ಹೊಸಪೇಟೆ: ನಾಡಹಬ್ಬ ಮೈಸೂರ ದಸರಾಗೆ ಪ್ರೇರಣೆಯಾದ ವಿಜಯನಗರ ಸಾಮ್ರಾಜ್ಯದ ನೆಲದಲ್ಲಿ ಮಂಗಳವಾರ ಸಂಜೆ ಸಾವಿರಾರು ಜನರ ಸಮ್ಮುಖದಲ್ಲಿ ದೇವರು ಬನ್ನಿ ಮುಡಿಯುವ ಕಾರ್ಯಕ್ರಮ ತಾಲೂಕಿನ ನಾಗೇನಹಳ್ಳಿ ಗ್ರಾಮದ ಬಳಿಯ ಧರ್ಮದ ಗುಡ್ಡದಲ್ಲಿ ಅತ್ಯಂತ ಅದ್ಧೂರಿ ಹಾಗೂ ಭಕ್ತಿ ಭಾವದಿಂದ ನಡೆಯಿತು.

ವಿಜಯನಗರ ನೆಲದ ಮಹಾನವಮಿ ದಿಬ್ಬ ದಸರಾಗೆ ಪ್ರೇರಣೆ ಆದರೆ ಅದರ ಜತೆಗೆ ಅದೇ ಹಂಪಿಯ ನೆಲದ ಧರ್ಮದ ಗುಡ್ಡದಲ್ಲಿ ದೇವರುಗಳೇ ಬನ್ನಿ ಮುಡಿಯುವುದು ಮತ್ತೊಂದು ವಿಶೇಷ. ಪಲ್ಲಕ್ಕಿಯಲ್ಲಿ ದೇವರುಗಳನ್ನು ಹೊತ್ತು ತಂದು ಮಂಟಪಕ್ಕೆ ಸುತ್ತುವರೆದು ಬನ್ನಿ ಮುಡಿಯೋದೇ ಒಂದು ವಿಶೇಷ. ದೇವರುಗಳೇ ಬನ್ನಿ ಮುಡಿಯುವುದನ್ನು ಕಣ್ತುಂಬಿಕೊಳ್ಳಲು ಜನಸಾಗರವೇ ಹರಿದು ಬಂದಿತ್ತು.

ದಕ್ಷಿಣ ಭಾರತದಲ್ಲೇ ದೇವರ ಬನ್ನಿ ಹೆಸರಿನಲ್ಲಿ ಸ್ಥಳೀಯ ನಾಗೇನಹಳ್ಳಿ ಗ್ರಾಮದ ಬಳಿಯ ಧರ್ಮದ ಗುಡ್ಡದಲ್ಲಿ ಪ್ರತಿವರ್ಷ ನಡೆಯುತ್ತಿರುವುದು ಪವಾಡ. ದೇವರ ಪಲ್ಲಕ್ಕಿ ಹೊತ್ತು ಕಿಮೀ ಗಟ್ಟಲೆ ಭಕ್ತರು ಬರಿಗಾಲಲ್ಲಿ ಓಡುವ ದೃಶ್ಯವೇ ರೋಮಾಂಚನಕಾರಿ. ಇದು ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ.

ತಾಲೂಕಿನ ನಾಗೇನಹಳ್ಳಿ ಬಳಿಯ ಧರ್ಮದ ಗುಡ್ಡದಲ್ಲಿ ಸಾವಿರಾರು ಭಕ್ತರು ದೇವರು ಬನ್ನಿ ಮುಡಿಯೋದನ್ನು ನೋಡೋಕೆ ಸೇರುತ್ತಾರೆ. ವಿಜಯದಶಮಿಯಂದು ಬನ್ನಿ ಮುಡಿಯುವುದು ಸಾಮಾನ್ಯ. ಆದರೆ ಈ ಸ್ಥಳದಲ್ಲಿ ಆಯುಧ ಪೂಜೆಯ ದಿನವೇ ದೇವರ ಬನ್ನಿ ಮುಡಿಯುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದ್ದು, ಅದು ಈಗಲೂ ಮುಂದುವರಿದಿದೆ. ವಿಜಯನಗರ ಸಾಮ್ರಾಜ್ಯದ ಕಾಲದಲ್ಲೇ ಹಂಪಿ ಪ್ರದೇಶದಲ್ಲಿ ದಸರಾ ಹಬ್ಬ ವಿಜೃಂಭಣೆಯಿಂದ ಆಚರಿಸಲಾಗುತಿತ್ತು. ಆ ಪರಂಪರೆ ಈಗಲೂ ವಾಲ್ಮೀಕಿ ನಾಯಕ ಸಮಾಜ ಮುಂದುವರೆಸಿಕೊಂಡು ಬರುತ್ತಿರುವುದು ವಿಶೇಷವಾಗಿದೆ.

