ಮಹಾ ಚುನಾವಣೆ : ಉತ್ತರ ಕರ್ನಾಟಕ ಭಾಗದಲ್ಲಿ ಪ್ರಸಕ್ತ ಸಾಲಿನಲ್ಲಿ ಕಬ್ಬು ಕಟಾವಿಗೂ ಕಾರ್ಮಿಕರ ಕೊರತೆ

| Published : Nov 16 2024, 12:37 AM IST / Updated: Nov 16 2024, 12:04 PM IST

ಮಹಾ ಚುನಾವಣೆ : ಉತ್ತರ ಕರ್ನಾಟಕ ಭಾಗದಲ್ಲಿ ಪ್ರಸಕ್ತ ಸಾಲಿನಲ್ಲಿ ಕಬ್ಬು ಕಟಾವಿಗೂ ಕಾರ್ಮಿಕರ ಕೊರತೆ
Share this Article
  • FB
  • TW
  • Linkdin
  • Email

ಸಾರಾಂಶ

ಬೆಳಗಾವಿ, ಬಾಗಲಕೋಟೆ, ವಿಜಯಪುರ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಸಕ್ತ ಸಾಲಿನಲ್ಲಿ ಕಬ್ಬು ನುರಿಸುವ ಹಂಗಾಮು ಆರಂಭವಾಗಿದ್ದು, ಕಬ್ಬು ಕಟಾವಿಗೆ ಕಾರ್ಮಿಕರ ಕೊರತೆ ಎದುರಾಗಿದೆ.

ಶ್ರೀಶೈಲ ಮಠದ

 ಬೆಳಗಾವಿ : ಬೆಳಗಾವಿ, ಬಾಗಲಕೋಟೆ, ವಿಜಯಪುರ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಸಕ್ತ ಸಾಲಿನಲ್ಲಿ ಕಬ್ಬು ನುರಿಸುವ ಹಂಗಾಮು ಆರಂಭವಾಗಿದ್ದು, ಕಬ್ಬು ಕಟಾವಿಗೆ ಕಾರ್ಮಿಕರ ಕೊರತೆ ಎದುರಾಗಿದೆ.

ನೆರೆಯ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಪರಿಣಾಮ ರಾಜ್ಯದಲ್ಲಿ ಕಬ್ಬು ಕಟಾವಿನ ಮೇಲೆ ಬೀರಿದೆ. ಇದರಿಂದಾಗಿ ಕಬ್ಬು ಅರಿಯುವ ಈ ಋತುಮಾನದಲ್ಲಿ ಕಬ್ಬು ಕಟಾವಿಗೆ ಕಾರ್ಮಿಕರ ಕೊರತೆ ಸೃಷ್ಟಿಯಾಗಿದೆ. ಇದರಿಂದಾಗಿ ರೈತರು ತಮ್ಮ ಹೊಲದಲ್ಲಿರುವ ಕಬ್ಬನ್ನು ಹೇಗೆ ಸಾಗಿಸಬೇಕು ಎಂಬ ಚಿಂತೆಯಲ್ಲಿದ್ದಾರೆ. ಒಂದು ವೇಳೆ ಹೊಲದಲ್ಲಿನ ಕಬ್ಬು ಕಟಾವು ತಡವಾದರೆ ಅದರ ಇಳುವರಿ ಕೂಡ ಕಡಿಮೆಯಾಗುವ ಸಾಧ್ಯತೆ ಇದೆ ಎಂಬ ಆತಂಕ ಕೂಡ ಅವರನ್ನು ಕಾಡುತ್ತಿದೆ.

ಇದರ ನಡುವೆ ಕಬ್ಬಿನ ದರ ನಿಗದಿ ವಿಚಾರದಲ್ಲಿ ರೈತ ಮುಖಂಡರು ಹಾಗೂ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ನಡುವಿನ ಹಗ್ಗ ಜಗ್ಗಾಟದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದರೂ, ದರ ನಿಗದಿ ಮಾಡಿಯೇ ಕಾರ್ಖಾನೆ ಆರಂಭಿಸುವಂತೆ ರೈತ ಮುಖಂಡರು ಬೇಡಿಕೆ ಇಟ್ಟಿದ್ದಾರೆ. ಆದರೂ ಈಗಾಗಲೇ ರಾಜ್ಯದ ಬಹುತೇಕ ಸಕ್ಕರೆ ಕಾರ್ಖಾನೆಗಳು ಕಬ್ಬು ನುರಿಸುವ ಹಂಗಾಮು ಆರಂಭಿಸಿವೆ. ಇದರಿಂದಾಗಿ ರೈತರು ನಿಟ್ಟುಸಿರು ಬಿಟ್ಟಿದ್ದರು. ಆದರೆ, ಕಾರ್ಮಿಕರ ಕೊರತೆಯಿಂದಾಗಿ ಕಬ್ಬು ಕಟಾವಿನದ್ದೇ ಸಮಸ್ಯೆ ತಲೆದೋರಿರುವುದು ಕಾರ್ಖಾನೆ ಮತ್ತು ರೈತರನ್ನು ಸಂಕಷ್ಟಕ್ಕೆ ದೂಡುವಂತೆ ಮಾಡಿದೆ. 

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಪರಿಣಾಮ ನೇರವಾಗಿಯೇ ಕಬ್ಬು ಕಟಾವಿನ ಮೇಲೆ ಬಿದ್ದಿದೆ.ಬೆಳಗಾವಿ, ಬಾಗಲಕೋಟೆ, ವಿಜಯಪುರ, ಹಾವೇರಿ ಸೇರಿದಂತೆ 16 ಜಿಲ್ಲೆಗಳಲ್ಲಿನ 76 ಸಕ್ಕರೆ ಕಾರ್ಖಾನೆಗಳು ವಾರ್ಷಿಕ ಸರಾಸರಿ 585.08 ಲಕ್ಷ ಮೆಟ್ರಿಕ್‌ ಟನ್‌ ಕಬ್ಬು ಕಟಾವಿಗೆ ಮಹಾರಾಷ್ಟ್ರದಿಂದಲೇ ಸುಮಾರು 1200 ಕಾರ್ಮಿಕರ ಗುಂಪುಗಳು ಅಕ್ಟೋಬರ್‌ ಎರಡನೇ ವಾರದಲ್ಲೇ ಆಯಾ ಸಕ್ಕರೆ ಕಾರ್ಖಾನೆಗಳಿಗೆ ಬರುತ್ತವೆ.ಟ್ರ್ಯಾಕ್ಟರ್‌ ಮಾಲೀಕರೇ ಕಬ್ಬಿನ ಗ್ಯಾಂಗ್‌ ( 10-15 ಜನ ಕಾರ್ಮಿಕರ ಗುಂಪು) ಅನ್ನು ಕರೆದುಕೊಂಡು ಬರುತ್ತಾರೆ. ಆದರೆ, ಈ ಬಾರಿ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ನಡೆಯುತ್ತಿದೆ. 

ಇದರಿಂದಾಗಿ ಕಬ್ಬು ನುರಿಸುವ ಹಂಗಾಮಿನ ಮೇಲೆ ಪರಿಣಾಮ ಬೀರಿದೆ. ಸಕಾಲಕ್ಕೆ ಕಬ್ಬು ಕಟಾವಿಗೆ ಕಾರ್ಮಿಕರೇ ಸಿಗುತ್ತಿಲ್ಲ. ಕಬ್ಬು ಕಟಾವಿಗೆ ಕಾರ್ಮಿಕರ ಗ್ಯಾಂಗ್‌ ಅನ್ನು ಕರೆತರಲು ಟ್ರ್ಯಾಕ್ಟರ್‌ ಮಾಲೀಕರು ಹರಸಾಹಸ ಪಡುವಂತಾಗಿದೆ. ಕಾರ್ಮಿಕರು ಸಿಗದಿರುವುದು ಕಾರ್ಖಾನೆ ಮತ್ತು ಕಬ್ಬು ಬೆಳೆಗಾರರನ್ನು ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ.ಬೆಳಗಾವಿ ಜಿಲ್ಲೆಯಲ್ಲಿ 28 ಸಕ್ಕರೆ ಕಾರ್ಖಾನೆಗಳಿದ್ದು, 3.10 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿದೆ. 

