ಒಡಿಶಾದ ಪುರಿ ಜಗನ್ನಾಥ ರಥೋತ್ಸವದ ಮಾದರಿಯಲ್ಲಿ ನಗರದಲ್ಲಿ ಶ್ರೀ ಜಗನ್ನಾಥ ಮಂದಿರ (ನೀಲಾಚಲ್‌ ಧಾಮ್‌), ಶ್ರೀಕೃಷ್ಣ ಚೈತನ್ಯ ಟ್ರಸ್ಟ್‌ ವತಿಯಿಂದ ಆಯೋಜಿಸಿದ್ದ ತೃತೀಯ ವರ್ಷದ ಶ್ರೀ ಜಗನ್ನಾಥ ರಥಯಾತ್ರಾ ಮಹೋತ್ಸವ ಭಾನುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯ ಧಾರ್ಮಿಕ ಸಂಭ್ರಮದೊಂದಿಗೆ ಜರುಗಿತು.

ಕನ್ನಡಪ್ರಭ ವಾರ್ತೆ ಬೀದರ್‌

ಒಡಿಶಾದ ಪುರಿ ಜಗನ್ನಾಥ ರಥೋತ್ಸವದ ಮಾದರಿಯಲ್ಲಿ ನಗರದಲ್ಲಿ ಶ್ರೀ ಜಗನ್ನಾಥ ಮಂದಿರ (ನೀಲಾಚಲ್‌ ಧಾಮ್‌), ಶ್ರೀಕೃಷ್ಣ ಚೈತನ್ಯ ಟ್ರಸ್ಟ್‌ ವತಿಯಿಂದ ಆಯೋಜಿಸಿದ್ದ ತೃತೀಯ ವರ್ಷದ ಶ್ರೀ ಜಗನ್ನಾಥ ರಥಯಾತ್ರಾ ಮಹೋತ್ಸವ ಭಾನುವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯ ಧಾರ್ಮಿಕ ಸಂಭ್ರಮದೊಂದಿಗೆ ಜರುಗಿತು.

ಬೆಳಿಗ್ಗೆ ನಗರದ ರಾಂಪೂರೆ ಕಾಲೋನಿಯ ಶ್ರೀ ಲಕ್ಷ್ಮೀ ಸತ್ಯನಾರಾಯಣ ದೇವಸ್ಥಾನದಲ್ಲಿ ಗೋಪೂಜೆ ನೆರವೇರಿಸುವ ಮೂಲಕ ರಥಯಾತ್ರೆಗೆ ಚಾಲನೆ ನೀಡಲಾಯಿತು. ವೇದಘೋಷ, ಮಂಗಳ ವಾದ್ಯಗಳು ಹಾಗೂ ಪೂಜಾ ವಿಧಿ ವಿಧಾನಗಳ ನಡುವೆ ರಥಯಾತ್ರೆ ಆರಂಭವಾಗಿದ್ದು, ಭಕ್ತರು ‘ಜಗತ್‌ ಕೆ ನಾಥ, ಶ್ರೀ ಜಗನ್ನಾಥ’, ‘ಹರೇ ಕೃಷ್ಣ ಹರೇ ರಾಮ’ ಎಂಬ ಜಯಘೋಷಗಳನ್ನು ಮೊಳಗಿಸುತ್ತಾ ಭಕ್ತಿ ಪರವಶತೆಯಲ್ಲಿ ಹೆಜ್ಜೆ ಹಾಕಿದರು.

ರಥಯಾತ್ರೆಯಲ್ಲಿ ಸಾವಿರಕ್ಕೂ ಅಧಿಕ ಭಕ್ತರು ಪಾಲ್ಗೊಂಡು ನಗರದ ಪ್ರಮುಖ ರಸ್ತೆಗಳಲ್ಲಿ ಬಣ್ಣ ಬಣ್ಣದ ರಂಗೋಲಿ ಮೆರವಣಿಗೆಗೆ ವಿಶೇಷ ಮೆರುಗು ತಂದಿತು. ಮಹಿಳೆಯರು, ಪುರುಷರು, ಯುವಕರು, ಮಕ್ಕಳು ಸೇರಿದಂತೆ ಎಲ್ಲ ವಯೋಮಾನದ ಭಕ್ತರು ಸಂಭ್ರಮದಿಂದ ಭಾಗವಹಿಸಿ ರಥೋತ್ಸವಕ್ಕೆ ಸಾಕ್ಷಿಯಾದರು.

