ಸಾರಾಂಶ
ಹೊಸದುರ್ಗ: ತಾಲೂಕಿನ ಇತಿಹಾಸ ಪ್ರಸಿದ್ಧ ದೊಡ್ಡ ವಜ್ರ ಪುಣ್ಯ ಕ್ಷೇತ್ರದಲ್ಲಿ ನೆಲೆಸಿರುವ ದಶರಥ ರಾಮೇಶ್ವರ ಸ್ವಾಮಿಯ ರಥೋತ್ಸವ ಬುಧವಾರ ಬೆಳಗಿನ ಜಾವ ಬ್ರಾಹ್ಮೀ ಮುಹೂರ್ತದಲ್ಲಿ ವಿಜೃಂಭಣೆಯಿಂದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಜರುಗಿತು.
ರಥೋತ್ಸವದ ಪೂರ್ವಭಾವಿಯಾಗಿ ಮಂಗಳವಾರ ವೀರಭದ್ರ ಸ್ವಾಮಿಗೆ ಕೆಂಡ ಹಾಗೂ ದಾಸೋಹ ಸೇವೆ ನೆಡೆಯಿತು. ಸಂಜೆ ದಶರಥ ರಾಮೇಶ್ವರ ಸ್ವಾಮಿ ಕಂಚಿವರದ ಸ್ವಾಮಿ ಹಾಗೂ ದಸೂಡಿ ಅಂಜನೇಯ ಸ್ವಾಮಿಗೆ 101 ಎಡೆ ಸೇವೆ ಸಲ್ಲಿಸಲಾಯಿತು.ಭವ್ಯ ಮನೋಹರವಾದ ಪುಣ್ಯಕ್ಷೇತ್ರದಲ್ಲಿ, ಬೆಳಗಿನ ಜಾವ ರಮಣೀಯ ನೋಟದಲ್ಲಿ, ಪ್ರಶಾಂತವಾದ ಪ್ರಕೃತಿ ಮಡಿಲಲ್ಲಿ, ಹಕ್ಕಿ ಪಕ್ಷಿಗಳ ಕಲರವದೊಂದಿಗೆ, ಧಾರ್ಮಿಕತೆ, ಸಾಂಸ್ಕೃತಿಕ ತವರಿನಲ್ಲಿ, ನಾಸ್ತಿಕನನ್ನು ಆಸ್ತಿಕನನ್ನಾಗಿ ಪರಿವರ್ತಿಸುವ ಶಕ್ತಿಯಿತ್ತು. ಪ್ರೇಕ್ಷಣೀಯ ಪುಣ್ಯ ಕ್ಷೇತ್ರದಲ್ಲಿ, ಬುಧವಾರ ಮುಂಜಾನೆ ಬ್ರಾಹ್ಮೀ ಮಹೂರ್ತದಲ್ಲಿ ದೇವಾಲಯದಿಂದ ದಶರಥರಾಮೇಶ್ವರ ಸ್ವಾಮಿಯನ್ನು ರಾಜಗಾಭಿರ್ಯದಿಂದ ವಾದ್ಯಗೋಷ್ಠಿಯೊಂದಿಗೆ ಪರಿವಾರದ ದೇವರುಗಳಾದ ಕಂಚಿ ವರದರಾಜ ಸ್ವಾಮಿ ಹಾಗೂ ದಸೂಡಿ ಅಂಜನೇಯ ಸ್ವಾಮಿಯೊಂದಿಗೆ ಮೆರವಣಿಗೆಯಲ್ಲಿ ಆಗಮಿಸಿ ಅಲಂಕೃತ ರಥವನ್ನು ಏರಿ ಕುಳಿತ ನಂತರ ಕಂಚಿವರದ ಸ್ವಾಮಿ ಹಾಗೂ ಅಂಜನೇಯ ಸ್ವಾಮಿ ರಥಕ್ಕೆ ಮೂರು ಸುತ್ತು ಪ್ರದಕ್ಷಿಣೆ ಹಾಕಿ ನಮಸ್ಕರಿಸಿದ ನಂತರ ಉತ್ಸವಕ್ಕೆ ಚಾಲನೆ ದೊರೆಯಿತು.
ಭಕ್ತರು ರಥ ಎಳೆಯುವ ಮೂಲಕ ಭಕ್ತಿ ಸಮರ್ಪಿಸಿದರು. ಬೃಹತ್ ಹೂಮಾಲೆಗಳಿಂದ ರಥ ಸಿಂಗಾರಗೊಂಡಿತ್ತು. ರಥೋತ್ಸವ ನಂತರ ಕಂಚಿವರದರಾಜ ಸ್ವಾಮಿಗೆ ಮುಳ್ಳು ಪಾದುಕೆ ಸೇವೆ ಜರುಗಿತು.