Grand Hindu Mahaganapati Immersion
ಯಾದಗಿರಿಯಲ್ಲಿ ಲಕ್ಷಾಂತರ ಭಕ್ತರ ಸಾಕ್ಷಿಯಲ್ಲಿ ಶನಿವಾರ ಸಂಜೆ ಹಿಂದೂ ಮಹಾ ಗಣಪತಿ ವಿಸರ್ಜನೆ । ಬೃಹತ್ ಶೋಭಾಯಾತ್ರೆ
ಕನ್ನಡಪ್ರಭ ವಾರ್ತೆ ಯಾದಗಿರಿಸೆ.14 ರಿಂದ 21 ದಿನಗಳ ಕಾಲ ಭಕ್ತಿಭಾವದ ವೈಭವ ಮೆರೆದ ಯಾದಗಿರಿ ಹಿಂದೂ ಮಹಾ ಗಣಪತಿ ಶನಿವಾರ ಸಂಜೆ ಲಕ್ಷಾಂತರ ಭಕ್ತರ ಸಾಕ್ಷಿಯಲ್ಲಿ ವಿಸರ್ಜನೆಗೊಂಡಿತು. ಭಜರಂಗದಳ ಹಾಗೂ ವಿಶ್ವ ಹಿಂದೂ ಮಹಾ ಪರಿಷತ್ತು ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ಕೂಡ ವಿಜೃಂಭಣೆಯಿಂದ ವಿಸರ್ಜನೆ ನೆರವೇರಿತು.
ಹಿಂದೂ ಮಹಾಗಣಪತಿ ಉತ್ಸವ ಸಮಿತಿ ಮಹಾ ಗಣಪತಿ ವಿಸರ್ಜನೆ ಹಿನ್ನೆಲೆ, ಬೃಹತ್ ಶೋಭಾಯಾತ್ರೆ ನಡೆಯಿತು. ಶನಿವಾರ ಬೆಳಿಗ್ಗೆಯಿಂದಲೇ ಇಡಿ ನಗರವೇ ಸಂಭ್ರಮದಲ್ಲಿ ಮಿಂದೆತ್ತಿತ್ತು. ಉತ್ಸವದ ನಿಮಿತ್ಯ ಇಲ್ಲಿನ ಬಹುತೇಕ ಎಲ್ಲ ಮುಖ್ಯ ರಸ್ತೆಗಳು ಭಗವಾಧ್ವಜಗಳಿಂದ, ಕೇಸರಿ ಬ್ಯಾನರ್ ಗಳಿಂದ ಕಂಗೊಳಿಸುತ್ತಿತ್ತು. ದೀಪಾಲಂಕಾರ ಎಲ್ಲಡೆ ಝಗಮಗಿಸುತ್ತಿತ್ತು.ಉತ್ಸವ ಸಮಿತಿ ಕಾರ್ಯಕರ್ತರಿಂದ ಮಧ್ಯಾಹ್ನ ಗಣೇಶ ವಿಗ್ರಹಕ್ಕೆ ವಿಶೇಷ ಪೂಜೆ ನಡೆಯಿತು. ನಂತರ ಸಂಜೆ 4ರ ಸಮಯಕ್ಕೆ ಬೃಹತ್ ಗಣಪತಿ ವಿಗ್ರಹವನ್ನು ಸ್ಥಾಪಿಸಿದ ವೇದಿಕೆಯಿಂದ ಕ್ರೇನ್ ಮೂಲಕ ಎತ್ತಿ ಶೋಭಾಯಾತ್ರೆಯ ವೇದಿಕೆಯಲ್ಲಿ ಕೂಡಿಸಿದರು. ಈ ದೃಶ್ಯವನ್ನು ಕಂಡು ಸಾವಿರಾರು ಜನರು ಜೈಕಾರ ಹಾಕಿ ಸಂಭ್ರಮಿಸಿದರು.
