ನಾಡಹಬ್ಬ ದಸರಾ, ಶರನ್ನವರಾತ್ರಿ ಮಹೋತ್ಸವ ಅಂಗವಾಗಿ ವಿಶ್ವ ಹಿಂದೂ ಪರಿಷತ್ ಹಾಗೂ ಸಾರ್ವಜನಿಕ ವಿಜಯದಶಮಿ ಮಹೋತ್ಸವ ಸಮಿತಿಯಿಂದ ನಗರದಲ್ಲಿ ಬುಧವಾರ ಅದ್ಧೂರಿ, ವೈಭವಯುತವಾಗಿ ಬೃಹತ್ ಶೋಭಾಯಾತ್ರೆ ನೆರವೇರಿತು.
- ಮೆರವಣಿಗೆಯಲ್ಲಿ ಮೊಳಗಿದ ಜಯಘೋಷ । ಪೊಲೀಸ್ ಬಿಗಿ ಭದ್ರತೆ ಜೊತೆಗೆ ಡ್ರೋನ್ ಕಣ್ಗಾವಲು- - -
ಕನ್ನಡಪ್ರಭ ವಾರ್ತೆ ದಾವಣಗರೆನಾಡಹಬ್ಬ ದಸರಾ, ಶರನ್ನವರಾತ್ರಿ ಮಹೋತ್ಸವ ಅಂಗವಾಗಿ ವಿಶ್ವ ಹಿಂದೂ ಪರಿಷತ್ ಹಾಗೂ ಸಾರ್ವಜನಿಕ ವಿಜಯದಶಮಿ ಮಹೋತ್ಸವ ಸಮಿತಿಯಿಂದ ನಗರದಲ್ಲಿ ಬುಧವಾರ ಅದ್ಧೂರಿ, ವೈಭವಯುತವಾಗಿ ಬೃಹತ್ ಶೋಭಾಯಾತ್ರೆ ನೆರವೇರಿತು.
ನಗರದ ಬೇತೂರು ರಸ್ತೆಯ ಶ್ರೀ ವೆಂಕಟೇಶ್ವರ ವೃತ್ತದಲ್ಲಿ ಶೋಭಾಯಾತ್ರೆಗೆ ವಿನೋಬ ನಗರದ ಶ್ರೀ ಜಡೆ ಸಿದ್ದೇಶ್ವರ ಶಿವಯೋಗೀಶ್ವರ ಮಠದ ಶ್ರೀ ಶಿವಾನಂದ ಸ್ವಾಮೀಜಿ ಅವರು ಶ್ರೀ ದುರ್ಗಾ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಪೂಜೆ ಸಲ್ಲಿಸುವ ಮೂಲಕ ಬೃಹತ್ ಶೋಭಾಯಾತ್ರೆಗೆ ಚಾಲನೆ ನೀಡಿದರು.ಸಾವಿರಾರು ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಟಾಪಿಸಿದ್ದರೂ ಡಿಜೆ ಸೌಂಡ್ಸ್ ಬಳಕೆಗೆ ಅನುಮತಿ ಸಿಕ್ಕಿರಲಿಲ್ಲ. ಆದರೆ, ದಸರಾ ಹಬ್ಬದ ಬೃಹತ್ ಶೋಭಾಯಾತ್ರೆಯಲ್ಲಿ ಡಿಜೆ ಸೌಂಡ್ಸ್‌ಗೆ ಅವಕಾಶ ನೀಡಲಾಗಿತ್ತು. ಡಿಜೆ ಮ್ಯೂಸಿಕ್ ಸದ್ದಿಗೆ ಯುವಜನರ ಜಯಘೋಷ, ನೃತ್ಯವು ಭರ್ಜರಿಯಾಗಿತ್ತು. ಭಾರಿ ಸದ್ದಿನಿಂದ ಬರುತ್ತಿದ್ದ ಡಿಜೆ ಅಬ್ಬರದಲ್ಲಿ ಯುವ ಜನರು ಮನಸೋಇಚ್ಛೆ ಧಣಿಯುವಂತೆ ಕುಣಿದರು. ಯುವಕರ ಜೊತೆಗೆ ಜನಪ್ರತಿನಿಧಿಗಳು, ಗಣ್ಯರು, ಹಿರಿಯರು, ಚಿಕ್ಕ ಮಕ್ಕಳೂ ಸಹ ಹೆಜ್ಜೆ ಹಾಕುವ ಮೂಲಕ ಶೋಭಾಯಾತ್ರೆ ಸಂಭ್ರಮ ಹೆಚ್ಚಿಸಿದರು.
