ಕನ್ನಡಪ್ರಭ ವಾರ್ತೆ ಬೇಲೂರು

ಪಟ್ಟಣದ ಜೆ.ಪಿ.ನಗರದಲ್ಲಿರುವ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ವೀರಭದ್ರೇಶ್ವರ, ಭದ್ರಕಾಳಿ ಹಾಗೂ ಚೌಡೇಶ್ವರಿ ಅಮ್ಮನವರ 32ನೇ ವರ್ಷದ ಕೆಂಡೋತ್ಸವ ಕಾರ್ಯಕ್ರಮವನ್ನು ಅದ್ಧೂರಿಯಿಂದ ನಡೆಸಲಾಯಿತು.

ಕೆಂಡೋತ್ಸವ ಅಂಗವಾಗಿ ಬೆಳಗ್ಗಿನ ಜಾವವೇ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಗಂಗಾಪೂಜೆ, ಆಲಯ ಪ್ರವೇಶ, ಲಕ್ಷ್ಮೀಪೂಜೆ, ಗಣಪತಿ ಹೋಮ ಸೇರಿ ಹಲವು ಪೂಜಾ ವಿಧಿಗಳು ಶಾಸ್ತ್ರೋಕ್ತವಾಗಿ ನೆರವೇರಿಸಲಾಯಿತು. ನಂತರ ಶಿವಸ್ತುತಿ ಪಠಣದೊಂದಿಗೆ ಶ್ರೀ ವೀರಭದ್ರೇಶ್ವರ ಸ್ವಾಮಿಗೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕಗಳನ್ನು ನೆರವೇರಿಸಿ ದೇವರ ಕೃಪೆಗಾಗಿ ಭಕ್ತರು ಪ್ರಾರ್ಥಿಸಿದರು.

ನವಗ್ರಹ ಹೋಮ, ಮೃತ್ಯುಂಜಯ ಹೋಮ, ರುದ್ರಹೋಮ ಸೇರಿ ವಿವಿಧ ಹೋಮ- ಹವನಗಳನ್ನು ಅರ್ಚಕರು ನೆರವೇರಿಸಿದರು. ನಂತರ ವಿಷ್ಣು ಸಮುದ್ರದಿಂದ ಶ್ರೀ ವೀರಭದ್ರೇಶ್ವರ ಸ್ವಾಮಿ, ಚೌಡೇಶ್ವರಿ ಅಮ್ಮನವರು ಹಾಗೂ ಭದ್ರಕಾಳಿ ಅಮ್ಮನವರ ಉತ್ಸವ ಮೂರ್ತಿಗಳನ್ನು ಭಕ್ತರ ವೀರಗಾಸೆಯೊಂದಿಗೆ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತರಲಾಯಿತು. ಮೆರವಣಿಗೆಯಲ್ಲಿ ಭಕ್ತರು ಜಯಘೋಷಗಳೊಂದಿಗೆ ಭಾಗವಹಿಸಿ ಭಕ್ತಿಭಾವ ಮೆರೆದರು.

ದೇವಾಲಯದ ಮುಂಭಾಗದಲ್ಲಿ ವಿಶೇಷವಾಗಿ ಸಿದ್ಧಪಡಿಸಲಾಗಿದ್ದ ಕೊಂಡಕ್ಕೆ ಪೂಜೆ ಸಲ್ಲಿಸಿದ ಪ್ರಧಾನ ಅರ್ಚಕ ದಿನೇಶ್ ಅವರು ಕೊಂಡೋತ್ಸವಕ್ಕೆ ಚಾಲನೆ ನೀಡಿದರು.


ದೇವರ ಕೃಪೆ ಲಭಿಸಲಿ ಎಂಬ ನಂಬಿಕೆಯಿಂದ ಭಕ್ತರು ಭಾಗವಹಿಸಿ ವಿಶೇಷ ಪೂಜೆಗಳನ್ನು ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯವನ್ನು ಕಾರ್ಜೊಳಿ ಹಿರೇಮಠದ ಶ್ರೀ ಶ್ರೀ ಸದಾಶಿವ ಶಿವಾಚಾರ್ಯ ಮಹಾಸ್ವಾಮೀಜಿ ಹಾಗೂ ಶಿವಮೂರ್ತಿ, ವಿರೂಪಾಕ್ಷ, ಪುರಸಭೆ ಮಾಜಿ ಅಧ್ಯಕ್ಷ ಎ.ಆರ್. ಅಶೋಕ್, ದಿನೇಶ್ ಆರಾಧ್ಯ ಇತರರು ಇದ್ದರು.