ಬಾಗಲಕೋಟೆ ಜಿಲ್ಲೆಯಲ್ಲಿ 13 ಸಕ್ಕರೆ ಕಾರ್ಖಾನೆಗಳಿದ್ದು, 1.96 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಮತ್ತು ವಿಜಯಪುರ ಜಿಲ್ಲೆಯಲ್ಲಿ 9 ಸಕ್ಕರೆ ಕಾರ್ಖಾನೆಗಳಿದ್ದು, 1.25 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿದೆ. ಹೀಗೆ ರಾಜ್ಯದಲ್ಲಿ ಒಟ್ಟು 6 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯಲಾದ ಕಬ್ಬು ಕಟಾವಿಗೆ ಸಿದ್ಧಗೊಂಡಿದ್ದರೂ ಕಾರ್ಮಿಕರೇ ಸಿಗದಂತಾಗಿದೆ.ಕಬ್ಬು ಕಟಾವು ಮಾಡುವ ಕಾರ್ಮಿಕರನ್ನು ಮಹಾರಾಷ್ಟ್ರಕ್ಕೆ ಹೋಗಿ ಮೊದಲೇ ಮುಂಗಡ ಹಣ ಪಾವತಿ ಮಾಡಿ ಬುಕ್‌ ಮಾಡುತ್ತಾರೆ. ನಂತರವಷ್ಟೇ ಕಾರ್ಮಿಕರು ಮುಂಗಡ ಪಾವತಿಸಿದವರನ್ನು ಸಂಪರ್ಕಿಸಿ ಅವರು ಸೂಚಿಸಿದ ಜಾಗಕ್ಕೆ ಹೋಗಿ ಕಬ್ಬು ಕಟಾವು ಮಾಡಿ ಕೊಟ್ಟು ಬರುತ್ತಾರೆ. ಇದು ಪ್ರತಿವರ್ಷದಂತೆ ಇರುವ ಪ್ರತೀತಿ. ಆದರೆ, ಈ ಬಾರಿ ಮಹಾರಾಷ್ಟ್ರ ಚುನಾವಣೆ ಬಂದಿರುವುದರಿಂದ ಕಾರ್ಮಿಕರ ಕೊರತೆ ಬಾಧಿಸುತ್ತಿದೆ.

ರಾಜ್ಯದಲ್ಲಿ ಬಹುತೇಕ ಸಕ್ಕರೆ ಕಾರ್ಖಾನೆಗಳು ಈಗಾಗಲೇ ಕಬ್ಬು ನುರಿಸುವ ಹಂಗಾಮು ಆರಂಭವಾಗಿದೆ. ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಬ್ಬು ಕಟಾವಿಗೆ ಕಾರ್ಮಿಕರೇ ಸಿಗುತ್ತಿಲ್ಲ. ಮಹಾರಾಷ್ಟ್ರದಿಂದ ಕಾರ್ಮಿಕರ ಆಗಮನ ವಿಳಂಬವಾಗಿದೆ. ಅಲ್ಲದೇ, ಮಳೆ ಆಗುತ್ತಿರುವುದು ಕೂಡ ಕಬ್ಬು ಕಟಾವಿಗೆ, ವಾಹನ ಸಂಚಾರಕ್ಕೆ ತೊಂದರೆಯಾಗಿದೆ.

-ಸಿದಗೌಡ ಮೋದಗಿ, ರೈತ ಮುಖಂಡರು.