ಭದ್ರಾವತಿಯಲ್ಲಿ ಹಿಂದೂ ಗಣಪತಿಯ ಅದ್ಧೂರಿ ವಿಸರ್ಜನೆ

| Published : Sep 06 2025, 01:01 AM IST

ಭದ್ರಾವತಿಯಲ್ಲಿ ಹಿಂದೂ ಗಣಪತಿಯ ಅದ್ಧೂರಿ ವಿಸರ್ಜನೆ
Share this Article
  • FB
  • TW
  • Linkdin
  • Email

ಸಾರಾಂಶ

ವಿನಾಯಕ ಮೂರ್ತಿ ವಿಸರ್ಜನೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ರಾಜಬೀದಿ ಉತ್ಸವ ಮೆರವಣಿಗೆಗೆ ಗುರುವಾರ ಮಧ್ಯಾಹ್ನ ಸುಮಾರು ೧೨.೩೦ರ ಸಮಯದಲ್ಲಿ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ನೇತೃತ್ವದಲ್ಲಿ ಚಾಲನೆ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಭದ್ರಾವತಿ

ನಗರದ ಹೊಸಮನೆ ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ ಪ್ರತಿಷ್ಠಾಪಿಸಲಾಗಿರುವ ೫೩ನೇ ವರ್ಷದ ವಿನಾಯಕ ಮೂರ್ತಿ ವಿಸರ್ಜನೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ರಾಜಬೀದಿ ಉತ್ಸವ ಮೆರವಣಿಗೆಗೆ ಗುರುವಾರ ಮಧ್ಯಾಹ್ನ ಸುಮಾರು ೧೨.೩೦ರ ಸಮಯದಲ್ಲಿ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶಾಸಕ ಬಿ.ಕೆ ಸಂಗಮೇಶ್ವರ್ ನೇತೃತ್ವದಲ್ಲಿ ಚಾಲನೆ ನೀಡಲಾಯಿತು.

ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿ ಅಧ್ಯಕ್ಷ ವಿ.ಕದಿರೇಶ್, ಶಾಸಕರ ಸಹೋದರ ಉದ್ಯಮಿ ಬಿ.ಕೆ ಜಗನ್ನಾಥ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ ಶಿವಕುಮಾರ್ ಮತ್ತು ಹಿರಿಯ ಪುತ್ರ, ಸರ್ಕಾರದ ೫ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಬಿ.ಎಸ್.ಗಣೇಶ್, ನಗರಸಭೆ ಉಪಾಧ್ಯಕ್ಷ ಮಣಿ ಎಎನ್‌ಎಸ್, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ರಿಯಾಜ್, ಸದಸ್ಯರಾದ ಚನ್ನಪ್ಪ, ಕೆ.ಸುದೀಪ್‌ಕುಮಾರ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಕೆ. ಮಂಜುನಾಥ್, ನಗರ ಆಶ್ರಯ ಸಮಿತಿ ಅಧ್ಯಕ್ಷ ಗೋಪಾಲ್, ಮೆಸ್ಕಾಂ ಸಲಹಾ ಸಮಿತಿ ತಾಲೂಕು ಅಧ್ಯಕ್ಷ ಬಸವಂತಪ್ಪ, ಹಿಂದೂ ಮಹಾಸಭಾ-ಹಿಂದೂ ರಾಷ್ಟ್ರ ಸೇನಾ ಶ್ರೀ ವಿನಾಯಕ ಸೇವಾ ಸಮಿತಿ ಪದಾಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳ, ಹಿಂದೂಪರ ಸಂಘಟನೆಗಳ ಮುಖಂಡರು, ವಿವಿಧ ರಾಜಕೀಯ ಪಕ್ಷಗಳ ಪ್ರಮುಖರು, ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳ ಸಮ್ಮುಖ ಮೆರವಣಿಗೆ ಆರಂಭಗೊಂಡಿತು.

ಪ್ರತಿವರ್ಷದಂತೆ ಈ ಬಾರಿ ಸಹ ವೈಭವಯುತವಾಗಿ ವಿಸರ್ಜನಾ ಪೂರ್ವ ರಾಜಬೀದಿ ಉತ್ಸವ ಮೆರವಣಿಗೆ ನಡೆಯಿತು. ನಿರೀಕ್ಷೆಗೂ ಮೀರಿ ಭಕ್ತರು ಪಾಲ್ಗೊಂಡಿದ್ದರು. ಪ್ರತಿಷ್ಠಾಪನೆ ಸ್ಥಳದಿಂದ ಆರಂಭಗೊಂಡ ಮೆರವಣಿಗೆ ಹೊಸಮನೆ ಶಿವಾಜಿ ವೃತ್ತ ತಲುಪಿ ಪುನಃ ಹಿಂದಿರುಗಿ ಹೊಸಮನೆ ಮುಖ್ಯ ರಸ್ತೆಯಲ್ಲಿ ಸಾಗಿತು. ಮಧ್ಯಾಹ್ನ ೨.೩೦ರ ವೇಳೆಗೆ ರಂಗಪ್ಪ ವೃತ್ತ ಸಮೀಪ ಸಾಗಿತು. ಸಂಜೆ ೫ರ ವೇಳೆಗೆ ಬಿ.ಎಚ್ ರಸ್ತೆ, ಅಂಬೇಡ್ಕರ್ ವೃತ್ತ ತಲುಪಿತು.

