ಮಾಗಡಿಯಲ್ಲಿ ಅದ್ಧೂರಿ ಅರಸು ಜಯಂತಿ ಆಚರಣೆ

| Published : Aug 16 2024, 12:48 AM IST

ಸಾರಾಂಶ

ಮಾಜಿ ಸಚಿವ ಎಚ್. ಎಂ. ರೇವಣ್ಣ ಹಾಗೂ ಶಾಸಕ ಎಚ್.ಸಿ.ಬಾಲಕೃಷ್ಣರವರ ಉಪಸ್ಥಿತಿಯಲ್ಲಿ ತಾಲೂಕು ಮಟ್ಟದ ಡಿ. ದೇವರಾಜು ಅರಸುರವರ ಜಯಂತಿ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ

ಕನ್ನಡಪ್ರಭ ವಾರ್ತೆ ಮಾಗಡಿ

ಮಾಜಿ ಸಚಿವ ಎಚ್. ಎಂ. ರೇವಣ್ಣ ಹಾಗೂ ಶಾಸಕ ಎಚ್.ಸಿ.ಬಾಲಕೃಷ್ಣರವರ ಉಪಸ್ಥಿತಿಯಲ್ಲಿ ತಾಲೂಕು ಮಟ್ಟದ ಡಿ. ದೇವರಾಜು ಅರಸುರವರ ಜಯಂತಿ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ ಎಂದು ದೇವರಾಜು ಅರಸು ಸಾಂಸ್ಕೃತಿಕ ವೇದಿಕೆ ತಾಲೂಕು ಅಧ್ಯಕ್ಷ ಹಾಗೂ ಪುರಸಭೆ ಮಾಜಿ ಅಧ್ಯಕ್ಷ ಪಿ.ವಿ. ಸೀತಾರಾಂ ಹೇಳಿದರು.

ಪಟ್ಟಣದ ತಾಲೂಕು ಕಚೇರಿಯಲ್ಲಿ ಡಿ.ದೇವರಾಜು ಅರಸುರವರ ಜನ್ಮ ದಿನಾಚರಣೆ ಅಂಗವಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಆ. 20ರಂದು ಜಿಲ್ಲೆಯಲ್ಲಿ ಅದ್ಧೂರಿಯಾಗಿ ದೇವರಾಜು ಅರಸುರವರ ಜಯಂತಿ ಕಾರ್ಯಕ್ರಮ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮಾಗಡಿ ತಾಲೂಕಿನಲ್ಲಿ ಸಾಂಕೇತಿಕವಾಗಿ ಕಾರ್ಯಕ್ರಮ ನಡೆಯಲಿದ್ದು, ಜೊತೆಗೆ ಬ್ರಹ್ಮಶ್ರೀ ನಾರಾಯಣ ಗುರೂಜಿ ಜಯಂತಿ ಕೂಡ ಒಟ್ಟಿಗೆ ಆಚರಿಸಲು ತೀರ್ಮಾನಿಸಲಾಗಿದೆ. ದೇವರಾಜ ಅರಸು ಒಬ್ಬ ಜಾತ್ಯತೀತ ವ್ಯಕ್ತಿಯಾಗಿದ್ದು, ಸಾಮಾಜಿಕ ನ್ಯಾಯದ ಹರಿಕಾರರಾಗಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದ ಕೀರ್ತಿ ಅವರಿಗೆ ಸಲ್ಲುತ್ತದೆ. ಹಾವನೂರು ಆಯೋಗವನ್ನು ರಚಿಸಿ ಹಿಂದುಳಿದ ವರ್ಗಗಳಿಗೆ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಮೀಸಲಾತಿ ಜಾರಿಗೆ ತಂದವರು ಅರಸುರವರು ಎಂದು ಹೇಳಿದರು.

ದಲಿತ ಮುಖಂಡ ಮಾಡಬಾಳ್ ಜಯರಾಂ ಮಾತನಾಡಿ, ದೇವರಾಜ ಅರಸು ಅವರು ಬಡವರ, ಶೋಷಿತರ, ಸಾಮಾಜಿಕ ನ್ಯಾಯದ ಪರವಾಗಿದ್ದ ನಾಯಕರು. ಆದ್ದರಿಂದ ಅವರನ್ನು ಸಾಮಾಜಿಕ ನ್ಯಾಯದ ಹರಿಕಾರ ಎಂದು ಕರೆಯುತ್ತೇವೆ. ಭೂ ಸುಧಾರಣಾ ಕಾಯ್ದೆ ಜಾರಿಗೆ ತಂದು ಉಳುವವನೇ ಭೂಮಿ ಒಡೆಯ ಎಂದು ಘೋಷಿಸಿದ ಕೀರ್ತಿ ಅರಸು ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.

ತಹಸೀಲ್ದಾರ್ ಶರತ್ ಕುಮಾರ್ ಮಾತನಾಡಿದರು. ದಲಿತ ಮುಖಂಡ ಕಲ್ಕೆರೆ ಶಿವಣ್ಣ, ಮಾಗಡಿ ಯೋಜನಾ ಪ್ರಾಧಿಕಾರದ ನಿರ್ದೇಶಕ ತೇಜು, ಬಿಜೆಪಿ ಮುಖಂಡ ಮಾರಪ್ಪ ಸೇರಿ ಅನೇಕ ಮುಖಂಡರು ಭಾಗವಹಿಸಿದ್ದರು.