ಜಾತ್ರಾ ಮಹೋತ್ಸವದ ಅಂಗವಾಗಿ ಎರಡು ದಿನಗಳು ಗ್ರಾಮದಲ್ಲಿ ದೇವಿಗೆ ಪೂಜಾ ಕೈಂಕರ್ಯ ನಡೆದು, ಮೊದಲಿಗೆ ಗ್ರಾಮದೇವತೆ ಲಕ್ಷ್ಮೀದೇವಿಯ ಒಕ್ಕಲಾಗಿರುವ ಹಾಲೇನಹಳ್ಳಿ ಗ್ರಾಮದವರು ಸಂಕ್ರಾಂತಿ ಸಲುವಾಗಿ ಗ್ರಾಮಕ್ಕೆ ಆಗಮಿಸಿ ಉರಾಚೆ ಇರುವ ಸಂಕ್ರಾಂತಿ ಮಂಟಪದಲ್ಲಿ ಬಲಿಶಾಂತಿ ನೀಡಿ ಗುರುವಾರ ರಾತ್ರಿ ಉತ್ಸವ ನಡೆಸುವ ಮೂಲಕ ಜಾತ್ರೆಗೆ ಚಾಲನೆ ನೀಡುತ್ತಾರೆ. ಬೆಳಗ್ಗೆ ದೇವಸ್ಥಾನಕ್ಕೆ ಆಗಮಿಸುವ ಅವರು ಬಾಯಿಬೀಗದೊಂದಿಗೆ ದೇವಸ್ಥಾನದ ಪ್ರದಕ್ಷಿಣೆ ನಂತರ ನಲ್ಲೂರು ಗ್ರಾಮಸ್ಥರು ಸೇರಿ ಬಲಿ ಕೂಳು ಹಾಕಲಾಗುತ್ತದೆ.
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ತಾಲೂಕಿನ ಕಸಬಾ ಹೋಬಳಿ, ನಲ್ಲೂರು ಗ್ರಾಮದಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಪ್ರತಿವರ್ಷ ಸುಗ್ಗಿಸಂಭ್ರಮದ ಸಂಕೇತವಾಗಿ ನಡೆಯುವ ಶ್ರೀ ಲಕ್ಷ್ಮೀ ದೇವಿ ಜಾತ್ರಾ ಮಹೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯಿತು.ಜಾತ್ರಾ ಮಹೋತ್ಸವದ ಅಂಗವಾಗಿ ಎರಡು ದಿನಗಳು ಗ್ರಾಮದಲ್ಲಿ ದೇವಿಗೆ ಪೂಜಾ ಕೈಂಕರ್ಯ ನಡೆದು, ಮೊದಲಿಗೆ ಗ್ರಾಮದೇವತೆ ಲಕ್ಷ್ಮೀದೇವಿಯ ಒಕ್ಕಲಾಗಿರುವ ಹಾಲೇನಹಳ್ಳಿ ಗ್ರಾಮದವರು ಸಂಕ್ರಾಂತಿ ಸಲುವಾಗಿ ಗ್ರಾಮಕ್ಕೆ ಆಗಮಿಸಿ ಉರಾಚೆ ಇರುವ ಸಂಕ್ರಾಂತಿ ಮಂಟಪದಲ್ಲಿ ಬಲಿಶಾಂತಿ ನೀಡಿ ಗುರುವಾರ ರಾತ್ರಿ ಉತ್ಸವ ನಡೆಸುವ ಮೂಲಕ ಜಾತ್ರೆಗೆ ಚಾಲನೆ ನೀಡುತ್ತಾರೆ. ಬೆಳಗ್ಗೆ ದೇವಸ್ಥಾನಕ್ಕೆ ಆಗಮಿಸುವ ಅವರು ಬಾಯಿಬೀಗದೊಂದಿಗೆ ದೇವಸ್ಥಾನದ ಪ್ರದಕ್ಷಿಣೆ ನಂತರ ನಲ್ಲೂರು ಗ್ರಾಮಸ್ಥರು ಸೇರಿ ಬಲಿ ಕೂಳು ಹಾಕಲಾಗುತ್ತದೆ. ಶ್ರೀದೇವಿ, ಭೂದೇವಿ, ವಿಷ್ಣುವಿನ ಗ್ರಾಮದಲ್ಲಿ ಕುಲದೇವರಾಗಿ ಸ್ವೀಕರಿಸಿದ್ದು, ಮೂರು ದೇವರುಗಳುಳ್ಳ ಅಡ್ಡೆಯನ್ನು ಒತ್ತು ಗ್ರಾಮಸ್ಥರು ಗ್ರಾಮದಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸುತ್ತಾರೆ. ಗ್ರಾಮದಲ್ಲಿನ ಕಂಬದರಾಯನಿಗೆ ನೈವೇದ್ಯ ಅರ್ಪಿಸಿ ಮೊದಲ ಪೂಜೆ ನೆರವೇರಿಸಿದ ನಂತರ ಆಗಮಿಸಿದ ಭಕ್ತರಿಗೆ ದೇವರ ದರ್ಶನಕೆ ಅನುವು ಮಾಡಿಕೊಡುವುದು ಆಚರಣೆ ಪದ್ಧತಿಯಾಗಿದೆ. ಇಷ್ಟೆಲ್ಲಾ ಉತ್ಸವದ ಭಾಗವಾಗಿ ಇಡೀ ಗ್ರಾಮಸ್ಥರು ಬಂದ ಅತಿಥಿಗಳಿಗೆ ಮಾಂಸದೂಟ ಹಾಕಿ ಸತ್ಕಾರ್ಯ ಮಾಡುವುದು ಜಾತ್ರೆಯ ವಿಶೇಷವಾಗಿದೆ.ಮಾಜಿ ಕನ್ವೀನಿಯರ್ ಎನ್.ಕೆ. ವಿಶ್ವನಾಥ್ ಮಾತನಾಡಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಗ್ರಾಮದಲ್ಲಿ ಶ್ರೀ ಲಕ್ಷ್ಮೀದೇವಿ ಜಾತ್ರಾ ಮಹೋತ್ಸವವನ್ನು ನೂರಾರು ವರ್ಷಗಳಿಂದ ಆಚರಿಸುತ್ತಾ ಬರಲಾಗುತ್ತಿದೆ. ಜಾತ್ರಾ ಮಹೋತ್ಸವಕ್ಕೆ ವಿವಿಧ ತಾಲೂಕಿನಿಂದ ಭಕ್ತಾದಿಗಳು ಆಗಮಿಸಿ ಈ ತಾಯಿಯ ಕೃಪೆಗೆ ಪಾತ್ರರಾಗುತ್ತಾರೆ. ನಮ್ಮೂರ ಲಕ್ಷ್ಮೀದೇವಿಯನ್ನು ನಂಬಿದವರಿಗೆಲ್ಲಾ ಒಳ್ಳೆಯದಾಗಿದೆ. ದೇವರಿಗೆ ಮೊರೆ ಹೋದ ಎಲ್ಲಾ ಭಕ್ತರಿಗೂ ಯಾವುದೇ ಕಷ್ಟಗಳು ಬರದ ರೀತಿಯಲ್ಲಿ ದೇವತೆ ಕಾಪಾಡುತ್ತಾಳೆ ಎಂಬ ನಂಬಿಕೆ ಮೇಲೆ ಹಲವಾರು ಗ್ರಾಮಗಳಿಂದ ಭಕ್ತರು ಆಗಮಿಸುತ್ತಾರೆ. ಕೆ.ಆರ್. ಪೇಟೆ, ಕೆ.ಆರ್.ನಗರ, ಪಿರಿಯಾಪಟ್ಟಣ ತಾಲೂಕಿನಿಂದ ಭಕ್ತರು ಆಗಮಿಸುವುದು ವಿಶೇಷ, ಎರಡು ದಿನಗಳ ಕಾಲ ಜಾತ್ರಾ ಮಹೋತ್ಸವವು ಅತ್ಯಂತ ಭಕ್ತರು ಆಗಮಿಸಿ ಇಲ್ಲಿ ರಾತ್ರಿ ಉಳಿದು ಬೆಳಿಗ್ಗೆ ತಾಯಿಯ ಸೇವೆಯನ್ನು ಮಾಡಿಕೊಂಡು ತಮ್ಮ ತಮ್ಮ ಊರಿಗೆ ಮರಳುತ್ತಾರೆ ಎಂದರು. ಗ್ರಾಮದವರಾದ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರಾದ ಎನ್.