ಪ್ರಮುಖ ವೃತ್ತಗಳ ದ್ವಾರಬಾಗಿಲುಗಳ ಬಳಿ ಫ್ಲೆಕ್ಸ್, ಬಂಟಿಂಗ್ಸ್, ಕೇಸರಿ ಧ್ವಜ ರಾರಾಜಿಸುತ್ತಿದ್ದವು. ಹೊಸಮನೆ ಮುಖ್ಯ ರಸ್ತೆ, ಡಾ. ರಾಜ್‌ಕುಮಾರ್ ರಸ್ತೆ, ಬಿ.ಎಚ್ ರಸ್ತೆ, ಮಹಾತ್ಮಗಾಂಧಿ ರಸ್ತೆ (ಟಿ.ಕೆ ರಸ್ತೆ) ಸೇರಿ ಪ್ರಮುಖ ರಸ್ತೆಗಳು ಸಂಪೂರ್ಣವಾಗಿ ಕೆಸರಿಮಯವಾಗಿ ಕಂಗೊಳಿಸುತ್ತಿದ್ದವು.

ನಿವಾಸಿಗಳು, ವರ್ತಕರು, ವ್ಯಾಪರಸ್ಥರು ಮನೆ, ಅಂಗಡಿ ಮುಂಗಟ್ಟುಗಳ ಮುಂಭಾಗ ಸ್ವಚ್ಛಗೊಳಿಸಿ ಬಣ್ಣ ಬಣ್ಣದ ರಂಗೋಲಿ ಬಿಡಿಸಿ ವಿನಾಯಕ ಮೂರ್ತಿಯನ್ನು ಅದ್ದೂರಿಯಾಗಿ ಸ್ವಾಗತಿಸಿದರು. ಕೆಲವು ವರ್ತಕರು ಹಾಗು ಸಂಘಟನೆಗಳು ಫಲ-ಪುಷ್ಪಗಳಿಂದ, ಸಿಹಿ ದಿನಸಿಗಳಿಂದ ತಯಾರಿಸಿರುವ ಬೃಹತ್ ಮಾಲೆಗಳನ್ನು ವಿನಾಯಕ ಮೂರ್ತಿಗೆ ಸಮರ್ಪಿಸಿದರು. ವಿನಾಯಕ ಮೂರ್ತಿ ಆಗಮಿಸುತ್ತಿದ್ದಂತೆ ಯುವ ಸಮುದಾಯದವರು ಅಲ್ಲಲ್ಲಿ ರಸ್ತೆಗಳ ಮೇಲೆ ಬೃಹತ್ ಓಂಕಾರ ಚಿತ್ತಾರಗಳನ್ನು ಬಿಡಿಸಿ ಕರ್ಪೂರ ಹಚ್ಚಿ ಸಂಭ್ರಮಿಸಿದರು.

ರಾಜಬೀದಿ ಉತ್ಸವ ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಕಂಸಾಳೆ, ಕೋಲಾಟ, ಗೊಂಬೆ ನೃತ್ಯ, ವೀರಗಾಸೆ, ನಾದಸ್ವರ ಸೇರಿದಂತೆ ವಿವಿಧ ಕಲಾತಂಡಗಳೊಂದಿಗೆ ಮಕ್ಕಳು, ಮಹಿಳೆಯರು, ಯುವಕರು-ಯುವತಿಯರು ಸೇರಿ ಸಾವಿರಾರು ಭಕ್ತರು ಹೆಜ್ಜೆ ಹಾಕಿ ಸಂಭ್ರಮಿಸಿದರು. ವಿವಿಧ ಸಂಘಟನೆಗಳಿಂದ ಅಂಗಡಿಗಳ ಬಳಿ ಅನ್ನಸಂತರ್ಪಣೆ ಕೈಗೊಳ್ಳಲಾಗಿತ್ತು.

ಲಾಡು, ಮಜ್ಜಿಗೆ, ಪಾನಕ ವಿತರಣೆ ಸಹ ನಡೆಯಿತು. ಹಲವು ಸಂಘಟನೆಗಳಿಂದ ವಿಶಿಷ್ಟ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಪ್ರಮುಖ ರಸ್ತೆಗಳನ್ನು ಸಂಪರ್ಕಿಸುವ ಒಳ ರಸ್ತೆಗಳ ಸಂಪರ್ಕ ಬ್ಯಾರಿಕೇಡ್‌ಗಳಿಂದ ಕಡಿತಗೊಳಿಸಲಾಗಿತ್ತು.