್ರೆ ಹಾಗೂ ಸಂವಿಧಾನದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ನಗರದ ಪ್ರಸಿದ್ಧ ಠಾಗೋರ್ ಕಡಲತೀರದ ಮಯೂರವರ್ಮ ವೇದಿಕೆಯಲ್ಲಿ ಏ.11 ರಿಂದ 25ರವರೆಗೆ ಅದ್ಧೂರಿ ಕರಾವಳಿ ಭೀಮೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಸದಸ್ಯ ದೀಪಕ್ ಕುಡಾಲಕರ್ ತಿಳಿಸಿದರು.ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಸ್ಥಳೀಯ ಬುಡಕಟ್ಟು ಹಾಗೂ ದಲಿತ ಸಮುದಾಯಗಳ ಕಲೆ–ಸಂಸ್ಕೃತಿಗಳನ್ನು ಪರಿಚಯಿಸುವ ವೇದಿಕೆಯಾಗಿ ಈ ಉತ್ಸವ ರೂಪುಗೊಂಡಿದೆ. ಏಪ್ರಿಲ್ 11ರಂದು ಮಧ್ಯಾಹ್ನ 3 ಗಂಟೆಗೆ ನಗರದ ಅಂಬೇಡ್ಕರ್ ವೃತ್ತದಿಂದ ಆರಂಭವಾಗುವ ಅಂಬೇಡ್ಕರ್ ಮೂರ್ತಿಯ ಮೆರವಣಿಗೆಯು ನಗರದಾದ್ಯಂತ ಸಂಚರಿಸಿ ಮಯೂರವರ್ಮ ವೇದಿಕೆಯಲ್ಲಿ ಸಮಾಪನಗೊಳ್ಳಲಿದೆ. ಅಂದು ಸಂಜೆ ನಡೆಯುವ ಕಾರ್ಯಕ್ರಮವನ್ನು ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹಾದೇವಪ್ಪ ಉದ್ಘಾಟಿಸಲಿದ್ದು, ಸಚಿವರಾದ ಪ್ರಿಯಾಂಕ್ ಖರ್ಗೆ, ಮಂಕಾಳ ವೈದ್ಯ ಹಾಗೂ ಶಾಸಕ ಸತೀಶ್ ಸೈಲ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಭೀಮೋತ್ಸವದ ಪ್ರಯುಕ್ತ ಪ್ರತಿದಿನ ರಾತ್ರಿ 8.30ಕ್ಕೆ ಖ್ಯಾತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಮೊದಲ ದಿನ ಗಾಯಕ ರಾಜು ಕಲ್ತೋಕ, 2ನೇ ದಿನ ಶಿವಾನಿ ತಂಡ, 3ನೇ ದಿನ ಗೋವಾದ ಕೆ.ಕೆ. ಸೋನಿ ಲೈವ್ ಬ್ಯಾಂಡ್, ನಾಲ್ಕನೇ ದಿನ ಜೀ ಕನ್ನಡ ಗಾಯಕಿ ನಾಜಿರಾ ಬಾನು ಹಾಗೂ ಅಂತಿಮ ದಿನ ಇಂಡಿಯನ್ ಐಡಲ್ ಖ್ಯಾತಿಯ ಶ್ರೀ ಹರ್ಷ ತಂಡದಿಂದ ಸಂಗೀತ ರಸಮಂಜರಿ ಏರ್ಪಡಿಸಲಾಗಿದೆ ಎಂದು ತಿಳಿಸಿದರು.ಏ.14ರಂದು ಸಮಾಜ ಸೇವೆಯಲ್ಲಿ ತೊಡಗಿರುವ ಸಾಧಕರಿಗೆ ‘ಅಂಬೇಡ್ಕರ್ ಸೇವಾ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಅಲ್ಲದೆ, ಇತ್ತೀಚೆಗೆ ಜಿಲ್ಲೆಯಿಂದ ನ್ಯಾಯಾಧೀಶರಾಗಿ ಆಯ್ಕೆಯಾದ ಮೂವರನ್ನು ಸನ್ಮಾನಿಸಲಾಗುವುದು. ಏ.12ರಂದು ಕ್ರಿಮ್ಸ್ ಹಾಗೂ ಆರೋಗ್ಯ ಇಲಾಖೆಯ ಸಹಭಾಗಿತ್ವದಲ್ಲಿ ಉಚಿತ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದೆ. ಇದಲ್ಲದೆ ವಿದ್ಯಾರ್ಥಿಗಳಿಗೆ ಪ್ರಬಂಧ ಹಾಗೂ ಚಿತ್ರಕಲೆ ಸ್ಪರ್ಧೆ, ರೈತಾಪಿ ವರ್ಗದವರಿಗೆ ಫಲ–ಪುಷ್ಪ ಹಾಗೂ ಕರಕುಶಲ ವಸ್ತು ಪ್ರದರ್ಶನಕ್ಕೂ ಅವಕಾಶ ಕಲ್ಪಿಸಲಾಗಿದೆ ಎಂದರು.
ಎಸ್ಸಿ-ಎಸ್ಟಿ ಕೈಗಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಕಿರಣ್ ಬೋರ್ಕರ್, ರಾಜನ್ ಬಾನಾವಳಿಕರ್, ಸಚಿನ್ ಬೋರ್ಕರ್, ರೋಹನ್ ಕುಡಾಲಕರ್, ರಾಜೇಂದ್ರ ಮಾದರ, ಪ್ರಶಾಂತ್ ಗಡ್ಕರ್ ಉಪಸ್ಥಿತರಿದ್ದರು.