ಜೀವನದಲ್ಲಿ ಅಂದುಕೊಂಡಿರುವುದು ಸಿಗುವುದಿಲ್ಲ, ದೇವರ ಇಚ್ಛೇಯಂತೆ ಪ್ರತಿಯೊಂದು ನಡೆಯುತ್ತದೆ ಎಂಬ ಅರಿವು ಪ್ರತಿಯೊಬ್ಬರಲ್ಲಿರಲಿ. ಜಗತ್ತಿನಲ್ಲಿ ಏನೇ ಆಗಬೇಕೆಂದರು ದೇವರ ಅನುಗ್ರಹ ಬೇಕು. ಎಲ್ಲರೂ ದೇವರ ಇಚ್ಛೆಯಂತೆ ನಡೆಯಬೇಕು ಅಂದಾಗ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ.

ಹುಬ್ಬಳ್ಳಿ:

ದೈವಜ್ಞ ದರ್ಶನ ಕಾರ್ಯಕ್ರಮದ ಅಂಗವಾಗಿ ನಗರಕ್ಕೆ ಆಗಮಿಸಿದ ದೈವಜ್ಞ ಬ್ರಾಹ್ಮಣ ಸಮಾಜದ ಮಠಾಧೀಶರಾದ ಸಚ್ಚಿದಾನಂದ ಜ್ಞಾನೇಶ್ವರಭಾರತಿ ಶ್ರೀ ಹಾಗೂ ಸುಜ್ಞಾನೇಶ್ವರಭಾರತೀ ಶ್ರೀಗಳನ್ನು ಮಂಗಳವಾರ ಸಂಜೆ ಭವ್ಯ ಸ್ವಾಗತದ ಮೂಲಕ ಬರಮಾಡಿಕೊಳ್ಳಲಾಯಿತು.

ನಗರದ ಕುಸುಗಲ್‌ ರಸ್ತೆಯ ಶ್ರೀನಿವಾಸ ಕಲ್ಯಾಣ ಮಂಟಪದ ಸಮೀಪದ ಜಿನ್ನಿಯಾ ಪ್ರೊಜೆಕ್ಟ್ ಬಳಿ ಆಗಮಿಸಿದ ಉಭಯ ಶ್ರೀಗಳನ್ನು ಮಹಿಳೆಯರು ಆರತಿ ಬೆಳಗುವ ಮೂಲಕ ಬರಮಾಡಿಕೊಂಡರು. ನಂತರ ಬೈಕ್‌ ರ‍್ಯಾಲಿ ಮತ್ತು ಪೂರ್ಣ ಕುಂಭದೊಂದಿಗೆ ಶ್ರೀಗಳನ್ನು ಶೋಭಾಯಾತ್ರೆಯ ಮೂಲಕ ಪುರಪ್ರವೇಶ ಮಾಡಲಾಯಿತು.

ಶ್ರೀನಿವಾಸ ಕಲ್ಯಾಣ ಮಂಟಪದಿಂದ ಆರಂಭವಾದ ಅದ್ಧೂರಿ ಮೆರಣಿಗೆಯು ಕೇಶ್ವಾಪುರ, ರಮೇಶ ಭವನ, ಕೆಎಂಸಿಆರ್‌ಐನ ಹಿಂಭಾಗದ ದ್ವಾರದ ಮೂಲಕ ವಿದ್ಯಾನಗರದ ದೈವಜ್ಞ ಭವನಕ್ಕೆ ಆಗಮಿಸಿ ಮುಕ್ತಾಯಗೊಂಡಿತು. ಶೋಭಾಯಾತ್ರೆಯ ಉದ್ದಕ್ಕೂ ಸಮಾಜ ಬಾಂಧವರು ಪುಷ್ಪಗಳನ್ನು ಅರ್ಪಿಸುವ ಮೂಲಕ ಉಭಯ ಶ್ರೀಗಳನ್ನು ಭಕ್ತಿಯಿಂದ ಬರಮಾಡಿಕೊಂಡರು.

ಬಳಿಕ ಮಾತನಾಡಿದ ಸುಜ್ಞಾನೇಶ್ವರ ಭಾರತೀ ಸ್ವಾಮೀಜಿ, ಜೀವನದಲ್ಲಿ ಅಂದುಕೊಂಡಿರುವುದು ಸಿಗುವುದಿಲ್ಲ, ದೇವರ ಇಚ್ಛೇಯಂತೆ ಪ್ರತಿಯೊಂದು ನಡೆಯುತ್ತದೆ ಎಂಬ ಅರಿವು ಪ್ರತಿಯೊಬ್ಬರಲ್ಲಿರಲಿ. ಜಗತ್ತಿನಲ್ಲಿ ಏನೇ ಆಗಬೇಕೆಂದರು ದೇವರ ಅನುಗ್ರಹ ಬೇಕು. ಎಲ್ಲರೂ ದೇವರ ಇಚ್ಛೆಯಂತೆ ನಡೆಯಬೇಕು ಅಂದಾಗ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದರು.

ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಶ್ರೀ ಮಾತನಾಡಿ, ಒಳ್ಳೆಯ ಕೆಲಸ ಮಾಡುವ ಮೂಲಕ ಸಮಾಜದ ಪರಿವರ್ತನೆ ತರಬೇಕು. ನಾನೊಬ್ಬನೆ ಚೆನ್ನಾಗಿದ್ದರೆ ಸಾಲದು ಎಲ್ಲರೂ ಚೆನ್ನಾಗಿರಬೇಕೆಂಬ ಗುಣ ಬೆಳೆಸಿಕೊಳ್ಳಬೇಕು. ತ್ಯಾಗ, ಸತ್ಕರ್ಮಗಳಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಎಂದರು. 82 ಪ್ರದೇಶಗಳಿಗೆ ಭೇಟಿ:

ದೈವಜ್ಞ ಜ್ಞಾನೇಶ್ವರಿ ಪೀಠದ ಮಠಾಧೀಶರು ರಾಜ್ಯಾದ್ಯಂತ 82 ಪ್ರದೇಶಗಳಿಗೆ ಭೇಟಿ ನೀಡಿ ಧಾರ್ಮಿಕ ಪ್ರವಚನ ನೀಡಲಿದ್ದಾರೆ. ಈ ಮೂಲಕ ಸಮಾಜವನ್ನು ಜಾಗೃತಗೊಳಿಸಲು ಸಶಕ್ತಗೊಳಿಸಲಾಗುವುದು ಎಂದು ಮುಖಂಡರು ತಿಳಿಸಿದ್ದಾರೆ.