ಕನ್ನಡಪ್ರಭ ವಾರ್ತೆ ಬೆಳಗಾವಿ
ಸಾಂಪ್ರದಾಯಿಕ ವಾದ್ಯಗಳ ನಿನಾದದೊಂದಿಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಕ್ಯಾಂಪ್ ಪ್ರದೇಶದಲ್ಲಿ ದಸರಾ ಉತ್ಸವ ಅತ್ಯಂತ ಸಂಭ್ರಮದಿಂದ ಪರಂಪರೆಯ ಸೊಗಡಿನೊಂದಿಗೆ ಜರುಗಿತು.ವರ್ಷಕ್ಕೊಮ್ಮೆ ಸೀಮೋಲ್ಲಂಘನೆಗಾಗಿ ಆಗಮಿಸುವ ವಿವಿಧ ದೇವಿಯರ ಉತ್ಸವ ಮೂರ್ತಿಗಳ ಭವ್ಯ ಮೆರವಣಿಗೆ ಕ್ಯಾಂಪ್ ಪ್ರದೇಶದಲ್ಲಿ ವಿಜೃಂಭಣೆಯಿಂದ ನಡೆಯಿತು. ಕೆ.ಟಿ.ಪೂಜಾರಿ ಆ್ಯಂಡ್ ಸನ್ಸ್ನ ಶ್ರೀ ಮರಿಯಮ್ಮಾದೇವಿ, ಮದ್ರಾಸ್ ಸ್ಟ್ರೀಟ್ನ ಶ್ರೀಮುತ್ತು ಮರಿಯಮ್ಮ, ಫಿಶ್ ಮಾರ್ಕೆಟ್ನ ಶ್ರೀ ಮಹಾಮಾತಾ ಕುಂತಿಮಾತಾ, ತೆಲುಗು ಕಾಲೋನಿಯ ಶ್ರೀ ಮರಿಯಮ್ಮಾ–ದುರ್ಗಮ್ಮಾ ಹಾಗೂ ಆರ್.ಎಲ್.ಲೈನ್ನ ಶ್ರೀ ತುಲಕಂತಮ್ಮಾದೇವಿಯ ಉತ್ಸವ ಮೂರ್ತಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.
ಉತ್ತರ ಕ್ಷೇತ್ರದ ಶಾಸಕ ಆಸೀಫ್ ಸೇಠ್ ಅವರು ನಂದಿ ಬೈಲಿನ ಮೇಲೆ ವಿರಾಜಮಾನಳಾಗಿ ಆಗಮಿಸಿದ ಫಿಶ್ ಮಾರ್ಕೆಟ್ನ ಶ್ರೀ ಮಹಾಮಾತಾ ಕುಂತಿಮಾತೆಗೆ ಮಾಲಾರ್ಪಣೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ದಂಡು ಮಂಡಳಿಯ ಮಾಜಿ ಉಪಾಧ್ಯಕ್ಷ ರಿಝಾನ್ ಬೇಪಾರಿ, ಅಲ್ಲೇದ್ದೀನ್ ಕಿಲ್ಲೇದಾರ, ಡಾ.ಮದನ್ ಡೊಂಗರೆ, ಸಾಝೀದ್ ಶೇಖ್, ವಿಕ್ರಮ ಪುರೋಹಿತ್, ನಿರಂಜನಾ ಅಷ್ಟೇಕರ, ಅರಬಿಯಾ ಧಾರವಾಡಕರ ಹಾಗೂ ಡಾ. ರಾಹೀಲಾ ಶೇಖ್ ಸೇರಿದಂತೆ ಹಲವು ಮುಖಂಡರು ದೇವಿಯರ ಉತ್ಸವ ಮೂರ್ತಿಗಳನ್ನು ಭಕ್ತಿಭಾವದಿಂದ ಸ್ವಾಗತಿಸಿದರು.ಮೆರವಣಿಗೆಯುದ್ದಕ್ಕೂ ಭಕ್ತರ ಸಂಭ್ರಮ ಮೇಳೈಸಿತ್ತು. ವೇದಿಕೆಯಲ್ಲಿ ನೃತ್ಯ ಹಾಗೂ ಗಾಯನ ಕಾರ್ಯಕ್ರಮಗಳು ಗಮನ ಸೆಳೆದರೆ, ದೇವಿಯ ರಥದ ಮುಂಭಾಗದಲ್ಲಿ ಅಸುರರ ಪ್ರತಿಕೃತಿಗಳೊಂದಿಗೆ ಭಕ್ತರು ನೃತ್ಯ ಮಾಡುವ ಮೂಲಕ ಉತ್ಸವಕ್ಕೆ ಮತ್ತಷ್ಟು ಮೆರುಗು ನೀಡಿದರು.