ಪ್ರತಿವರ್ಷಕ್ಕಿಂತ ಈ ಸಲ ಶೋಭಾಯಾತ್ರೆಗೆ ಅಚ್ಚುಕಟ್ಟಿನ ವ್ಯವಸ್ಥೆ ಮಾಡಲಾಗಿತ್ತು. ನಗರ ಸೇರಿದಂತೆಯೇ ಜಿಲ್ಲೆ, ನೆರೆಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಶೋಭಾಯಾತ್ರೆ ನೋಡಲು ಆಗಮಿಸಿದ್ದರು. ಹೀಗೆ ಆಗಮಿಸಿದ ಎಲ್ಲರಿಗೂ ನಗರದ ಸುಮಾರು 15ರಿಂದ 20 ಕಡೆ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಸಂಜೆಯಾಗುತ್ತಲ್ಲೇ ವಿದ್ಯುತ್ ದೀಪದ ಬೆಳಕಿನಲ್ಲಿ ಗಣೇಶ ವಿಗ್ರಹ ಜತೆ ಶ್ರೀರಾಮ, ತಾಯಿ ಭುವನೇಶ್ವರಿ, ಪರಿಸರ ರಕ್ಷಣೆ ಚಿತ್ರ, ಮೈಸಾಸುರನ ಮೂರ್ತಿ ಹೀಗೆ ಹಲವು ಮೂರ್ತಿಗಳು ಶೋಭಾಯಾತ್ರೆಯಲ್ಲಿ ರಾರಾಜಿಸಿದವು.ಮಹಿಳೆಯಿರಿಗೆ ವಿಶೇಷ ಮತ್ತು ಪ್ರತ್ಯೇಕ ಡಿಜೆ ವ್ಯವಸ್ಥೆ ಮಾಡಿದ್ದರಿಂದ ಸಾವಿರಾರು ಮಹಿಳೆಯರು ತಂಡ, ತಂಡವಾಗಿ ಮೆರಣಿಗೆಯಲ್ಲಿ ನೃತ್ಯ ಮಾಡುವ ಮೂಲಕ ಗಮನ ಸೆಳೆದರು. ನಗರದ ಶ್ರೀ ಮಹರ್ಷಿ ವಾಲ್ಮೀಕಿ ವೃತ್ತ, ನೇತಾಜಿ ಸುಭಾಷ್ಚಂದ್ರ ಭೋಸ್ ವೃತ್ತ, ಲಾಲ್ ಬಹಾದ್ದೂರ್ ಶಾಸ್ತ್ರಿ ವೃತ್ತ, ಹಳೇ ಕೋರ್ಟ ರೋಡ್, ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಕನಕ ವೃತ್ತ, ಜಗಜೀವನರಾಂ ವೃತ್ತ (ಹಿರೇ ಅಗಸಿ) ವೀರಶೈವ ಕಲ್ಯಾಣ ಮಂಟಪ, ಗಾಂಧಿ ವೃತ್ತ, ಶಿವಾಜಿ ವೃತ್ತ, ಮೂಲಕ ಮೈಲಾಪುರ ಅಗಸಿಗೆ ಆಗಮಿಸಿ ತಡರಾತ್ರಿ ವಿಸರ್ಜನೆಗಾಗಿ ನಗರದ ಕೆರೆಗೆ ತೆಗೆದುಕೊಂಡು ಹೋಗಲಾಯಿತು.
