ಸಾರಾಂಶ
ಸಿಂಧನೂರು ತಾಲೂಕಿನ ಅಂಬಾಮಠದ ಅಂಬಾದೇವಿ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ಕುಂಭೋತ್ಸವ ವೈಭವದಿಂದ ಜರುಗಿತು.
ಕನ್ನಡಪ್ರಭ ವಾರ್ತೆ ಸಿಂಧನೂರುತಾಲೂಕಿನ ಅಂಬಾಮಠದ ಅಂಬಾದೇವಿ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಭಾನುವಾರ ಅದ್ಧೂರಿಯಾಗಿ ಕುಂಭೋತ್ಸವ ಕಾರ್ಯಕ್ರಮ ಜರುಗಿತು.
ಅಂಬಾದೇವಿ ಮೂರ್ತಿಗೆ ಕುಂಕುಮಾರ್ಚನೆ, ಸಹಸ್ರ ಬಿಲ್ವಾರ್ಚನೆ, ಪುಷ್ಪಾಲಂಕಾರ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ಮಧ್ಯಾಹ್ನ ಅಪಾರ ಭಕ್ತರ ಸಮ್ಮುಖದಲ್ಲಿ ಪಲ್ಲಕ್ಕಿ ಉತ್ಸವ ಹಾಗೂ ಶಿವ ಪಾರ್ವತಿ ವಿವಾಹ ಬಂಧದ ಕುಂಭೋತ್ಸವವನ್ನು ಹೊತ್ತುಕೊಂಡು ದೇವಸ್ಥಾನದ ಸುತ್ತ ಎರಡು ಸಲ ಪ್ರದಕ್ಷಿಣೆ ಮಾಡಲಾಯಿತು. ಅರಿಶಿಣ, ಕುಂಕುಮ, ಭಂಡಾರವನ್ನು ಎರಚಿ ಭಕ್ತರು ಸಂಭ್ರಮಿಸಿದರು.ತಹಸೀಲ್ದಾರ್ ಅರುಣ್ ಎಚ್.ದೇಸಾಯಿ, ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು, ಸರ್ಕಲ್ ಇನ್ಸ್ಪೆಕ್ಟರ್ ವೀರಾರೆಡ್ಡಿ ಎಚ್, ಶರಹ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ದುರುಗಪ್ಪ ಡೊಳ್ಳಿನ್, ಗ್ರಾಮೀಣ ಪೊಲೀಸ್ ಠಾಣೆಯ ಸಬ್ಇನ್ಸ್‌ಪೆಕ್ಟರ್ ಮಹ್ಮದ್ ಇಸಾಕ್, ಅಂಬಾದೇವಿ ದೇವಸ್ಥಾನ ಸಮಿತಿ ಅಧ್ಯಕ್ಷ ರಾಜಶೇಖರಯ್ಯ ಸ್ವಾಮಿ ಗೊಬ್ಬರಕಲ್ ಸೇರಿದಂತೆ ಅರ್ಚಕರಗಳು, ಸದಸ್ಯರು, ಕಂದಾಯ ಇಲಾಖೆಯ ಸಿಬ್ಬಂದಿ ಹಾಗೂ ಲಕ್ಷಾಂತರ ಭಕ್ತರು ಭಾಗವಹಿಸಿದ್ದರು.