ಮಧ್ಯ ಕರ್ನಾಟಕದ ಪ್ರತಿಷ್ಟಿತ ಶ್ರೀ ಹಿಂದೂ ಮಹಾ ಗಣಪತಿಯ 9ನೇ ವರ್ಷದ ಶ್ರೀ ಗಣೇಶ ಮೂರ್ತಿಯ ವೈಭವದ ವಿಸರ್ಜನಾ ಶೋಭಾಯಾತ್ರೆ ನಗರದಲ್ಲಿ ಶನಿವಾರ ಅಪಾರ ಭಕ್ತ ಸಾಗರದ ಮಧ್ಯೆ ಅದ್ಧೂರಿಯಾಗಿ ನೆರವೇರಿತು.
- ಸಾವಿರಾರು ಭಕ್ತರು ಭಾಗಿ । ಯಾವುದೇ ಅಹಿತಕರ ಘಟನೆಗಳಿಲ್ಲದೇ ಸಾಂಗವಾಗಿ ಸಾಗಿದ ಗಣೇಶ ಮೆರವಣಿಗೆ
- ಸ್ವಯಂ ಸೇವಕರು, ಪೊಲೀಸರ ಶ್ರಮಕ್ಕೆ ಪ್ರಶಂಸೆ । ಮೆರವಣಿಗೆಗೆ ಕಳೆ ತಂದ ವೇಷಧಾರಿಗಳು, ಕಲಾ ತಂಡಗಳು- - -
ಕನ್ನಡಪ್ರಭ ವಾರ್ತೆ ದಾವಣಗೆರೆಮಧ್ಯ ಕರ್ನಾಟಕದ ಪ್ರತಿಷ್ಟಿತ ಶ್ರೀ ಹಿಂದೂ ಮಹಾ ಗಣಪತಿಯ 9ನೇ ವರ್ಷದ ಶ್ರೀ ಗಣೇಶ ಮೂರ್ತಿಯ ವೈಭವದ ವಿಸರ್ಜನಾ ಶೋಭಾಯಾತ್ರೆ ನಗರದಲ್ಲಿ ಶನಿವಾರ ಅಪಾರ ಭಕ್ತ ಸಾಗರದ ಮಧ್ಯೆ ಅದ್ಧೂರಿಯಾಗಿ ನೆರವೇರಿತು.
ನಗರದ ಹೈಸ್ಕೂಲ್ ಮೈದಾನದಲ್ಲಿ ಹಿಂದೂ ಮಹಾ ಗಣಪತಿ ಮಹಾಸಭಾ ಟ್ರಸ್ಟ್ ಪ್ರತಿಷ್ಟಾಪಿಸಿದ್ದ 9ನೇ ವರ್ಷದ ಶ್ರೀ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಗೆ ಮಹಾಮಂಗಳಾರತಿ ನಂತರ ದಕ್ಷಿಣ ಶಾಸಕ ಸಮರ್ಥ ಎಂ.ಶಾಮನೂರು ಪೂಜೆ ಸಲ್ಲಿಸುವ ಮೂಲಕ ಮಹಾಸಭಾ ಸಂಸ್ಥಾಪಕ ಅಧ್ಯಕ್ಷ ಜೊಳ್ಳಿ ಗುರು, ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ, ಬಿಜೆಪಿ ಹಿರಿಯ ಮುಖಂಡ ಯಶವಂತ ರಾವ್ ಜಾಧವ್ ಇತರರ ಸಮಕ್ಷಮ ಚಾಲನೆ ನೀಡಿದರು.ಸಾರ್ವಜನಿಕ ಹಿಂದೂ ಮಹಾಗಣಪತಿ ಟ್ರಸ್ಟ್‌ನಿಂದ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯ ಶೋಭಾಯಾತ್ರೆಗಾಗಿ ಜಿಲ್ಲಾ ಕೇಂದ್ರದ ಪ್ರಮುಖ ವೃತ್ತ, ರಸ್ತೆಗಳು ಕೇಸರಿ ಧ್ವಜಗಳು, ಬಂಟಿಂಗ್ಸ್, ಬ್ಯಾನರ್‌ಗಳಿಂದ ರಾರಾಜಿಸುತ್ತಿದ್ದವು. ಬೆಳಗ್ಗೆ 11.30ಕ್ಕೆ ಆರಂಭವಾದ ಶೋಭಾಯಾತ್ರೆಯಲ್ಲಿ ಡೊಳ್ಳು, ಚಂಡೆ ವಾದ್ಯ, ನಾಸಿಕ್ ಡೋಲ್, ನಂದಿಕೋಲು, ವೇಷಧಾರಿಗಳು ಸೇರಿದಂತೆ ಶುಭ ವಾದ್ಯ ತಂಡಗಳು, ಜಾನಪದ ಕಲಾ ತಂಡಗಳು ಮೆರಗು ತಂದವು. 6 ಡಿಜೆಗಳ ಸದ್ದಿಗೆ ಕೇಸರಿ ಶಾಲುದಾರಿ ಯುವಕ-ಯುವತಿಯರು ಭರ್ಜರಿ ಸ್ಟೆಪ್ಸ್ ಹಾಕುವ ಮೂಲಕ ಸಂಭ್ರಮಿಸಿದರು.
ಡಿಜೆ ಸಂಗೀತದ ಅಬ್ಬರದಲ್ಲಿ ಯುವಕ-ಯುವತಿಯರು, ಮಹಿಳೆಯರು, ಮಕ್ಕಳು ಪ್ರತ್ಯೇಕವಾಗಿ ಹೆಜ್ಜೆ ಹಾಕಿದರು. ಶಾಲಾ-ಕಾಲೇಜು ಬಿಟ್ಟಿದ್ದರಿಂದ ಸ್ಕೂಲ್ ಬ್ಯಾಗ್ ಸಮೇತವೇ ಅಪಾರ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಬಂದು ಸೇರಿದರು. ಮಹಿಳೆಯರು, ಮಕ್ಕಳು, ಹಿರಿಯರು, ವೃದ್ಧರು ಗಣೇಶನ ಶೋಭಾಯಾತ್ರೆ ಕಣ್ತುಂಬಿಕೊಳ್ಳಲು ಸಾವಿರಾರು ಸಂಖ್ಯೆಯಲ್ಲಿ ಮೆರವಣಿಗೆ ಮಾರ್ಗದ ಬದಿಯಲ್ಲಿ, ಕಟ್ಟಡಗಳ ಮೇಲೆ ನಿಂತು, ದರ್ಶನ ಮಾಡಿ, ನಮಿಸಿದರು. ಮಾರ್ಗದುದ್ದಕ್ಕೂ ಗಣಪನಿಗೆ ಪುಷ್ಪವೃಷ್ಟಿಯಾಯಿತು.ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿ, ವೀರರಾಣಿ ಕಿತ್ತೂರು ಚನ್ನಮ್ಮ ಸೇರಿದಂತೆ ಮಹನೀಯರ ವೇಷಭೂಷಣಗಳನ್ನು ಧರಿಸಿದವರು ಗಮನ ಸೆಳೆದರು. ಸಾಂಪ್ರಾದಾಯಿಕ ಕಲಾ ತಂಡಗಳು, ಜಾನಪದ ಕಲಾ ತಂಡಗಳು, ಚರ್ಮವಾದ್ಯಗಳು, ಮಂಗಳವಾದ್ಯಗಳು ಶೋಭಾಯಾತ್ರೆಯನ್ನು ಮತ್ತಷ್ಟು ಶ್ರೀಮಂತಗೊಳಿಸುವುದು. ಶೋಭಾಯಾತ್ರೆ ಆರಂಭವಾದ ಹೈಸ್ಕೂಲ್ ಮೈದಾನದಿಂದಲೇ ಅಪಾರ ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರೂ, ಮಾರ್ಗದುದ್ದಕ್ಕೂ ಜನಸಾಗರ ಕಂಡುಬಂದಿತು.