ಪುರಿಯ ಜಗನ್ನಾಥ ಮಂದಿರದ ಮಾದರಿಯಲ್ಲಿ ಅಲಂಕೃತಗೊಂಡ ರಥದಲ್ಲಿ ಭಗವಾನ್‌ ಶ್ರೀ ಜಗನ್ನಾಥ (ಶ್ರೀಕೃಷ್ಣ), ಬಲಭದ್ರ ಹಾಗೂ ಸುಭದ್ರಾ ದೇವಿಯ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿತ್ತು. ರಥವನ್ನು ನಾನಾ ಬಗೆಯ ಬಣ್ಣ ಬಣ್ಣದ ಹೂವುಗಳು, ತೋರಣಗಳು ಹಾಗೂ ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿ ಭಕ್ತರ ಗಮನ ಸೆಳೆಯಿತು. ಭಕ್ತರು ರಥದ ಹಗ್ಗ ಹಿಡಿದು ಎಳೆಯುವ ಮೂಲಕ ಭಕ್ತಿ ಸಮರ್ಪಿಸಿದರು.

ಇಲ್ಲಿನ ಲಕ್ಷ್ಮೀ ಸತ್ಯನಾರಾಯಣ ದೇವಸ್ಥಾನದಿಂದ ಆರಂಭವಾದ ರಥಯಾತ್ರೆ ಕಿತ್ತೂರು ರಾಣಿ ಚೆನ್ನಮ್ಮ ವೃತ್ತ, ಬೊಮ್ಮಗೊಂಡೇಶ್ವರ ವೃತ್ತ, ಬಸವೇಶ್ವರ ವೃತ್ತ, ಭಗತ್‌ಸಿಂಗ್‌ ವೃತ್ತ, ಡಾ. ಬಿಆರ್‌ ಅಂಬೇಡ್ಕರ್‌ ವೃತ್ತ, ಜನವಾಡಾ ರಸ್ತೆ ಮಾರ್ಗವಾಗಿ ಸಂಚರಿಸಿ, ಚಿಕ್‌ಪೇಟೆ ರಿಂಗ್‌ ರಸ್ತೆಯಲ್ಲಿರುವ ಶ್ರೀ ಜಗನ್ನಾಥ ದೇವಸ್ಥಾನ (ನೀಲಾಚಲ್‌ ಧಾಮ್‌) ತಲುಪಿತು.

ಮಾರ್ಗದುದ್ದಕ್ಕೂ ಸಾರ್ವಜನಿಕರು, ವಿವಿಧ ಸಂಘಟನೆಗಳು, ವ್ಯಾಪಾರಸ್ಥರು ಹಾಗೂ ಗಣ್ಯರು ರಥಯಾತ್ರೆಗೆ ಪುಷ್ಪಾರ್ಚನೆ ಮಾಡಿ ಸ್ವಾಗತ ಕೋರಿದರು. ಅನೇಕ ಕಡೆಗಳಲ್ಲಿ ಭಕ್ತರಿಗೆ ಕುಡಿಯುವ ನೀರು, ಪಾನಕ ಹಾಗೂ ಪ್ರಸಾದ ವಿತರಣೆ ವ್ಯವಸ್ಥೆ ಮಾಡಲಾಗಿತ್ತು.