ಶೋಭಾಯಾತ್ರೆ ಮಾರ್ಗದ ಉದ್ದಕ್ಕೂ ಎರಡೂ ಬದಿಗಳ ಕಟ್ಟಡಗಳ ಮೇಲಿದ್ದ ಜನರು ಪುಷ್ಪವೃಷ್ಠಿ ಮಾಡುವ ಮೂಲಕ ಶ್ರೀ ದುರ್ಗಾಮಾತೆ ಯಾತ್ರೆಗೆ ಅದ್ಧೂರಿ ಸ್ವಾಗತ ಕೋರಿದರು. ಕೇಸರಿಮಯವಾಗಿದ್ದ ಶೋಭಾಯಾತ್ರೆ ಉದ್ದಕ್ಕೂ ಜೈಕಾರ, ಜಯಘೋಷಗಳು ಮೊಳಗುತ್ತಿದ್ದವು. ಭಾರತ್ ಮಾತಾ ಕೀ ಜೈ, ಜೈ ಶ್ರೀರಾಮ ಜೈ ಜೈ ಶ್ರೀರಾಮ್, ಛತ್ರಪತಿ ಶಿವಾಜಿ ಮಹಾರಾಜ್ ಕೀ ಜೈ, ಜೈ ಹನುಮಾನ್ ಸೇರಿದಂತೆ ವಿವಿಧ ಘೋಷಣೆಗಳು ಮುಗಿಲು ಮುಟ್ಟುವಂತಿದ್ದವು. ನಾಡಿನ ಸಾಂಸ್ಕೃತಿಕ ನಗರಿ ಮೈಸೂರಿನ ದಸರಾ ನೆನಪಿಸುವಂತೆ ಮಂಗಳ ವಾದ್ಯ, ಜಾನಪದ ಕಲಾ ತಂಡಗಳು, ಮಹಿಳಾ ಡೊಳ್ಳು ಕುಣಿತ, ವೀರಗಾಸೆ, ಸಮಾಳ, ನಂದಿಕೋಲು, ಬೊಂಬೆ ಕುಣಿತ, ನಾಸಿಕ್ ಡೋಲು, ಬ್ಯಾಂಡ್ ವಾದ್ಯಗೋಷ್ಠಿ, ವೇಷಧಾರಿಗಳು, ಸ್ತಬ್ಧಚಿತ್ರಗಳು ಗಮನ ಸೆಳೆದವು.ಭಾರತ ಮಾತೆ, ತಾಯಿ ಭುವನೇಶ್ವರಿ, ವೀರ ರಾಣಿ ಕಿತ್ತೂರು ಚನ್ನಮ್ಮ, ಹೆಡಗೇವಾರ್, ಗೋಲವಾಲ್ಕರ್, ಡಾ. ಬಿ.ಆರ್.ಅಂಬೇಡ್ಕರ್, ಶ್ರೀ ಬಸವೇಶ್ವರ, ಅಕ್ಕ ಮಹಾದೇವಿ, ನಾಡಪ್ರಭು ಕೆಂಪೇಗೌಡ, ವೀರ ಮದಕರಿ ನಾಯಕ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ವೀರ ಮಹಿಳೆ ಒನಕೆ ಓಬವ್ವ, ನಾಡ ದೇವತೆ ಶ್ರೀ ಚಾಮುಂಡೇಶ್ವರಿ, ಶ್ರೀ ದುರ್ಗಾಂಬಿಕಾ ದೇವಿ, ಸ್ವಾಮಿ ವಿವೇಕಾನಂದ, ಛತ್ರಪತಿ ಶಿವಾಜಿ ಮಹಾರಾಜ, ಬಾಲ ಗಂಗಾಧರ ಸ್ವಾಮೀಜಿ, ಶ್ರೀ ಸಿದ್ಧಲಿಂಗ ಸ್ವಾಮೀಜಿ, ಶ್ರೀ ಸಿದ್ದೇಶ್ವರ ಸ್ವಾಮೀಜಿ ಇತರರ ಭಾವಚಿತ್ರ, ಸ್ತಬ್ಧಚಿತ್ರಗಳು, ಚಿಕ್ಕಮಕ್ಕಳ ನವದುರ್ಗೆಯರ ರೂಪದ ಶೋಭಾಯಾತ್ರೆಯ ಸೊಬಗನ್ನು ಹೆಚ್ಚಿಸಿದವು.
