ಗಣೇಶ ಚತುರ್ಥಿಯಂದು ನಗರದ ವಿವಿಧೆಡೆ ಸಾರ್ವಜನಿಕ ಸ್ಥಳಗಳಲ್ಲಿ ಸಂಘ-ಸಂಸ್ಥೆಗಳ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗಣಪತಿಗಳಿಗೆ 11 ದಿನಗಳ ಕಾಲ ವಿಶೇಷ ಪೂಜೆ ಸಲ್ಲಿಸಲಾಗಿತ್ತು.

ಕಾರವಾರ:ನಗರದ ವಿವಿಧೆಡೆ ಪ್ರತಿಷ್ಠಾಪಿಸಲಾಗಿದ್ದ ಸಾರ್ವಜನಿಕ ಗಣಪತಿ ಮೂರ್ತಿಗಳನ್ನು 11 ದಿನಗಳ ಕಾಲ ವಿಜೃಂಭಣೆಯಿಂದ ಪೂಜಿಸಿದ ಬಳಿಕ ಗುರುವಾರ ಅದ್ಧೂರಿ ಮೆರವಣಿಗೆಯೊಂದಿಗೆ ಅರಬ್ಬಿ ಸಮುದ್ರದಲ್ಲಿ ವಿಸರ್ಜಿಸಲಾಯಿತು. ಮೆರವಣಿಗೆಯುದ್ದಕ್ಕೂ ಯುವಕ-ಯುವತಿಯರು, ಮಹಿಳೆಯರು ಸಂಭ್ರಮದಿಂದ ಹೆಜ್ಜೆ ಹಾಕಿ ಪಾಲ್ಗೊಂಡಿದ್ದು, ನಗರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.

ಗಣೇಶ ಚತುರ್ಥಿಯಂದು ನಗರದ ವಿವಿಧೆಡೆ ಸಾರ್ವಜನಿಕ ಸ್ಥಳಗಳಲ್ಲಿ ಸಂಘ-ಸಂಸ್ಥೆಗಳ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗಣಪತಿಗಳಿಗೆ 11 ದಿನಗಳ ಕಾಲ ವಿಶೇಷ ಪೂಜೆ ಸಲ್ಲಿಸಲಾಗಿತ್ತು. ಗುರುವಾರ ಮಧ್ಯಾಹ್ನದಿಂದಲೇ ವಿಸರ್ಜನಾ ಮೆರವಣಿಗೆಗೆ ಸಿದ್ಧತೆ ಕೈಗೊಳ್ಳಲಾಗಿತ್ತು.

ಮಾರುತಿ ಗಲ್ಲಿ, ಸುಭಾಸ್ ಸರ್ಕಲ್ ಬಳಿಯ ಆಟೋ ರಿಕ್ಷಾ ಚಾಲಕರು ಮತ್ತು ಮಾಲಕರ ಗಣೇಶೋತ್ಸವ ಸಮಿತಿ, ಕೋಡಿಭಾಗ, ಕಾಜುಭಾಗ, ಸುಂಕೇರಿ ಸೇರಿದಂತೆ ನಗರದ ವಿವಿಧೆಡೆ ಪ್ರತಿಷ್ಠಾಪಿಸಲಾಗಿದ್ದ ಹತ್ತಕ್ಕೂ ಅಧಿಕ ಬೃಹತ್ ಸಾರ್ವಜನಿಕ ಗಣಪತಿ ಮೂರ್ತಿಗಳು ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಸಾಗಿದವು. ಮೆರವಣಿಗೆಯಲ್ಲಿ ಸಾಂಪ್ರದಾಯಿಕ ಢೋಲು ಸೇರಿದಂತೆ ವಿವಿಧ ವಾದ್ಯಗಳು ಗಮನ ಸೆಳೆದವು.

ಜಿಲ್ಲಾಡಳಿತ ಡಿಜೆ ಬಳಕೆಗೆ ನಿಷೇಧ ಹೇರಿದ್ದ ಹಿನ್ನೆಲೆಯಲ್ಲಿ ನಿಯಮಿತ ಶಬ್ದಮಿತಿಯಲ್ಲಿ ಸೌಂಡ್ ಸಿಸ್ಟಂ ಬಳಸಲಾಗಿತ್ತು. ಮೆರವಣಿಗೆ ಸಾಗುವ ಮಾರ್ಗದ ಉದ್ದಕ್ಕೂ ಸಹಸ್ರಾರು ಭಕ್ತರು ನೆರೆದಿದ್ದು, ವಿವಿಧ ಭಾಗಗಳಿಂದ ಆಗಮಿಸಿದ ಗಣಪತಿ ಮೂರ್ತಿಗಳ ದರ್ಶನ ಪಡೆದರು. ಯುವಕ-ಯುವತಿಯರು ಹಾಗೂ ಮಹಿಳೆಯರು ಸಾಂಪ್ರದಾಯಿಕ ಉಡುಗೆ ತೊಟ್ಟು, ಜಯಘೋಷಗಳನ್ನು ಹಾಕುತ್ತಾ ಹಾಡುಗಳಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.

ಸಂಜೆ ಮೆರವಣಿಗೆ ವೇಳೆ ಏಕಾಏಕಿ ವರುಣ ಅಬ್ಬರಿಸಿದ್ದು, ಭಕ್ತರ ಸಂಭ್ರಮಕ್ಕೆ ಮಾತ್ರ ಅಡ್ಡಿಯಾಗಲಿಲ್ಲ. ಛತ್ರಿ ಹಿಡಿದು ಗಣಪತಿಯ ದರ್ಶನ ಪಡೆದ ಜನರು, ಮಳೆಯಲ್ಲಿಯೇ ಮೆರವಣಿಗೆಯಲ್ಲಿ ಸಾಗಿದರು. ಯುವಕರು ಹಾಗೂ ಪುರುಷರು ಮಳೆಯನ್ನು ಲೆಕ್ಕಿಸದೇ ಕುಣಿದು ಕುಪ್ಪಳಿಸುತ್ತಾ ಗಣಪತಿಗೆ ಅರಬ್ಬಿ ಸಮುದ್ರದಲ್ಲಿ ವಿದಾಯ ಹೇಳಿದರು.

ಪೊಲೀಸರಿಂದ ಬಿಗಿ ಬಂದೋಬಸ್ತ್: ಕಾರವಾರ ನಗರದ ಬಹುತೇಕ ಸಾರ್ವಜನಿಕ ಗಣಪತಿಗಳ ವಿಸರ್ಜನೆ 11ನೇ ದಿನವೇ ನಡೆದ ಹಿನ್ನೆಲೆಯಲ್ಲಿ ಜನದಟ್ಟಣೆ ಹೆಚ್ಚಾಗುವ ಸಾಧ್ಯತೆಯಿಂದ ಪೊಲೀಸರು ಕಟ್ಟುನಿಟ್ಟಿನ ಭದ್ರತೆ ಕೈಗೊಂಡಿದ್ದರು. ಮೆರವಣಿಗೆ ಸಾಗುವ ಮಾರ್ಗಗಳಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗದಂತೆ ಪರ್ಯಾಯ ಮಾರ್ಗ ವ್ಯವಸ್ಥೆ ಮಾಡಲಾಗಿತ್ತು. ವಿಸರ್ಜನಾ ಕಾರ್ಯ ಪೂರ್ಣಗೊಳ್ಳುವವರೆಗೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಬಂದೋಬಸ್ತ್ ವಹಿಸಲಾಗಿತ್ತು.