ರಥಯಾತ್ರೆಯುದ್ದಕ್ಕೂ ಭಜನಾ ತಂಡಗಳು ಶ್ರೀಕೃಷ್ಣ ಹಾಗೂ ಜಗನ್ನಾಥನ ಭಜನೆಗಳನ್ನು ಹಾಡಿ ಭಕ್ತಿಭಾವ ಮೂಡಿಸಿದವು. ಕೋಲಾಟ, ಸಾಂಪ್ರದಾಯಿಕ ನೃತ್ಯ, ಡೊಳ್ಳು ತಮಟೆ, ತಾಳಮದ್ದಲೆ ಸೇರಿದಂತೆ ವಿವಿಧ ವಾದ್ಯಗೋಷ್ಠಿಗಳು ಮೆರವಣಿಗೆಗೆ ಮತ್ತಷ್ಟು ಸಾಂಸ್ಕೃತಿಕ ವೈಭವವನ್ನು ನೀಡಿದವು. ಭಕ್ತರು ನೃತ್ಯ ಮಾಡುತ್ತಾ, ಕೀರ್ತನೆಗಳನ್ನು ಹಾಡುತ್ತಾ ರಥದೊಂದಿಗೆ ಸಾಗಿದ್ದು ವಿಶೇಷ ಆಕರ್ಷಣೆಯಾಗಿತ್ತು.

ಒಡಿಶಾದ ವಿಶ್ವವಿಖ್ಯಾತ ಪುರಿ ಜಗನ್ನಾಥ ರಥೋತ್ಸವದ ಪರಂಪರೆಯನ್ನು ಬೀದರ್‌ನಲ್ಲಿಯೂ ಕಳೆದ ಮೂರು ವರ್ಷಗಳಿಂದ ಯಶಸ್ವಿಯಾಗಿ ನಡೆಸಲಾಗುತ್ತಿದೆ. ಈ ಮಹತ್ವದ ಕಾರ್ಯವನ್ನು ಶ್ರೀ ಜಗನ್ನಾಥ ಮಂದಿರ, ಶ್ರೀಕೃಷ್ಣ ಚೈತನ್ಯ ಟ್ರಸ್ಟ್‌ ಮಾಡುತ್ತಿವೆ.

ರಥಯಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್‌ ಇಲಾಖೆ ಸೂಕ್ತ ಬಂದೋಬಸ್ತ್‌ ಕಲ್ಪಿಸಿತ್ತು. ಸ್ವಯಂಸೇವಕರು ಸಂಚಾರ ವ್ಯವಸ್ಥೆ ಹಾಗೂ ಭಕ್ತರ ಅನುಕೂಲಕ್ಕಾಗಿ ಸೇವೆ ಸಲ್ಲಿಸಿದರು. ಮಹೋತ್ಸವದ ಅಂತ್ಯದಲ್ಲಿ ದೇವಸ್ಥಾನದಲ್ಲಿ ಮಹಾಮಂಗಳಾರತಿ ನೆರವೇರಿಸಿ ಸಾವಿರಾರು ಭಕ್ತರಿಗೆ ಮಹಾಪ್ರಸಾದ ವಿತರಿಸಲಾಯಿತು.

ರಥಯಾತ್ರೆಯಲ್ಲಿ ಜೆಡಿಎಸ್ ಮುಖಂಡರಾದ ಸೂರ್ಯಕಾಂತ ನಾಗಮಾರಪಳ್ಳಿ, ರಾಮಕೃಷ್ಣ ಸಾಳೆ, ವಿರಶೆಟ್ಟಿ ಮಣಿಗೆ, ರಾಜಕುಮಾರ ಅಳ್ಳೆ, ಉದ್ಯಮಿ ಸೋಮಶೇಖರ ಪಾಟೀಲ್‌ ಗಾದಗಿ ಮಾತನಾಡಿದರು. ಬಿಜೆಪಿ ಹಿರಿಯ ಮುಖಂಡರು ಈಶ್ವರಸಿಂಗ್ ಠಾಕೂರ್, ಟ್ರಸ್ಟ್‌ ಪ್ರಮುಖರಾದ ಶಿವರಾಮ ಜೋಶಿ, ಅಭಿಷೇಕ ಆನಂದ ಇತರರು ಇದ್ದರು.