ಸಾರಾಂಶ
ದಾಬಸ್‌ಪೇಟೆ: ಧಾರ್ಮಿಕ ಭಾವೈಕ್ಯತೆಯ ತಾಣವಾಗಿರುವ ನಿಜಗಲ್ ಸಿದ್ದರಬೆಟ್ಟದಲ್ಲಿ ಭಾನುವಾರ ಅದ್ಧೂರಿಯಾಗಿ ನಡೆದ ಹನುಮ ಜಯಂತಿಯಲ್ಲಿ ಮೂರು ಸಾವಿರಕ್ಕೂ ಅಧಿಕ ಹನುಮ ಮಾಲಾಧಾರಿಗಳು ಮತ್ತು ಸಾವಿರಾರು ಭಕ್ತರು ಬೆಟ್ಟಕ್ಕೆ ಭೇಟಿ ನೀಡಿ ಹನುಮನ ದರ್ಶನ ಪಡೆಯುವ ಮೂಲಕ ಹನುಮ ಜಯಂತಿ ಶಾಂತಿಯುತವಾಗಿ ನೆರವೇರಿತು.
ಪಾದಯಾತ್ರೆ ಮೂಲಕ ಬೆಂಗಳೂರು, ತುಮಕೂರು, ನೆಲಮಂಗಲ, ತ್ಯಾಮಗೊಂಡ್ಲು ಸೇರಿದಂತೆ ವಿವಿಧ ಸ್ಥಳಗಳಿಂದ ಬಂದಿದ್ದ ಹನುಮ ಮಾಲಾಧಾರಿಗಳು ದಾಬಸ್‌ಪೇಟೆಯ ಉದ್ದಾನೇಶ್ವರ ವೃತ್ತದಲ್ಲಿ ಸೇರಿ ಅಗಲಕುಪ್ಪೆ ಮಾರ್ಗವಾಗಿ ಬೆಟ್ಟಕ್ಕೆ ಹನುಮಾನ್ ಹಾಗೂ ಜೈ ಶ್ರೀರಾಮ್ ಜೈಘೋಷಗಳನ್ನು ಕೂಗುತ್ತಾ ಸಾಗಿದರು. ದಾರಿಯುದ್ದಕ್ಕೂ ಮಹಿಳೆಯರು ಪೂರ್ಣಕುಂಭ ಕಳಶ ಹೊತ್ತು ಸ್ವಾಗತಿಸಿದರು.ಭಜನೆ ಹಾಡು ಕುಣಿತದ ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ವೀರಭದ್ರ ನೃತ್ಯ, ನಂದೀ ಧ್ವಜ, ತಮಟೆ ವಾದ್ಯಗಳು ಮೆರಗು ನೀಡಿದವು. ಸಂಜೆ 4 ಗಂಟೆಗೆ ಬೆಟ್ಟದ ಮೇಲಿನ ಹನುಮ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಭಕ್ತರೆಲ್ಲರೂ ಒಮ್ಮೆಗೆ ಭಜರಂಗಿಗೆ ಹಾಕಿದ ಜೈಕಾರ ಮುಗಿಲು ಮುಟ್ಟಿತು. ಬೆಟ್ಟದ ಮೇಲಿರುವ ಎಲ್ಲಾ 19 ದೇವಾಲಯಗಳನ್ನು ಬಣ್ಣ ಬಣ್ಣದ ಹೂವಿನಿಂದ ಅಲಂಕರಿಸಲಾಗಿತ್ತು,
ವಿದ್ಯುದ್ದೀಪಾಲಂಕಾರ: ಹನುಮ ಜಯಂತಿ ಅಂಗವಾಗಿ 6 ಲಕ್ಷ ರು. ವೆಚ್ಚದಲ್ಲಿ 3562 ಅಡಿ ಎತ್ತರವಿರುವ ಇಡೀ ಬೆಟ್ಟವನ್ನು ಮತ್ತು ಬೆಟ್ಟಕ್ಕೆ ಸಾಗುವ ರಸ್ತೆಯುದ್ದಕ್ಕೂ ಅತ್ಯಾಧುನಿಕ ವಿದ್ಯುತ್ ಲೇಸರ್ ಕಿರಣಗಳಿಂದ ಸ್ಥಳೀಯ ಮುಖಂಡ ಜಗದೀಶ್ ಚೌದರಿ ನೇತೃತ್ವದಲ್ಲಿ ಸಿಂಗರಿಸಲಾಗಿತ್ತು.ಊಟದ ವ್ಯವಸ್ಥೆ: ಹನುಮ ಜಯಂತಿಗೆ ಆಗಮಿಸಿದ್ದ ಭಕ್ತರಿಗೆ ಭರ್ಜರಿ ಊಟ ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಜೊತೆಗೆ ಮಜ್ಜಿಗೆ ನೀಡಿದರು.ನಾಟಕ: ಬೆಟ್ಟದ ತಪ್ಪಲಿನಲ್ಲಿ ಮಧ್ಯಾಹ್ನ ನುರಿತ ಕಲಾವಿದರೂ ನಡೆಸಿಕೊಟ್ಟ ಸಂಪೂರ್ಣ ರಾಮಾಯಣ ನಾಟಕ ಪ್ರದರ್ಶನವನ್ನು ಸಾವಿರಾರು ಜನರು ವೀಕ್ಷಿಸಿ ಕಲಾವಿದರ ಪಾತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಬಿಗಿ ಭದ್ರತೆ: ದಾಬಸ್‌ಪೇಟೆ ಪೋಲೀಸ್ ಠಾಣೆ ಇನ್ಸ್ ಪೆಕ್ಟರ್ ರಾಜು ಅವರ ವಿಶೇಷ ಭದ್ರತೆಯ ತಂಡ ಹನುಮ ಮಾಲಾಧಾರಿಗಳ ಪಾದಯಾತ್ರೆಯ ಉದ್ದಕ್ಕೂ ಮತ್ತು ಬೆಟ್ಟದ ಮೇಲಿರುವ ದರ್ಗಕ್ಕೂ ಸೂಕ್ತ ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.ಪೋಟೋ 1 : ದಾಬಸ್‌ಪೇಟೆಯಲ್ಲಿ ಹನುಮಾಧಾರಿಗಳನ್ನು ಭಕ್ತರು ಹಾಗೂ ಸಾರ್ವಜನಿಕರು ಸ್ವಾಗತಿಸಿದರು.
ಪೋಟೋ 2 : ಹನುಮ ಜಯಂತಿ ಅಂಗವಾಗಿ ದಾಬಸ್‌ಪೇಟೆಯಲ್ಲಿ ಹನುಮಾಧಾರಿಗಳು ಮೆರವಣಿಗೆ ಮಾಡಿದರು.