ಆರ್‌.ಆರ್.ನಗರ ಸಂಭ್ರಮಕ್ಕೆ ಅದ್ಧೂರಿ ಚಾಲನೆ

| Published : Mar 09 2024, 01:32 AM IST / Updated: Mar 09 2024, 01:38 PM IST

ಆರ್‌.ಆರ್.ನಗರ ಸಂಭ್ರಮಕ್ಕೆ ಅದ್ಧೂರಿ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಶಿವರಾತ್ರಿ ಅಂಗವಾಗಿ ಕನ್ನಡಪ್ರಭ-ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಆರ್‌.ಆರ್‌.ನಗರದಲ್ಲಿ ಆಯೋಜಿಸಿದ್ದ ಶಿವರಾತ್ರಿ ಸಂಭ್ರಮಕ್ಕೆ ಸಿನಿಮಾ ತಾರೆಯರು ಇಂಬು ನೀಡಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಸ್ತೆಯುದ್ದಕ್ಕೂ ಇಕ್ಕೆಲಗಳಲ್ಲಿ ಬೆಳಗಿದ ದೀಪ, ಎತ್ತರದ ಶಿವನೆದುರು ಧ್ಯಾನ, ಇನ್ನೊಂದೆಡೆ ಮನರಂಜನಾ ಕಾರ್ಯಕ್ರಮ, ಭಕ್ತಿಗೀತೆಯ ಜೊತೆಗೆ ಸಿನಿಮಾ ತಾರೆಯರ ಝಲಕ್‌, ಮತ್ತೊಂದೆಡೆ ತಿಂಡಿ ತನಿಸು, ಆಕರ್ಷಕ ಗೃಹೋಪಯೋಗಿ ವಸ್ತುಗಳ ಮಳಿಗೆಗಳು...

ಇವೆಲ್ಲ ಕಂಡುಬಂದಿದ್ದು ಕನ್ನಡಪ್ರಭ- ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಆಯೋಜಿಸಿರುವ ಆರ್‌.ಆರ್‌.ನಗರ ಶಿವರಾತ್ರಿ ಸಂಭ್ರಮದಲ್ಲಿ.

ಜ್ಞಾನಭಾರತಿ ವಾರ್ಡ್‌ನ ಮಲ್ಲತ್ತಹಳ್ಳಿ ಮೈದಾನ ನಾಲ್ವಡಿ ಕೃಷ್ಣರಾಜ ಒಡೆಯರ್‌ ಉದ್ಯಾನವನದಲ್ಲಿ ಮಾಜಿ ಸಚಿವ ಮುನಿರತ್ನ ಅವರು ಕಾರ್ಯಕ್ರಮ ಉದ್ಘಾಟಿಸಿದರು. 

ಬಳಿಕ ಮಾತನಾಡಿ ಶುಭ ಕೋರಿದ ಅವರು, ಕ್ಷೇತ್ರದ ಜನತೆಯಲ್ಲಿ ಧಾರ್ಮಿಕ, ಸಾಂಸ್ಕೃತಿಕ ಭಾವನೆ ಅಡಕವಾಗಿದೆ. ಜನತೆಯ ಆಶೋತ್ತರಗಳಿಗೆ ತಕ್ಕಂತೆ ಇಷ್ಟು ವರ್ಷಗಳಿಂದ ಕೆಲಸ ಮಾಡಿಕೊಂಡು ಬರಲಾಗಿದೆ. ಮುಂದೆಯೂ ಅದರಂತೆ ಅದರಂತೆ ಸಮರ್ಪಕ ಅಭಿವೃದ್ಧಿ ಕಾರ್ಯಗಳನ್ನು ಮಾಡುವುದಾಗಿ ಅವರು ಭರವಸೆ ನೀಡಿದರು.

ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ವಿಪಕ್ಷ ನಾಯಕ ಆರ್‌.ಅಶೋಕ್‌, ಸಿ.ಪಿ.ಯೋಗೇಶ್ವರ್‌, ಡಾ। ಸಿ.ಎನ್‌.ಮಂಜುನಾಥ್‌ ಅವರು ಶುಭ ಕೋರಿದರು.

ಜಾಗರಣೆ ಶಿವಧ್ಯಾನ: ಅಹೋರಾತ್ರಿ ಜಾಗರಣೆ ಪ್ರಯುಕ್ತ ಸಾಂಸ್ಕೃತಿಕ, ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.ಪ್ರಖ್ಯಾತ ಚಲನಚಿತ್ರ ಹಾಗೂ ಧಾರಾವಾಹಿ ಕಲಾವಿದರ ಕಾರ್ಯಕ್ರಮಗಳನ್ನು ಜನತೆ ಕಣ್ತುಂಬಿಕೊಂಡರು. 

ಸಾಂಸ್ಕೃತಿ ಕಾರ್ಯಕ್ರಮದಲ್ಲಿ ಬಿಗ್‌ ಬಾಸ್‌ ಖ್ಯಾತಿಯ ತನಿಷಾ ಕುಪ್ಪಂಡ ಪಾಲ್ಗೊಂಡು ಹೆಜ್ಜೆ ಹಾಕಿ ನೆರೆದ ಸಾವಿರಾರು ಜನರನ್ನು ರಂಜಿಸಿದರು. ಅವರಿಗೆ ಕಿರುತೆರೆಯ ಕಲಾವಿದರು ಸಾಥ್‌ ನೀಡಿದರು. 