ಪ್ರತಿ ಸರ್ಕಲ್‌ನಲ್ಲಿ ಸಾವಿರಾರು ಜನರು ರಸ್ತೆ ಬದಿ ನಿಂತು ಶೋಭಾಯಾತ್ರೆ ನೋಡಿ, ಗಣೇಶನ ದರ್ಶನ ಪಡೆದರು. ವಿವಿಧ ವೇಷಧಾರಿ ಕಲಾ ತಂಡಗಳಿಂದ ಮಾರ್ಗದುದ್ದಕ್ಕೂ ಸಂಗೀತದ ನಿನಾದ ಕಳೆಕಟ್ಟಿತ್ತು. ಸುಮಾರು ಒಂದು ಕಿಮೀವರೆಗೂ ಜನಸಾಗರ ನಡುವೆ ಶೋಭಾಯಾತ್ರೆ ಚಲಿಸಿತು. ವಯಸ್ಸಿನ ಹಂಗಿಲ್ಲದೇ ಯುವಕರು, ಮಹಿಳೆಯರು, ಮಕ್ಕಳು, ವಯೋವೃದ್ಧರಾಗಿ ಸಾವಿರಾರು ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಭಾಗವಹಿಸುವ ಮೂಲಕ ಶೋಭಾಯಾತ್ರೆ ಯಶಸ್ಸಿಗೆ ಕಾರಣರಾದರು.ಉತ್ಸವ ಸಮಿತಿ ಸಂಚಾಲಕ ಶಿವಕುಮಾರ ಸುಕಲೂರ, ಉತ್ಸವ ಸಮಿತಿ ಪದಾಧಿಕಾರಿಗಳಾದ ಸಿದ್ದಾಮಪ್ಪ ಅರಕೇರಿ, ಗೌತಮ ಕಾಡೂರ, ಮಲ್ಲಣ್ಣ ಕೊಯಮುತ್ತೂರ, ದೇವೇಂದ್ರಪ್ಪ ಮದ್ದಿನ, ವೀರಜಾ ಪ್ರತಾತಸಿಂಗ್, ಸುಮಾ ಮಂಜುನಾಥ, ರೇಣುಕಾ ಸೆಂಡಗಿ, ಅಂಬಿಕಾ ಮಾಹಮನಿ, ಕಾವೇರಿ ನಾಗೇಶ ಸೇರಿದಂತೆ ಅನೇಕರಿದ್ದರು.
====ಬಾಕ್ಸ್====* ಪೊಲೀಸರಿಂದ ಸೂಕ್ತ ಬಂದೋಬಸ್ತ್
ಗಣಪತಿಯ ಬೃಹತ್ ಶೋಭಾ ಯಾತ್ರೆಯಂಗವಾಗಿ ನಗರದ ಎಲ್ಲೆಡೆ ಸಾವಿರಾರು ಸಂಖ್ಯೆಯಲ್ಲಿ ಪೊಲೀಸರು ಬಂದೋಬಸ್ತ್ ಮಾಡಿದ್ದರು. ಬೆಳಗ್ಗೆನ ಇಲ್ಲಿನ ಸರ್ಕಾರಿ ಪದವಿ ಮಹಾವಿದ್ಯಾಲಯದ ಆವರಣದಲ್ಲಿ ಎಸ್‌ಪಿ ಪೃಥ್ವಿಕ್ ಶಂಕರ್ ಅವರು ಬಂದೋಬಸ್ತಿಗಾಗಿ ಬಂದಿರುವ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಗೆ ರೂಟ್ ಮ್ಯಾಪ್ ಹೇಳಿ ಸೂಕ್ತ ಬಂದೋಬಸ್ತ್ ಬಗ್ಗೆ ಮಾಹಿತಿ ನೀಡಿದರು.ಹೆಚ್ಚುವರಿ ಎಸ್ಪಿ ಧರಣೇಶ, ಡಿವೈಎಸ್ ಪಿಗಳಾದ ಭರತಕುಮಾರ ತಳವಾರ, ಸುರೇಶ ನಾಯಕ, ಸಿಪಿಐ ಶ್ರೀದೇವಿ ಬಿರಾದಾರ, ನಾಡಗೌಡ, ಸಿಪಿಐ ರಮೇಶ ಕಾಂಬಳೆ, ಪಿಎಸ್ ಐ ಮಂಜನಗೌಡ, ವೀರೇಶ, ಗೀತಾ ಭದ್ರಾಪುರ ಸೇರಿದಂತೆಯೇ ಇತರರಿದ್ದರು.
-3ವೈಡಿಆರ್1 ರಿಂದ 3ವೈಡಿಆರ್14 :
ಯಾದಗಿರಿಯಲ್ಲಿ ಶನಿವಾರ ಸಂಜೆ ಹಿಂದೂ ಮಹಾಗಣಪತಿ ವಿಸರ್ಜನೆ ಅಂಗವಾಗಿ ನಡೆದ ಬೃಹತ್ ಶೋಭಾಯಾತ್ರೆಯ ನೋಟ.