ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ವೃತ್ತದಲ್ಲಿ ಹೆಣ್ಣುಮಕ್ಕಳಿಂದ ‘ಮಾರುತಿಗೆ ಆರತಿ’ ಎಂಬ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡು ಭಕ್ತಿ ಸಮರ್ಪಿಸಿದರು. ನಂತರ ಇಲ್ಲಿ ಆಕರ್ಷಕ ಸಿಡಿಮದ್ದಿನ ಪ್ರದರ್ಶನ ಏರ್ಪಡಿಸಲಾಗಿತ್ತು.
ಕನ್ನಡಪ್ರಭ ವಾರ್ತೆ ತುಮಕೂರು
ನಗರದ ಬಿಜಿಎಸ್ ವೃತ್ತದ ನಾಗರಕಟ್ಟೆ ಗಣಪತಿ ದೇವಸ್ಥಾನ ಆವರಣದಲ್ಲಿ ಪ್ರತಿಷ್ಠಾಪಿಸಿರುವ ಹಿಂದೂ ಮಹಾ ಗಣಪತಿಯ 9ನೇ ವರ್ಷದ ಗಣಪತಿಯ ವಿಸರ್ಜನಾ ಮಹೋತ್ಸವ ಶನಿವಾರ ವೈಭವದಿಂದ ನೆರವೇರಿತು. ಶೋಭಾಯಾತ್ರೆಯ ಮಾರ್ಗದುದ್ದಕ್ಕೂ ಸಾವಿರಾರು ಜನ ಪಾಲ್ಗೊಂಡಿದ್ದರು. ಹಿರಿಯರು, ಕಿರಿಯರು, ಮಕ್ಕಳು, ಮಹಿಳೆಯರು ಕಲಾತಂಡಗಳ ನಾದಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಕುಣಿದು ಸಂಭ್ರಮಿಸಿದರು.ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ, ಆದಿಚುಂಚನಗಿರಿ ಮಹಾಸಂಸ್ಥಾನ ಅಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಸೇರಿದಂತೆ ಹಲವು ಗಣ್ಯರು ಹಿಂದೂ ಮಹಾ ಗಣಪತಿಗೆ ಪೂಜೆ ಸಲ್ಲಿಸಿ ಶೋಭಾಯಾತ್ರೆಗೆ ಚಾಲನೆ ನೀಡಿದರು.
ವಿವಿಧ ಮಠಗಳ ಮಠಾಧೀಶರು ಪೂಜೆ ಸಲ್ಲಿಸಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಮಾಜಿ ಸಚಿವರಾದ ಬಸನಗೌಡ ಪಾಟೀಲ್ ಯತ್ನಾಳ್, ಸೊಗಡು ಶಿವಣ್ಣ, ಸ್ವಾಗತ ಸಮಿತಿ ಅಧ್ಯಕ್ಷ ಟಿ.ಬಿ. ಶೇಖರ್, ಬಿಜೆಪಿ ಮುಖಂಡ ಎಸ್.ಪಿ.ಚಿದಾನಂದ್ ಸೇರಿದಂತೆ ಸಮಿತಿ ಸದಸ್ಯರು, ವಿವಿಧ ಸಂಘಸಂಸ್ಥೆಗಳ ಮುಖಂಡರು ಹಾಜರಿದ್ದರು.ಶೋಭಾಯಾತ್ರೆ ಹಿನ್ನೆಲೆಯಲ್ಲಿ ತೆರಳುವ ಮಾರ್ಗದುದ್ದಕ್ಕೂ ಕೇಸರಿ ಬಾವುಟ, ಫ್ಲೆಕ್ಸ್ ಗಳ ಅಲಂಕಾರ ಮಾಡಲಾಗಿತ್ತು. ಕಾರ್ಯಕರ್ತರು ಕೇಸರಿ ಶಾಲು ಧರಿಸಿ ಸಂಭ್ರಮದಿಂದ ಪಾಲ್ಗೊಂಡಿದ್ದರು, ಮೆರವಣಿಗೆಯಲ್ಲಿ 18 ಅಡಿ ಎತ್ತರದ ಗಣಪತಿ ಮೂರ್ತಿ ಗಮನ ಸೆಳೆಯಿತು. ಮಂಗಳವಾದ್ಯ, ಮಂಗಳೂರು ಭಾಗದ ಪ್ರಸಿದ್ಧ ಹುಲಿ ಕುಣಿತ, ಮಕ್ಕಳ ಭಜನಾ ತಂಡ, ಡಿಜೆ, ವಯಲಿನ್ ಚಂಡೆ, ತುಮಕೂರಿನ ಮುತ್ತು ಮಾರಿಯಮ್ಮ ನಗರದ ತಮಟೆ ವಾದ್ಯ, ಭೂಮಿ ಕಲಾ ತಂಡದ ನಾಸಿಕ್ ಡೋಲ್ ಹಾಗೂ ಇತರೆ ಜಾನಪದ ಕಲಾ ತಂಡಗಳ ಆಕರ್ಷಕ ಪ್ರದರ್ಶನ ಮೆರವಣಿಗೆಯ ವೈಭವ ಹೆಚ್ಚಿಸಿತ್ತು.