ಶ್ರೀ ಜಯದೇವ ವೃತ್ತದಲ್ಲಿ ಕ್ರೇನ್ ಮೂಲಕ ಶ್ರೀ ಗಣಪನಿಗೆ ಪುಷ್ಪವೃಷ್ಟಿ ಮಾಡಿದ್ದು ಗಮನ ಸೆಳೆಯಿತು. ವಿಘ್ನೇಶ್ವರ ಮಹಾರಾಜ ಕೀ ಜೈ ಎಂಬುದೂ ಸೇರಿದಂತೆ ಗಣಪನಿಗೆ ಜೈಕಾರಗಳು ಮೊಳಗಿದವು. ಶೋಭಾಯಾತ್ರೆ ಮಾರ್ಗದುದ್ದಕ್ಕೂ ಸಾರ್ವಜನಿಕರು ಸಂಘ-ಸಂಸ್ಥೆಗಳು, ಭಕ್ತಾದಿಗಳು ಕುಡಿಯುವ ನೀರು, ಪಾನಕ, ತುಂಪು ಪಾನೀಯ, ಉಪಹಾರದ ವ್ಯವಸ್ಥೆ ಮಾಡುವ ಮೂಲಕ ತಮ್ಮ ಭಕ್ತಿ ಸಮರ್ಪಿಸಿದರು. ಹಲವಾರು ಸಂಘ-ಸಂಸ್ಥೆಗಳು, ಭಕ್ತರು ಸ್ವಯಂ ಮುಂದೆ ನಿಂತು ಸೇವಾ ಕಾರ್ಯದಲ್ಲಿ ಮಗ್ನರಾಗಿದ್ದರು. ವಾಹನ, ಜನಸಂಚಾರಕ್ಕೆ ತೊಂದರೆ ಆಗದ ರೀತಿ ಆಯೋಜಕರಿಂದಲೇ ಸ್ವಯಂ ಸೇವಕರ ತಂಡಗಳನ್ನು ರಚಿಸಿದ್ದರಿಂದ ಪೊಲೀಸ್ ಇಲಾಖೆ ಮೇಲಿನ ಕಾರ್ಯ ಒತ್ತಡವೂ ಕಡಿಮೆಯಾಯಿತು.ಎಸ್ಪಿ ಡಾ. ಎಚ್.ಟಿ. ಶೇಖರ್, ಎಎಸ್ಪಿ ಪರಮೇಶ್ವರ ಹೆಗಡೆ ಮಾರ್ಗದರ್ಶನದಲ್ಲಿ ಡಿವೈಎಸ್ಪಿಗಳಾದ ಶರಣಬಸವೇಶ್ವರ ಸೇರಿದಂತೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಪೊಲೀಸರು, ಸ್ವಯಂ ಸೇವಕರು ಸಮನ್ವಯದಿಂದ ಕಾರ್ಯ ನಿರ್ವಹಿಸಿ, ಮೆರವಣಿಗೆ ಸರಾಗವಾಗಿ ಸಾಗುವಂತೆ ನೋಡಿಕೊಂಡರು. ಶೋಭಾಯಾತ್ರೆ ಉದ್ದಕ್ಕೂ ಕೇಸರಿ ಶಾಲುಗಳಿಗೆ ಭರ್ಜರಿ ಬೇಡಿಕೆ ಇತ್ತು. ₹50 ದರಕ್ಕೆ 1ರಂತೆ ಬಡ ವ್ಯಾಪಾರಸ್ಥರು ಕೇಸರಿ ಶಾಲು ಮಾರಾಟ ಮಾಡುವ ಮೂಲಕ ಗಣಪನ ದರ್ಶನದಿಂದ ತಮಗೂ ಒಂದಿಷ್ಟು ದುಡಿಮೆ ಮಾಡಿಕೊಂಡರು.