ಶ್ರೀ ವೆಂಕಟೇಶ್ವರ ವೃತ್ತದಿಂದ ಆರಂಭವಾದ ಶೋಭಾಯಾತ್ರೆಯು ಬಂಬೂ ಬಜಾರ್, ಚೌಕಿಪೇಟೆ, ಹಗೇದಿಬ್ಬ ವೃತ್ತ, ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನ, ವೀರ ಮದಕರಿ ನಾಯಕ ವೃತ್ತ, ಬಾರ್ ಲೈನ್ ರಸ್ತೆ, ಶ್ರೀ ರೇಣುಕಾ ಮಂದಿರ ರಸ್ತೆ, ಹಳೇ ಪಿ.ಬಿ. ರಸ್ತೆ ಮಾರ್ಗವಾಗಿ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಮುಕ್ತಾಯಗೊಂಡಿತು.ಶೋಭಾಯಾತ್ರೆ ಹಿನ್ನೆಲೆ ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಜಿಲ್ಲಾ ಕೇಂದ್ರದ ಪ್ರಮುಖ ವೃತ್ತ, ದೇವಾಲಯ ಇತರೆಡೆಯೂ ಪೊಲೀಸ್ ಭದ್ರತೆ ಇತ್ತು. ಡ್ರೋನ್ ಮೂಲಕ ಮೆರವಣಿಗೆ ಪ್ರತಿ ಚಲನವಲನದ ಮೇಲೆ ನಿಗಾ ವಹಿಸಲಾಗಿತ್ತು. ಅಂಬುಛೇದನದೊಂದಿಗೆ ನಾಡಹಬ್ಬ ದಸರಾ ಸಂಪನ್ನಗೊಳಿಸಿತು.
ಶಾಸಕರಾದ ಬಿ.ಪಿ.ಹರೀಶ, ಸಮರ್ಥ ಎಂ.ಶಾಮನೂರು, ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ವಿಪ ಮಾಜಿ ಮುಖ್ಯ ಸಚೇತಕ ಡಾ. ಎ.ಎಚ್. ಶಿವಯೋಗಿಸ್ವಾಮಿ, ಮಾಜಿ ಮೇಯರ್‌ಗಳಾದ ಎಸ್.ಟಿ.ವೀರೇಶ, ಬಿ.ಜಿ. ಅಜಯಕುಮಾರ, ದೂಡಾ ಮಾಜಿ ಅಧ್ಯಕ್ಷರಾದ ಯಶವಂತರಾವ್ ಜಾಧವ್, ರಾಜನಹಳ್ಳಿ ಶಿವಕುಮಾರ, ಜಿ.ಎಸ್. ಅನಿತಕುಮಾರ, ಆರ್.ಶಿವಾನಂದ, ಕೆ.ಎಂ. ವೀರೇಶ, ಆರ್.ಎಲ್. ಶಿವಪ್ರಕಾಶ, ಪಾಲಿಕೆ ವಿಪಕ್ಷದ ಮಾಜಿ ನಾಯಕ ಎ.ನಾಗರಾಜ, ಶಿವನಗೌಡ ಟಿ.ಪಾಟೀಲ, ಲೋಕಿಕೆರೆ ನಾಗರಾಜ, ಸಾರ್ವಜನಿಕ ವಿಜಯ ದಶಮಿ ಉತ್ಸವ ಸಮಿತಿ ಅಧ್ಯಕ್ಷ ಎಂ.ಆನಂದ, ವಿನಾಯಕ ರಾನಡೆ, ತಿಪ್ಪೇಸ್ವಾಮಿ, ಶಂಭುಲಿಂಗಪ್ಪ, ಬಿಜೆಪಿ ಎಸ್‌ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ ಟಿ.ದಾಸಕರಿಯಪ್ಪ, ಎನ್.ರಾಜಶೇಖರ ನಾಗಪ್ಪ, ಮೆಳ್ಳೆಕಟ್ಟೆ ಎ.ಇ.ನಾಗರಾಜ, ಧನಂಜಯ ಕಡ್ಲೆಬಾಳು, ಟಿಂಕರ್ ಮಂಜಣ್ಣ, ಕೆ.ಜಿ.ಕಲ್ಲಪ್ಪ, ಗೌತಮ್ ಜೈನ್, ಕೆ.ಬಿ.ಶಂಕರ ನಾರಾಯಣ, ಗಂಗಾಧರ, ಚಂದ್ರಶೇಖರ ಪೂಜಾರ, ಶಂಕರ ಗೌಡ ಬಿರಾದಾರ್, ರುದ್ರಮುನಿ, ಚೇತನಾ ಶಿವಕುಮಾರ, ಭಾಗ್ಯ ಪಿಸಾಳೆ, ಮಂಜುಳಾ ಮಹೇಶ, ಸವಿತಾ ರವಿಕುಮಾರ, ಎಚ್.ಸಿ.ಜಯಮ್ಮ, ರೇಖಾ ಕೃಷ್ಣ ಇತರರು ಇದ್ದರು.- - -
(ಫೋಟೋಗಳಿವೆ.)