ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ಪಟ್ಟಣದ ಎಲ್ಲ ಸಮುದಾಯಗಳ ಜನರು ಜಾತ್ಯಾತೀತವಾಗಿ ಒಗ್ಗಟ್ಟಿನಿಂದ ಆಚರಿಸುವ ಐತಿಹಾಸಿಕ ಪ್ರಸಿದ್ಧ ಪಟ್ಟಲದಮ್ಮನ ಸಿಡಿಹಬ್ಬಕ್ಕೆ ಶುಕ್ರವಾರ ಬೆಳಗ್ಗೆ ದೇವರ ಪೂಜೆ ಮೂಲಕ ಅದ್ಧೂರಿ ಚಾಲನೆ ನೀಡಲಾಯಿತು.ಪಟ್ಟಣದ ಸುಲ್ತಾನ್ ರಸ್ತೆ ಶ್ರೀ ವಳಗೆರೆ ಹುಚ್ಚಮ್ಮ ಹಾಗೂ ಶ್ರೀ ಪಟ್ಟಲದಮ್ಮ ದೇವರಿಗೆ ಬೆಳಗಿನ ಜಾವದಿಂದಲೇ ವಿವಿಧ ಹೋಮ- ಹವನ ಮತ್ತು ಅಭಿಷೇಕ ಸೇರಿ ಹಲವು ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಪಟ್ಟಣದ ಸೇರಿ ಹಲವು ಗ್ರಾಮಗಳ ಮಹಿಳೆಯರು ತಂಬಿಟ್ಟಿನ ಆರತಿಯೊಂದಿಗೆ ಸರದಿ ಸಾಲಿನಲ್ಲಿ ತೆರಳಿ ಚಿಕ್ಕಮ್ಮ ತಾಯಿ ಮತ್ತು ದೊಡ್ಡಮ್ಮ ತಾಯಿ ದೇವರಿಗೆ ಪೂಜೆ ಸಲ್ಲಿಸಿ ದರ್ಶನ ಪಡೆದರು.
ದೇವಸ್ಥಾನದ ಆವರಣವನ್ನು ಹಸಿರು ತಳಿರು ತೋರಣ ಹಾಗೂ ವಿದ್ಯುತ್ ದೀಪಾಲಂಕಾರದಿಂದ ಶೃಂಗರಿಸಲಾಗಿತ್ತು. ಪ್ರಮುಖ ರಸ್ತೆಗಳಲ್ಲಿ ವಿದ್ಯುತ್ ದೀಪಾಲಂಕಾರ ಹಾಗೂ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಸಾವಿರಾರು ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.ಶುಕ್ರವಾರ ಸಂಜೆ ತಾಲೂಕಿನ ತಮ್ಮಡಹಳ್ಳಿ, ಕ್ಯಾತೇಗೌಡನದೊಡ್ಡಿ, ಮಾರೇಹಳ್ಳಿ, ಪಟ್ಟಣದ ಪೇಟೆ ಬೀದಿ ಸೇರಿ ವಿವಿಧ ಗ್ರಾಮಗಳ ಹಾಗೂ ಪಟ್ಟಣದ ರೈತರು ತಮಟೆ ಹಾಗೂ ಮಂಗಳವಾದ್ಯಗಳೊಂದಿಗೆ ತಮ್ಮ ರಾಸುಗಳನ್ನು ವಿವಿಧ ಬಗೆಯ ಹೂಗಳಿಂದ ಅಲಂಕರಿಸಿ ಕೊಂಡಕ್ಕೆ ಸೌಧೆ ತೆಗೆದುಕೊಂಡು ಹೋಗುವಾಗ ಪೇಟೆ ಬೀದಿ, ಮದ್ದೂರು ರಸ್ತೆ, ಕೋಟೆ ಬೀದಿ ಗಂಗಾಧರೇಶ್ವರಸ್ವಾಮಿ ದೇವಸ್ಥಾನ ಮೂಲಕ ಸಾಗಿದ ಸುಮಾರು 2 ಕೀಮೀ ಉದ್ದದ ರಾಸುಗಳ ಮೆರವಣಿಗೆಗೆ ಜನರು ವಿಶೇಷ ಪೂಜೆ ಸಲ್ಲಿಸಿದರು. ಸಿದ್ಧಾರ್ಥ ನಗರದ ನಿವಾಸಿಗಳು ಸಿಡಿ ಕಟ್ಟುವುದಕ್ಕಾಗಿ ಹಗ್ಗವನ್ನು ತಮಟೆ ವಾದ್ಯಗಳೊಂದಿಗೆ ಮೆರವಣಿಗೆ ಮೂಲಕ ತೆರಳಿ ನೀಡಿದರು. ಸಿಡಿ ಹಬ್ಬದ ಪ್ರಯುಕ್ತ ಘಟ್ಟದ ಮೆರವಣಿಗೆಯು ಪೇಟೆ ಒಕ್ಕಲಿಗೇರಿ ಬೀದಿ, ಸಿದ್ಧಾರ್ಥ ನಗರ, ಕೀರ್ತಿ ನಗರ, ಗಂಗಾಮತಸ್ಥ ಬೀದಿ, ಅಶೋಕನಗರ ದೊಡ್ಡಪಾಲು, ಚಿಕ್ಕಪಾಲು, ಬಸವಲಿಂಗಪ್ಪನಗರ ಮಹಿಳೆಯರು ನಿಗದಿಪಡಿಸಿದ ಸಮಯದಲ್ಲಿ ಘಟ್ಟ ಹೊತ್ತು ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು.
ಪಟ್ಟಣದ ಬಹುತೇಕ ರಸ್ತೆಗಳು, ಪ್ರಮುಖ ಪಟ್ಟಣದ ಪ್ರವೇಶದ್ವಾರಗಳು ಹಾಗೂ ಅನಂತ್ ರಾಂ ವೃತ್ತದ ಬಳಿ ಹೂವಿನ ಮಾದರಿ ವಿದ್ಯುತ್ ದೀಪಾಲಂಕಾರ ಸಾವಿರಾರು ಜನರ ಕಣ್ಮನ ಸೆಳೆಯಿತು.ಗಮನ ಸೆಳೆದ ನೃತ್ಯ:
ಶುಕ್ರವಾರ ರಾತ್ರಿಯಿಡೀ ನಡೆಯುವ ಸಿಡಿ ಬಂಡಿ ಕಟ್ಟುವುದಕ್ಕೆ ಎಲ್ಲ ಸಮುದಾಯಗಳ ಜನರು ಸಂಪ್ರದಾಯದಂತೆ ಸಲಕರಣೆಗಳನ್ನು ನೀಡಿದರು. ಸಿಡಿ ಹಬ್ಬದ ಪ್ರಯುಕ್ತ ಶುಕ್ರವಾರ ರಾತ್ರಿ 8.30ರ ವೇಳೆ ಆರಂಭವಾದ ಘಟ್ಟದ ಮೆರವಣಿಗೆಗೆ ಪಟ್ಟಣದ ಅನಂತ್ ರಾಂ ವೃತ್ತದ ಬಳಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು. ಘಟ್ಟ ಮೆರವಣಿಗೆಯಲ್ಲಿ ಯುವಕರು ತಮಟೆಯ ತಾಳಕ್ಕೆ ಕುಣಿದು ಕುಪ್ಪಳಿಸಿದರು.ಪೊಲೀಸ್ ಸರ್ಪಗಾವಲು:
ಸಿಡಿಹಬ್ಬವನ್ನು ನೋಡಲು ವಿವಿಧ ತಾಲೂಕು ಮತ್ತು ಜಿಲ್ಲೆಗಳಿಂದ ಲಕ್ಷಾಂತರ ಮಂದಿ ಭಕ್ತರು ಆಗಮಿಸುವ ನಿರೀಕ್ಷೆಯಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಅಹಿತರ ಘಟನೆ ನಡೆಯದಂತೆ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಆಳವಡಿಸಲಾಗಿತ್ತು. ಐವರು ಡಿವೈಎಸ್ಪಿ, 16 ಸಿಪಿಐ ಮತ್ತು 50 ಪಿಎಸ್ಐಗಳು, 115 ಎಎಸ್ಐ, 90 ಮಹಿಳಾ ಸಿಬ್ಬಂದಿ ಹಾಗೂ 10 ವಿವಿಧ ತುಕಡಿಗಳ ಸಿಬ್ಬಂದಿ ಸೇರಿ ಸಾವಿರಕ್ಕೂ ಅಧಿಕ ಪೊಲೀಸರನ್ನು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಇ.ಸಿ.ತಿಮ್ಮಯ್ಯ ನೇತೃತ್ವದಲ್ಲಿ ಭದ್ರತೆಗಾಗಿ ನೇಮಿಸಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ದೃಷ್ಟಿಯಿಂದ ಜಿಲ್ಲಾ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಶುಕ್ರವಾರ ರಾತ್ರಿ ಪಟ್ಟಣದ ವಿವಿಧೆಡೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.