ಪ್ರಮುಖ ರಸ್ತೆಗಳಲ್ಲಿ ಸರ್ಕಾರಿ, ಖಾಸಗಿ ಬಸ್ಸು, ಸಿಟಿ ಬಸ್ಸು, ಆಟೋ ರಿಕ್ಷಾ, ಸರಕು ಸಾಗಾಣಿಕೆ ವಾಹನ, ಲಘು ವಾಹನಗಳ ಸಂಚಾರಕ್ಕೆ ಮಾರ್ಗ ಬದಲಾವಣೆ ಮಾಡಲಾಗಿತ್ತು. ಶೋಭಾಯಾತ್ರೆ ಹಾದುಹೋಗುವ ತಿರುವುಗಳು, ರಸ್ತೆಗಳಲ್ಲಿ ಯಾವುದೇ ವಾಹನ ಸಂಚಾರಕ್ಕೆ ಅವಕಾಶ ಇಲ್ಲದಂತೆ ಬ್ಯಾರಿಕೇಡ್ ಅಳವಡಿಸಿ, ಪೊಲೀಸ್, ಹೋಂ ಗಾರ್ಡ್ಸ್ ನಿಯೋಜನೆ ಮಾಡಲಾಗಿತ್ತು. ಸಾರ್ವಜನಿಕರಿಗೆ ಸಹಕರಿಸುವಂತೆ ಪೊಲೀಸರು ಮನವಿ ಮಾಡುತ್ತಿದ್ದರು. ಗಣಪತಿ ಯಾತ್ರೆ ಸಾಂಗವಾಗಿ ಸಾಗಿತು.ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎಚ್.ಟಿ.ಶೇಖರ್ ಮಾರ್ಗದರ್ಶನದಲ್ಲಿ ಜಿಲ್ಲಾ ಕೇಂದ್ರಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಪ್ರಮುಖ ವೃತ್ತ, ರಸ್ತೆ, ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಮತ್ತು ಪುರುಷ ಪೊಲೀಸರನ್ನು ನಿಯೋಜಿಸಲಾಗಿತ್ತು. ಸಶಸ್ತ್ರ ಪಡೆಗಳು, ಕೆಎಸ್‌ಆರ್‌ಪಿ ತುಕಡಿ, ಡಿಎಆರ್ ತುಕಡಿಗಳನ್ನು ಭದ್ರತೆಗೆ ವ್ಯವಸ್ಥೆ ಮಾಡಲಾಗಿತ್ತು. ಭದ್ರತಾ ವ್ಯವಸ್ಥೆ ಭಾಗವಾಗಿ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಮೇಲೂ ನಿಗಾ ಇರಿಸಿದ್ದು, ಡ್ರೋನ್ ಕ್ಯಾಮೆರಾಗಳ ಮೂಲಕವೂ ಕಣ್ಗಾವಲು ಇಡಲಾಗಿತ್ತು.
- - -(ಬಾಕ್ಸ್-1)
* ಬಾತಿಕೆರೆಯಲ್ಲಿ ಕ್ರೇನ್ ಸಹಾಯದಿಂದ ಗಣಪತಿ ವಿಸರ್ಜನೆಹೈಸ್ಕೂಲ್ ಮೈದಾನದಿಂದ ಆರಂಭವಾದ ಶೋಭಾಯಾತ್ರೆ ಅಕ್ಕ ಮಹಾದೇವಿ ರಸ್ತೆ, ಚೇತನಾ ಹೋಟೆಲ್, ಅಂಬೇಡ್ಕರ್ ವೃತ್ತ, ಶ್ರೀ ಜಯದೇವ ವೃತ್ತ, ಕುವೆಂಪು ರಸ್ತೆ ಮಾರ್ಗವಾಗಿ ಹಳೆ ಪಿ.ಬಿ. ರಸ್ತೆ ಸೇರಿತು. ಹಳೇ ಪಿ.ಬಿ. ರಸ್ತೆಯ ಮುಖಾಂತರ ಗಾಂಧಿ ವೃತ್ತ, ಹಳೆ ಬಸ್ಸು ನಿಲ್ದಾಣ, ಪಾಲಿಕೆ, ಪಿಜೆ ಬಡಾವಣೆ, ಕಿತ್ತೂರು ಚನ್ನಮ್ಮ ವೃತ್ತ, ತೋಟಗಾರಿಕೆ ಕಚೇರಿ, ಪೂಜಾ ಇಂಟರ್ ನ್ಯಾಷನಲ್ ಹೋಟೆಲ್ ಎದುರು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತ ತಲುಪಿತು. ಅಲ್ಲಿಂದ ಬಾತಿಕೆರೆ ಬಳಿ ತೆರಳಿ, ಕ್ರೇನ್ ಸಹಾಯದಿಂದ ಶ್ರೀ ವಿಘ್ನೇಶ್ವರನ ವಿಸರ್ಜನೆ ಮಾಡಲಾಯಿತು.