ಜೊತೆಗೆ ಭಕ್ತಿಗೀತೆಗಳು, ಶಿವನ ಸ್ಮರಣೆಗಳು ನಡೆದವು. ಶಿವರಾತ್ರಿಯ ಮಹತ್ವ, ಜಾಗರಣೆಯಿಂದಾಗುವ ವೈಜ್ಞಾನಿಕ ಪ್ರಯೋಜನವನ್ನು ತಿಳಿಸಿಕೊಡಲಾಯಿತು.

ಸಂಭ್ರಮದಲ್ಲಿ ಮುಳುಗಿದ ಜನ: ಆರ್‌.ಆರ್.ನಗರ ಸಂಭ್ರಮದಲ್ಲಿ ಜನತೆ ಅಕ್ಷರಶಃ ಮಿಂದೆದ್ದರು. ಖಾದ್ಯಗಳು, ಗೃಹೋಪಯೋಗಿ ಸೇರಿ ಸುಮಾರು 60ಕ್ಕೂ ಹೆಚ್ಚಿನ ಸ್ಟಾಲ್‌ಗಳನ್ನು ತೆರೆಯಲಾಗಿತ್ತು. 

ದೇಸಿಯ ಖಾದ್ಯಗಳಿಂದ ಹಿಡಿದು ಚೈನೀಸ್‌, ಉತ್ತರ ಭಾರತೀಯ ತಿಂಡಿ ತನಿಸುಗಳನ್ನು ಸವಿದರು. ದಾವಣಗೆರೆ ಬೆಣ್ಣೆ ದೋಸೆ, ಪೊಟ್ಯಾಟೋ ಟ್ವಿಸ್ಟರ್‌, ಬೋಂಡ ಬಜ್ಜಿ, ದೋಸೆ, ಪುಳಿಯೊಗರೆ ಸೇರಿದಂತೆ ಹಲವು ಖಾದ್ಯಗಳು ಜನರನ್ನು ಸೆಳೆದವು. ಮಳಿಗೆಗಳ ಮುಂದೆ ಮಹಿಳೆಯರ ಖರೀದಿ ಜೋರಾಗಿತ್ತು.

ವಿಭಿನ್ನ ಕಾರ್ಯಕ್ರಮಗಳು: ಮೂರು ದಿನ ನಡೆಯಲಿರುವ ಆರ್.ಆರ್.ನಗರ ಸಂಭ್ರಮದಲ್ಲಿ ಶಾಪಿಂಗ್, ಈಟಿಂಗ್, ಚಾಟಿಂಗ್ ಸೇರಿದಂತೆ ವಿಭಿನ್ನ ಕಾರ್ಯಕ್ರಮ ಆಯೋಜಿಸಲಾಗಿದೆ. 

ರಾಜ್ಯದ ಬೇರೆ ಜಿಲ್ಲೆ ಸೇರಿದಂತೆ ರುಚಿಯಾದ ಸ್ಥಳೀಯ ತಿಂಡಿ, ತಿನಿಸುಗಳನ್ನು ಸವಿಯಬಹುದು. ಇನ್ನು ಸಂಭ್ರಮದಲ್ಲಿ ಮಕ್ಕಳ ಮನರಂಜನೆಗೆ ಹಲವು ಆಟಗಳು ಸಹ ಇವೆ. 

ಜೊತೆಗೆ ಮಹಿಳೆಯರಿಗಾಗಿ ಅಡುಗೆ ಸ್ಪರ್ಧೆ, ಫ್ಯಾಷನ್, ಲೈಫ್ ಸ್ಟೈಲ್ ವಸ್ತುಗಳ ಖರೀದಿಸಲು ಹಾಗೂ ನೃತ್ಯ, ಸಂಗೀತ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ಇಂದಿನ ಕಾರ್ಯಕ್ರಮ: ಸಂಜೆ 5ರಿಂದ 6ರವರೆಗೆ ಸಂಗೀತ ಕಾರ್ಯಕ್ರಮ ನಡೆಯಲಿದೆ. ಬಳಿಕ 7ರವರೆಗೆ ಮಕ್ಕಳಿಗಾಗಿ ಕ್ಯೂಟ್‌ಬೇಬಿ ಫ್ಯಾನ್ಸಿ ಡ್ರೆಸ್‌ ಸ್ಪರ್ಧೆ ಆಯೋಜನೆಯಾಗಿದೆ. 7.30ರವರೆಗೆ ‘ಮಿನಿಟ್‌ ಟು ವಿನ್ ಇಟ್‌’ ಒಂದು ನಿಮಿಷದ ಮನರಂಜನಾ ಕಾರ್ಯಕ್ರಮ, ಬಳಿಕ ಮಿಮಿಕ್ರಿ ಗೋಪಿ ಅವರಿಂದ ಹಾಸ್ಯ ಸಂಭ್ರಮ ಹಾಗೂ ಲೋಕೇಶ್‌, ಮಂಜು ಹಾಸನ್‌, ವೈಷ್ಣವಿ ಮೆಲೋಡಿಸ್‌ ತಂಡದಿಂದ ಅವರಿಂದ ಸಂಗೀತ ಸಂಜೆ ಕಾರ್ಯಕ್ರಮವಿದೆ. ಬಳಿಕ 10ರವರೆಗೆ ನೃತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.