ಗಣಿನಾಡು ಬಳ್ಳಾರಿಯಲ್ಲಿ ಶರನ್ನವರಾತ್ರಿ ಸಂಭ್ರಮ ಮನೆ ಮಾಡಿದೆ. ಒಂಬತ್ತು ದಿನಗಳ ಕಾಲ ನಡೆಯುವ ಶಕ್ತಿದೇವತೆಯ ಆರಾಧನೆಯ ನವರಾತ್ರಿ ಮಹೋತ್ಸವಕ್ಕೆ ಭಾನುವಾರ ಸಡಗರ, ಸಂಭ್ರಮದಿಂದ ಚಾಲನೆ ದೊರೆತಿದ್ದು, ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.
ಒಂಬತ್ತು ದಿನಗಳ ಕಾಲ ಶಕ್ತಿದೇವತೆ ಆರಾಧನೆ
ಕನಕ ದುರ್ಗಮ್ಮ, ಸಣ್ಣ ದುರ್ಗಮ್ಮ, ಸುಂಕಲಮ್ಮ ದೇಗುಲಗಳಲ್ಲಿ ವಿಶೇಷ ಪೂಜೆನಗರ, ಗ್ರಾಮೀಣ ಪ್ರದೇಶಗಳಲ್ಲಿ ಹಬ್ಬದ ಸಂಭ್ರಮ
ಕನ್ನಡಪ್ರಭ ವಾರ್ತೆ ಬಳ್ಳಾರಿಗಣಿನಾಡು ಬಳ್ಳಾರಿಯಲ್ಲಿ ಶರನ್ನವರಾತ್ರಿ ಸಂಭ್ರಮ ಮನೆ ಮಾಡಿದೆ. ಒಂಬತ್ತು ದಿನಗಳ ಕಾಲ ನಡೆಯುವ ಶಕ್ತಿದೇವತೆಯ ಆರಾಧನೆಯ ನವರಾತ್ರಿ ಮಹೋತ್ಸವಕ್ಕೆ ಭಾನುವಾರ ಸಡಗರ, ಸಂಭ್ರಮದಿಂದ ಚಾಲನೆ ದೊರೆತಿದ್ದು, ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.
ನಗರದ ಅಧಿದೇವತೆ ಶ್ರೀಕನಕ ದುರ್ಗಮ್ಮ ದೇವಸ್ಥಾನ, ಎಂಎಂಟಿಸಿ ಕಾಲನಿಯ ಸಣ್ಣ ದುರ್ಗಮ್ಮ ದೇವಸ್ಥಾನ, ಗ್ರಹಂ ರಸ್ತೆಯ ಸುಂಕಲಮ್ಮ ದೇವಸ್ಥಾನ, ಏಳು ಮಕ್ಕಳ ದೇವಸ್ಥಾನ ಸೇರಿದಂತೆ ವಿವಿಧ ಶಕ್ತಿದೇವತೆಗಳ ದೇಗುಲಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಶರನ್ನವರಾತ್ರಿ ಹಿನ್ನೆಲೆಯಲ್ಲಿ ಭಕ್ತರು ದೇವಿಯ ಆರಾಧನೆಯಲ್ಲಿ ತೊಡಗಿಸಿಕೊಂಡಿದ್ದು, ಎಲ್ಲೆಡೆ ಧಾರ್ಮಿಕ ಸಂಭ್ರಮ ಕಂಡುಬಂದಿದೆ.ಶಕ್ತಿದೇವತೆ ಆರಾಧನೆಯ ಸಡಗರ:
ಶರನ್ನವರಾತ್ರಿ ಎಂದರೆ ಶಕ್ತಿದೇವತೆಯ ಆರಾಧನೆಯ ಮಹಾಪರ್ವ. ದುಷ್ಟಶಕ್ತಿಗಳ ಸಂಹಾರ ಹಾಗೂ ಶಿಷ್ಟರ ರಕ್ಷಣೆಯ ಸಂಕೇತವಾಗಿ ಆಚರಿಸಲಾಗುವ ನವರಾತ್ರಿ ಮಹೋತ್ಸವಕ್ಕೆ ಬಳ್ಳಾರಿಯಲ್ಲಿ ವಿಶೇಷ ಮಹತ್ವವಿದೆ. ನಗರದ ಅಧಿದೇವತೆ ಕನಕ ದುರ್ಗಮ್ಮನ ಆರಾಧನೆಗೆ ಭಕ್ತರು ಹೆಚ್ಚಿನ ಪ್ರಾಧಾನ್ಯ ನೀಡುತ್ತಿದ್ದು, ನವರಾತ್ರಿಯ ಒಂಬತ್ತು ದಿನಗಳ ಕಾಲ ದೇವಿಯ ದರ್ಶನ ಪಡೆದು ಪುನೀತರಾಗುವ ಸಂಪ್ರದಾಯವಿದೆ.ನವರಾತ್ರಿ ಆರಂಭದ ಹಿನ್ನೆಲೆಯಲ್ಲಿ ನಗರದ ವಿವಿಧ ದೇವಾಲಯಗಳಲ್ಲಿ ದೇವಿಯ ಮೂರ್ತಿಗಳಿಗೆ ವಿಶೇಷ ಅಲಂಕಾರ, ಅಭಿಷೇಕ, ಕುಂಕುಮಾರ್ಚನೆ, ಮಂಗಳಾರತಿ ಸೇರಿದಂತೆ ಧಾರ್ಮಿಕ ವಿಧಿ-ವಿಧಾನಗಳು ನಡೆದವು. ದೇವಿಯ ಸನ್ನಿಧಿಯಲ್ಲಿ ಭಕ್ತಿಭಾವದಿಂದ ಪ್ರಾರ್ಥನೆ ಸಲ್ಲಿಸಿದ ಭಕ್ತರು ಕುಟುಂಬದ ಸುಖ, ಶಾಂತಿ ಹಾಗೂ ಸಮೃದ್ಧಿಗಾಗಿ ಬೇಡಿಕೊಂಡರು.
ಮಹಿಳೆಯರಲ್ಲಿ ಹಬ್ಬದ ಉತ್ಸಾಹ:ಶರನ್ನವರಾತ್ರಿ ಹಬ್ಬದ ಸಂಭ್ರಮ ಮಹಿಳೆಯರಲ್ಲಿ ವಿಶೇಷವಾಗಿ ಕಂಡುಬಂದಿದೆ. ಮನೆಗಳಲ್ಲಿ ದೇವಿಯ ಆರಾಧನೆಗೆ ಸಿದ್ಧತೆ ಮಾಡಿಕೊಂಡಿರುವ ಮಹಿಳೆಯರು ಪೂಜಾ ಸಾಮಗ್ರಿ, ಹೂವು, ಹಣ್ಣು ಹಾಗೂ ನೈವೇದ್ಯದ ಪದಾರ್ಥಗಳ ಖರೀದಿಯಲ್ಲಿ ತೊಡಗಿಸಿಕೊಂಡಿದ್ದಾರೆ. ನವರಾತ್ರಿ ಸಂದರ್ಭದಲ್ಲಿ ಮನೆಗಳಲ್ಲಿ ಗೊಂಬೆಗಳನ್ನು ಕೂರಿಸುವುದು, ದೇವಿಗೆ ನಿತ್ಯ ವಿಶೇಷ ಪೂಜೆ ಸಲ್ಲಿಸುವುದು, ಸುಮಂಗಲಿಯರಿಗೆ ಅರಿಶಿಣ-ಕುಂಕುಮ ನೀಡುವುದು, ಪರಸ್ಪರ ಮನೆಗಳಿಗೆ ಭೇಟಿ ನೀಡಿ ಶುಭಾಶಯ ವಿನಿಮಯ ಮಾಡಿಕೊಳ್ಳುವುದು ಹಬ್ಬದ ಪ್ರಮುಖ ಸಂಪ್ರದಾಯಗಳಾಗಿವೆ.