- - -(ಬಾಕ್ಸ್-2)
* ಯುವತಿಯರೊಂದಿಗೆ ಅಸಭ್ಯ ವರ್ತನೆ: ಇಬ್ಬರು ವಶಕ್ಕೆಶ್ರೀ ಗಣೇಶನ ಶೋಭಾಯಾತ್ರೆ ಇಲ್ಲಿನ ನಾಯಕರ ಹಾಸ್ಟೆಲ್ ಬಳಿ ಸಾಗುತ್ತಿದ್ದ ವೇಳೆ ಯುವತಿಯರಿಗಾಗಿ ಪ್ರತ್ಯೇಕವಾಗಿ ಮೀಸಲಾಗಿದ್ದ ಡಿಜೆ ಸೌಂಡ್ಸ್ ಬಳಿ ಇಬ್ಬರು ಯುವತಿಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದರು ಎನ್ನಲಾದ ಇಬ್ಬರು ಕಿಡಿಗೇಡಿಗಳನ್ನು ಸಂಘಟಕರು ನೇಮಿಸಿದ್ದ ಸ್ವಯಂ ಸೇವಕರು ಹಿಡಿದು, ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಮಹಿಳೆಯರು, ಯುವತಿಯರು, ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಹಿನ್ನೆಲೆಯಲ್ಲಿ ವಿಶೇಷವಾಗಿ ಹೆಣ್ಣುಮಕ್ಕಳಿಗಾಗಿಯೇ ಪ್ರತ್ಯೇಕ ಡಿಜೆ ಸೌಂಡ್ಸ್ ವ್ಯವಸ್ಥೆ ಮಾಡಿ, ಅಲ್ಲಿ ಸುರಕ್ಷತೆಗಾಗಿ ಹೆಚ್ಚಿನ ಸ್ವಯಂ ಸೇವಕರು, ಪೊಲೀಸರನ್ನು ನಿಯೋಜಿಸಲಾಗಿತ್ತು. ಹೀಗಿದ್ದರೂ ಯುವತಿಯರೊಂದಿಗೆ ಅಸಭ್ಯ ವರ್ತನೆ ತೋರಿದ ಕಿಡಿಗಳನ್ನು ಸ್ವಯಂ ಸೇವಕರು ವಶಕ್ಕೆ ಪಡೆದು ಪೊಲೀಸರಿಗೆ ಹಸ್ತಾಂತರಿಸಿದರು. ಯಾವುದೇ ಸಣ್ಣ ಅಹಿತಕರ ಘಟನೆಗೂ ಆಸ್ಪದ ನೀಡದಂತೆ ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷ ಜೊಳ್ಳಿ ಗುರು ಮತ್ತು ತಂಡ ಹಾಗೂ ಪೊಲೀಸ್ ಅಧಿಕಾರಿ, ಸಿಬ್ಬಂದಿ ಕಾಳಜಿ ಬಗ್ಗೆ ಮಹಿಳೆಯರು, ವಿದ್ಯಾರ್ಥಿನಿಯರು, ಯುವತಿಯರಿಂದ ಮೆಚ್ಚುಗೆ ವ್ಯಕ್ತವಾಯಿತು.
- - --(ಫೋಟೋಗಳಿವೆ)