ಹೊಸಪೇಟೆ ನಗರದ ಬಾಣದಕೇರಿ, ಉಕ್ಕಡಕೇರಿ, ಚಿತ್ರಕೇರಿ, ಮ್ಯಾಸಕೇರಿ, ತಳವಾರಕೇರಿ, ಜಂಬಾನಳ್ಳಿ ಕೇರಿ ಸೇರಿದಂತೆ 7 ಕೇರಿಗಳಿಂದ ಹಾಗೂ ತಾಲೂಕಿನ ಕಮಲಾಪುರ, ನಾಗೇನಹಳ್ಳಿ ಗ್ರಾಮಗಳಿಂದ 25ಕ್ಕೂ ಹೆಚ್ಚು ಶಕ್ತಿ ದೇವತೆಗಳ ಪಲ್ಲಕ್ಕಿ ಹೊತ್ತ ಭಕ್ತಾಧಿ,ಆಯುಧ ಪೂಜೆ ದಿನವೇ ಧರ್ಮದ ಗುಡ್ಡಕ್ಕೆ ಆಗಮಿಸಿ ಚನ್ನಬಸವೇಶ್ವರ ದೇವಸ್ಥಾನ ಹಾಗೂ ನಿಜಲಿಂಗಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಧರ್ಮದ ಗುಡ್ಡದ ಮುಂದಿರುವ ಬನ್ನಿ ಮಹಾಂಕಾಳಿ ಮರಕ್ಕೆ ಪೂಜೆ ಸಲ್ಲಿಸುವ ಮೂಲಕ ಬನ್ನಿ ಮುಡಿಯುವುದೇ ವಿಶೇಷ. ದೇವರು ಬನ್ನಿ ಮುಡಿಯುವುದನ್ನು ನೋಡಲು ಹೊಸಪೇಟೆ, ಕಮಲಾಪುರ, ನಾಗೇನಹಳ್ಳಿ ಸೇರಿದಂತೆ ಮುತ್ತಮುತ್ತಲ ಗ್ರಾಮಗಳಿಂದ ಮಹಿಳೆಯರು, ಮಕ್ಕಳು, ವೃದ್ದರು ಎನ್ನದೇ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುವುದು ಇಲ್ಲಿನ ಮತ್ತೊಂದು ವಿಶೇಷವಾಗಿದೆ.


ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಆನಂದ್ ಸಿಂಗ್, ಸಮಾಜ ಸೇವಕಿ ರಶ್ಮಿ ಹಿಟ್ನಾಳ್, ನಗರಸಭೆ ಅಧ್ಯಕ್ಷ ಎನ್‌.ರೂಪೇಶ್ ಕುಮಾರ್, ತಾಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಗುಂಡಿ ರಾಘವೇಂದ್ರ, ಶಾಸಕರ ಪುತ್ರ ಎಚ್.ಆರ್.ಗುರುದತ್ ಸೇರಿದಂತೆ ನಗರಸಭೆ ಸದಸ್ಯರು, ವಾಲ್ಮೀಕಿ ನಾಯಕ ಸಮಾಜ ಸೇರಿದಂತೆ ವಿವಿಧ ಸಮುದಾಯಗಳ ಮುಖಂಡರು ಭಾಗವಹಿಸಿದ್ದರು.