ಸಮಾವೇಶವನ್ನು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಹಾಗೂ ಶಾಸಕ ಎಚ್.ಆರ್. ಗವಿಯಪ್ಪ ಉದ್ಘಾಟಿಸಲಿದ್ದಾರೆ.
ಹೊಸಪೇಟೆ: ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ಡಿ.29ರಂದು ಬೆಳಗ್ಗೆ 10:30ಕ್ಕೆ ರೈತರ ದಿನಾಚರಣೆ ನಿಮಿತ್ತ ವಿಜಯನಗರ ಜಿಲ್ಲಾ ಮೂರನೇ ವರ್ಷದ ರೈತರ ಸಮಾವೇಶ ಜರುಗಲಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ (ವಾಸುದೇವ ಮೇಟಿ ಬಣ) ಜಿಲ್ಲಾಧ್ಯಕ್ಷ ಸಿ.ಎ. ಗಾಳೆಪ್ಪ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ರೈತರ ಸಮಾವೇಶದ ಸಾನ್ನಿಧ್ಯವನ್ನು ಕೊಟ್ಟೂರುಸ್ವಾಮಿ ಸಂಸ್ಥಾನ ಮಠದ ಜಗದ್ಗುರು ಕೊಟ್ಟೂರು ಬಸವಲಿಂಗ ಸ್ವಾಮೀಜಿ ಹಾಗೂ ಒಪ್ಪತ್ತೇಶ್ವರ ಮಠದ ನಿರಂಜನ ಪ್ರಭುದೇಶಿಕ ಶ್ರೀ ವಹಿಸಲಿದ್ದಾರೆ. ಸಮಾವೇಶವನ್ನು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಹಾಗೂ ಶಾಸಕ ಎಚ್.ಆರ್. ಗವಿಯಪ್ಪ ಉದ್ಘಾಟಿಸಲಿದ್ದಾರೆ. ರೈತ ಸಂಘದ ರಾಜ್ಯಾಧ್ಯಕ್ಷ ವಾಸುದೇವ ಮೇಟಿ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ ಎಂದರು.ಸಮಾವೇಶದಲ್ಲಿ ಕೂಡ್ಲಿಗಿ ಶಾಸಕ ಡಾ.ಎನ್.ಟಿ. ಶ್ರೀನಿವಾಸ, ಹುಡಾ ಅಧ್ಯಕ್ಷ ಎಚ್.ಎನ್. ಮಹಮದ್ ಇಮಾಮ್ ನಿಯಾಜಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಎಲ್.ರಾಣಿ ಸಂಯುಕ್ತ, ಶಾಸಕರಾದ ನೇಮರಾಜನಾಯ್ಕ, ಎಂ.ಪಿ.ಲತಾ, ಕೃಷ್ಣನಾಯ್ಕ, ಶಾಸಕ ಜೆ.ಎನ್. ಗಣೇಶ್, ಮಾಜಿ ಸಚಿವ ಆನಂದ ಸಿಂಗ್, ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಎಸ್ಪಿ ಎಸ್.ಜಾಹ್ನವಿ, ಜಿ.ಪಂ.ಸಿಇಒ ಅಲಿ ಅಕ್ರಂ ಷಾ, ನಗರಸಭೆ ಅಧ್ಯಕ್ಷ ಎನ್.ರೂಪೇಶ್ ಕುಮಾರ್, ಸಹಾಯಕ ಆಯುಕ್ತ ಪಿ.ವಿವೇಕಾನಂದ ಸೇರಿದಂತೆ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.
ಶೋಭಾಯಾತ್ರೆ:ಸಮಾವೇಶದ ಹಿನ್ನಲೆಯಲ್ಲಿ ಡಿ.29 ರಂದು ಬೆಳಗ್ಗೆ 9 ಗಂಟೆಗೆ ನಗರದ ಶ್ರೀವಡಕರಾಯ ದೇವಸ್ಥಾನದಿಂದ ಜಿಲ್ಲಾ ಒಳಾಂಗಣ ಕ್ರೀಡಾಂಗಣದವರೆಗೆ ಭವ್ಯ ಶೋಭಾಯಾತ್ರೆ ಜರುಗಲಿದೆ. ಶೋಭಾಯಾತ್ರೆಯಲ್ಲಿ 101 ಕಳಸ ಹೊತ್ತ ಸುಮಂಗಲಿಯರು, 21 ಎತ್ತಿನ ಬಂಡಿ ಹಾಗೂ ಡೊಳ್ಳು, ಕೋಲಾಟ, ಭಜನೆ, ಹಲಗಿ, ತಾಷಾ, ನಂದಿಕೋಲು, ಕಹಳೆ ಸೇರಿದಂತೆ ವಿವಿಧ ಕಲಾ ತಂಡಗಳು ಭಾಗವಹಿಸಲಿವೆ ಎಂದರು.
ಸಮಾವೇಶದಲ್ಲಿ ಪ್ರತಿ ವರ್ಷ ಡಿ.23 ದಿನವನ್ನು ಸರ್ಕಾರ ರೈತರ ದಿನವನ್ನು ಆಚರಿಸುವ ಜೊತೆಗೆ ಸರ್ಕಾರಿ ರಜೆ ಘೋಷಣೆ ಮಾಡಬೇಕು ಹಾಗೂ ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆ ಆರಂಭಿಸಬೇಕು ಎಂಬ ಹಕ್ಕೋತ್ತಾಯ ಮಂಡಿಸಲಾಗುವುದು. ಸಮಾವೇಶದಲ್ಲಿ ವಿಜಯನಗರ ಜಿಲ್ಲೆಯ ವಿವಿಧ ತಾಲೂಕುಗಳು ಸೇರಿದಂತೆ ಪಕ್ಕದ ಜಿಲ್ಲೆಗಳಿಂದ ಸಾವಿರಾರು ರೈತರು, ರೈತ ಮಹಿಳೆಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.ರೈತ ಸಂಘದ ಮುಖಂಡರಾದ ಸಿ.ರೇಖಾ, ಜಿ.ರಮೇಶ್, ಕೆ.ದುರುಗಪ್ಪ, ಹಾಲೇಶ್, ಪರಶುರಾಮ, ಪವಿತ್ರಾ, ಹನುಮಕ್ಕ, ಕೆಂಚಪ್ಪ ಮತ್ತಿತರರಿದ್ದರು.