ಸೀಮೋಲ್ಲಂಘನೆಗೆ ವಿಶಿಷ್ಟ ಮೆರುಗು
ಕ್ಯಾಂಪ್ನ ಸಂತ ಕ್ಸೇವಿಯರ್ ಶಾಲೆ ಸಮೀಪದ ವಿದ್ಯಾನಿಕೇತನ ಮೈದಾನದಲ್ಲಿ ನಡೆದ ಸೀಮೋಲ್ಲಂಘನ ಆಚರಣೆಯು ದಸರಾ ಉತ್ಸವದ ಪ್ರಮುಖ ಆಕರ್ಷಣೆ. ಗಡಿ ದಾಟುವ ಸಂಕೇತದೊಂದಿಗೆ ನಡೆಯುವ ಈ ವಿಶಿಷ್ಟ ಆಚರಣೆಗೆ ಧಾರ್ಮಿಕ ನಂಬಿಕೆಯ ಜತೆಗೆ ಜನಪದ ಸಂಪ್ರದಾಯದ ಮೆರುಗು ಇದೆ. ವಯೋಮಾನದ ಭೇದವಿಲ್ಲದೆ ವಿವಿಧ ವರ್ಗದ ಜನರು ಸೀಮೋಲ್ಲಂಘನದಲ್ಲಿ ಪಾಲ್ಗೊಂಡರು.
ಆಚರಣೆಯ ಪ್ರಮುಖ ವಿಶೇಷತೆ ಆಪ್ತಿ ಮರದ ಎಲೆಗಳು. ಆಪ್ತಿ ಎಲೆಗಳನ್ನು ಬಂಗಾರದ ಪ್ರತೀಕವೆಂದು ಭಾವಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯ. ಹೀಗಾಗಿ, ಸೀಮೋಲ್ಲಂಘನದ ಸಂದರ್ಭದಲ್ಲಿ ಆಪ್ತಿ ಎಲೆಗಳನ್ನು ಪಡೆಯಲು ಜನರು ಉತ್ಸಾಹದಿಂದ ಮುಗಿಬೀಳುತ್ತಾರೆ. ಎಲೆಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡು ನಾವು ನೀವೂ ಬಂಗಾರದಂಗೆ ಇರೋಣ ಎಂದು ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ.ಸೀಮೋಲ್ಲಂಘನದ ಅಂಗವಾಗಿ ಬೆಳಗಾವಿಯ ಪಾಟೀಲರ ನೇತೃತ್ವದಲ್ಲಿ ವಿಶೇಷ ಪೂಜೆ ನೆರವೇರಿತು. ಬಳಿಕ ವೆಂಕಟರಮಣ, ಮಾರುತಿ, ಜ್ಯೋತಿಬಾ ಸೇರಿದಂತೆ ವಿವಿಧ ದೇವರ ಪಲ್ಲಕ್ಕಿಗಳು ವಿದ್ಯಾನಿಕೇತನ ಮೈದಾನಕ್ಕೆ ಆಗಮಿಸಿದವು. ಪಲ್ಲಕ್ಕಿಗಳ ಆಗಮನದಿಂದ ಭಕ್ತರಲ್ಲಿ ಸಂಭ್ರಮ ಹೆಚ್ಚಾಯಿತು.