ಆರ್. ಪುರುಷೋತ್ತಮ್ ಮಾತನಾಡಿ, ಗ್ರಾಮದ ಎಲ್ಲಾ ಮುಖಂಡರು ಒಗ್ಗೂಡಿ ಪ್ರೀತಿ ಸೋದರತೆಯ ಐಕ್ಯತೆಯನ್ನು ಸಂದೇಶವನ್ನು ಹಬ್ಬದ ಮೂಲಕ ಸಾರಲಾಗುತ್ತಿದೆ. ತಾವು ಬೆಳೆದ ಸುಗ್ಗಿ ಬೆಳೆಯ ಕಟಾವು, ಒಕ್ಕಣೆ ಮುಗಿಸಿದ ರೈತರ ಮುಖದಲ್ಲಿ ಹಸನ್ಮುಖಿ, ಸಂತೋಷ ಎಲ್ಲವೂ ತುಂಬಿರುತ್ತದೆ, ಅದನ್ನು ಜಾತ್ರೆಯ ಮೂಲಕ ಆಚರಣೆ ಮಾಡುವ ಮೂಲಕ ಮುಂದಿನ ವರ್ಷಕ್ಕೆ ಹೊಸ ಹುಮ್ಮಸ್ಸು ಪಡೆಯಲು ಜಾತ್ರೆ ಪ್ರೇರಣೆಯಾಗಿದೆ. ಗ್ರಾಮದ ಸಮಸ್ತರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಇಡೀ ದಿನ ಸಂತೋಷದಿಂದ ಪಾಲ್ಗೊಂಡು ವಿಜೃಂಭಣೆಯಿಂದ ಹಬ್ಬವನ್ನು ಆಚರಣೆಯನ್ನು ಹಲವು ದಶಕಗಳಿಂದ ಮಾಡುತ್ತಾ ಬಂದಿದ್ದೇವೆ. ಜಾತ್ರೆಗೆ ಆಗಮಿಸುವ ಮಹಿಳೆಯರು ಮತ್ತು ಮಕ್ಕಳಿಗೆ ಬೇಕಾದ ಸೌಕರ್ಯವನ್ನು ಮಾಡಿ ನಲ್ಲೂರು ಗ್ರಾಮದ ಮುಖ್ಯಸ್ಥರ ನೇತೃತ್ವದಲ್ಲಿ ಈ ವರ್ಷವೂ ಸಂಕ್ರಾಂತಿ ಹಬ್ಬವನ್ನು ಆಚರಣೆ ಮಾಡುತ್ತಿದ್ದೇವೆ ಎಂದರು.
ಜಾತ್ರಾ ಮಹೋತ್ಸವದ ಅಂಗವಾಗಿ ಗ್ರಾಮಸ್ಥರು ರಂಗ ಕುಣಿದು ಸಂಭ್ರಮಿಸಿದರು, ಸಂಜೆ ಮಹಿಳೆಯರಿಂದ ಕೋಲಾಟ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಪ್ರಕಾಶ್, ಎನ್.ಎಸ್.ಲೋಕೇಶ್, ರಮೇಶ್, ರಾಮು, ಅನಿಲ್, ನಲ್ಲೂರೇಗೌಡ, ರವಿ, ದೀಪು, ಗ್ರಾಮ ಪಂಚಾಯಿತಿ ಸದಸ್ಯ ಎನ್.ಕೆ.ದಿನೇಶ್, ಸರಸ್ವತಿ ಶಿವಣ್ಣ, ಯೋಗ ನರಸಿಂಹೇಗೌಡರು, ಎನ್.ಎಲ್. ರಮೇಶ್ ಗುಡಿಗೌಡ ಪ್ರದೀಪ್ ಕುಮಾರ್, ಕಾರ್ಯದರ್ಶಿ ಮಿಥುನ್, ಆರ್ಚಕರಾದ ಹಿರಣ್ಣಯ್ಯ, ಪಾಂಡುರಂಗಸ್ವಾಮಿ, ವೆಂಕಟೇಶ್ ಮೂರ್ತಿ, ಜಗನ್ನಾಥ್ ಸೇರಿ ೧೮ ಮಂದಿ ಧರ್ಮದರ್ಶಿಗಳು ಇದ್ದರು.