ಹಿಂದೂ ಮಹಾ ಗಣಪತಿ ವಿಸರ್ಜನಾ ಮಹೋತ್ಸವದ ಶೋಭಾಯಾತ್ರೆಯು ಬಿಜಿಎಸ್ ವೃತ್ತದಿಂದ ಆರಂಭಗೊಂಡು ಲಕ್ಕಪ್ಪ ವೃತ್ತ, ಜೆ.ಸಿ.ರಸ್ತೆ. ಮಂಡಿಪೇಟೆ ವೃತ್ತ, ಸ್ವತಂತ್ರ ಚೌಕ, ಅಶೋಕ ರಸ್ತೆ, ಬಿ.ಜಿ.ಎಸ್ ವೃತ್ತ, ಎಂ ಜಿ ರಸ್ತೆ, ಜೈನ್ ಟೆಂಪಲ್ ರಸ್ತೆ, ರಾಮಪ್ಪ ವೃತ್ತ, ಡಾ.ಬಿ.ಆರ್. ಅಂಬೇಡ್ಕರ್ ರಸ್ತೆ, ಕೋಟೆ ಆಂಜನೇಯ ವೃತ್ತ, ಗಾರ್ಡನ್ ರಸ್ತೆ ಮುಖೇನ ಸಾಗಿತು.ಮಾರುತಿಗೆ ಆರತಿ:
ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ವೃತ್ತದಲ್ಲಿ ಹೆಣ್ಣುಮಕ್ಕಳಿಂದ ‘ಮಾರುತಿಗೆ ಆರತಿ’ ಎಂಬ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡು ಭಕ್ತಿ ಸಮರ್ಪಿಸಿದರು. ನಂತರ ಇಲ್ಲಿ ಆಕರ್ಷಕ ಸಿಡಿಮದ್ದಿನ ಪ್ರದರ್ಶನ ಏರ್ಪಡಿಸಲಾಗಿತ್ತು.ಸ್ವಾಗತ ಸಮಿತಿ ಗೌರವ ಕಾರ್ಯದರ್ಶಿ ಆರ್.ಎಲ್. ರಮೇಶ್‌ಬಾಬು, ಉಪಾಧ್ಯಕ್ಷ ಮಂಜು ಭಾರ್ಗವ್, ಮಂಜೇಶ್, ಮನು ಜಿ., ಗೌರವ ಕಾರ್ಯದರ್ಶಿ ಆರ್.ಕೃಷ್ಣಯ್ಯ, ಸಹ ಕಾರ್ಯದರ್ಶಿ ಡಿ.ಸಿ.ನರಸಿಂಹಮೂರ್ತಿ, ಮಾರಣ್ಣ ಪಾಳೇಗಾರ್, ಖಜಾಂಚಿಟಿ.ವೈ. ಯಶಸ್, ಮುಖಂಡರಾದ ಮೋಹನ್‌ಕುಮಾರ್ ಪಟೇಲ್, ಸಿ.ಆರ್.ಮೋಹನ್‌ಕುಮಾರ್, ಧನಿಯಾಕುಮಾರ್, ಗೋಕುಲ ಮಂಜುನಾಥ್, ಶೀತಕಲ್ ಕೃಷ್ಣಯ್ಯ, ಡಿ.ಭಾನುಪ್ರಕಾಶ್, ರವಿಕುಮಾರ್, ಪರಮೇಶ್, ಬಸವಕುಮಾರ್, ಮಂಜೇಶ್, ಮಹೇಂದ್ರಕುಮಾರ್, ವಸಂತಕುಮಾರ್, ದಿವಾಕರ್ ನಾಯ್ಡು, ಮಧು, ಸೌಮ್ಯ ಮೊದಲಾದವರು ಹಿಂದೂ ಮಹಾ ಗಣಪತಿ ವಿಸರ್ಜನಾ ಮಹೋತ್ಸವದಲ್ಲಿ ಭಾಗವಹಿಸಿದ್ದರು. ರಾತ್ರಿ ಕೆ.ಎನ್.ಎಸ್. ಕಲ್ಯಾಣಿಯಲ್ಲಿ ಗಣಪತಿ ಮೂರ್ತಿ ವಿಸರ್ಜನೆ ಮಾಡಲಾಯಿತು.