ಒಂಬತ್ತು ದಿನಗಳ ಕಾಲ ದೇವಿಯ ವಿವಿಧ ಸ್ವರೂಪಗಳನ್ನು ಆರಾಧಿಸುವ ಮೂಲಕ ನಾಡಿನ ಸುಭಿಕ್ಷೆಗಾಗಿ ಪ್ರಾರ್ಥಿಸುವುದು ಶರನ್ನವರಾತ್ರಿಯ ವಿಶೇಷ. ಮಹಿಳೆಯರು ಭಕ್ತಿಗೀತೆ, ಲಲಿತಾ ಸಹಸ್ರನಾಮ ಪಾರಾಯಣ ಸೇರಿದಂತೆ ಧಾರ್ಮಿಕ ಚಟುವಟಿಕೆಯಲ್ಲಿ ಭಾಗಿಯಾಗುವ ಮೂಲಕ ಹಬ್ಬಕ್ಕೆ ಮೆರುಗು ನೀಡುತ್ತಿದ್ದಾರೆ.ಗ್ರಾಮೀಣ ಪ್ರದೇಶಗಳಲ್ಲೂ ನವರಾತ್ರಿ ವೈಭವ:
ಬಳ್ಳಾರಿ ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲೂ ನವರಾತ್ರಿ ಹಬ್ಬದ ಸಡಗರ ಕಂಡುಬಂದಿದೆ. ಗ್ರಾಮ ದೇವತೆಗಳ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಮಹಿಳೆಯರು ಹಾಗೂ ಭಕ್ತರು ಶಕ್ತಿದೇವತೆಯ ಆರಾಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಗ್ರಾಮೀಣ ಭಾಗದಲ್ಲಿ ನವರಾತ್ರಿ ಹಬ್ಬಕ್ಕೆ ತನ್ನದೇ ಆದ ಸಾಂಸ್ಕೃತಿಕ ಮಹತ್ವವಿದೆ. ತಲೆತಲಾಂತರಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯದಂತೆ ಗ್ರಾಮದೇವತೆಗಳಿಗೆ ವಿಶೇಷ ಪೂಜೆ ಸಲ್ಲಿಸುವುದು, ಕುಟುಂಬ ಸಮೇತ ದೇವಿಯ ದರ್ಶನ ಪಡೆಯುವುದು ಹಾಗೂ ಸಾಮೂಹಿಕ ಆರಾಧನೆಯಲ್ಲಿ ಪಾಲ್ಗೊಳ್ಳುವುದು ಹಬ್ಬದ ವಿಶೇಷತೆಗಳಾಗಿವೆ.ಹೂವು, ಪೂಜಾ ಸಾಮಗ್ರಿ ಖರೀದಿ ಜೋರು:
ನವರಾತ್ರಿ ಹಿನ್ನೆಲೆಯಲ್ಲಿ ನಗರದ ಮಾರುಕಟ್ಟೆಗಳಲ್ಲಿ ಹಬ್ಬದ ಖರೀದಿ ಚಟುವಟಿಕೆ ಗರಿಗೆದರಿವೆ. ದೇವಿಯ ಪೂಜೆಗೆ ಅಗತ್ಯವಿರುವ ಹೂವು, ಹಣ್ಣು, ತೆಂಗಿನಕಾಯಿ, ಬಾಳೆಹಣ್ಣು, ಕುಂಕುಮ, ಅರಿಶಿಣ, ದೀಪ ಹಾಗೂ ಇತರ ಪೂಜಾ ಸಾಮಗ್ರಿಗಳಿಗೆ ಬೇಡಿಕೆ ಹೆಚ್ಚಿದೆ.ವಿಶೇಷವಾಗಿ ಹೂವಿನ ಮಾಲೆಗಳು, ಅಲಂಕಾರಿಕ ವಸ್ತುಗಳು ಹಾಗೂ ದೇವಿಯ ಪೂಜೆಗೆ ಬಳಸುವ ಸಾಮಗ್ರಿಗಳ ಖರೀದಿಗೆ ಭಕ್ತರು ಆಸಕ್ತಿ ತೋರಿದ್ದಾರೆ. ನವರಾತ್ರಿ ಆರಂಭದೊಂದಿಗೆ ಹಬ್ಬದ ವ್ಯಾಪಾರ ಚಟುವಟಿಕೆಯೂ ಚೈತನ್ಯ ಬಂದಿದೆ.ಶರನ್ನವರಾತ್ರಿಯ ಒಂಬತ್ತು ದಿನಗಳ ಕಾಲ ದೇವಿಯ ನಾನಾ ಸ್ವರೂಪಗಳನ್ನು ಆರಾಧಿಸಲಾಗುತ್ತದೆ. ದುರ್ಗೆ, ಲಕ್ಷ್ಮಿ ಹಾಗೂ ಸರಸ್ವತಿಯ ಆರಾಧನೆಗೆ ವಿಶೇಷ ಮಹತ್ವವಿದ್ದು, ನವರಾತ್ರಿಯ ಕೊನೆಯ ದಿನಗಳಲ್ಲಿ ಆಯುಧಪೂಜೆ ಮತ್ತು ವಿಜಯದಶಮಿ ಆಚರಣೆಗಳು ನಡೆಯಲಿವೆ.