ಗೌರಿಪುತ್ರ, ವಿಘ್ನನಿವಾರಕ ಗಣೇಶನನ್ನು ಸ್ವಾಗತಿಸಲು ಎಲ್ಲೆಡೆ ಭರ್ಜರಿ ತಯಾರಿ ನಡೆದಿದೆ. ಸೋಮವಾರ ಚತುರ್ಥಿ ನಿಮಿತ್ತ ಭಕ್ತರ ಮನೆಗೆ ಬರಲು ವಿವಿಧ ಆಕಾರಗಳ ಗಣೇಶ ಮೂರ್ತಿಗಳು ತಯಾರಾಗಿದ್ದು, ಸಂಭ್ರಮದಿಂದ ಹಬ್ಬ ಆಚರಿಸಲು ಭಾನುವಾರ ಮಾರುಕಟ್ಟೆಯಲ್ಲಿ ಜನರು ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿದ್ದು ಕಂಡುಬಂದಿತು.

ಮಾರುಕಟ್ಟೆಯಲ್ಲಿ ಜನರಿಂದ ಅಗತ್ಯ ವಸ್ತುಗಳ ಖರೀದಿ

ಭಕ್ತರ ಮನೆ ಬರಲು ವಿವಿಧ ಆಕಾರದ ಗಣೇಶ ಮೂರ್ತಿಗಳು ತಯಾರುಕನ್ನಡಪ್ರಭ ವಾರ್ತೆ ಹಾವೇರಿ

ಗೌರಿಪುತ್ರ, ವಿಘ್ನನಿವಾರಕ ಗಣೇಶನನ್ನು ಸ್ವಾಗತಿಸಲು ಎಲ್ಲೆಡೆ ಭರ್ಜರಿ ತಯಾರಿ ನಡೆದಿದೆ. ಸೋಮವಾರ ಚತುರ್ಥಿ ನಿಮಿತ್ತ ಭಕ್ತರ ಮನೆಗೆ ಬರಲು ವಿವಿಧ ಆಕಾರಗಳ ಗಣೇಶ ಮೂರ್ತಿಗಳು ತಯಾರಾಗಿದ್ದು, ಸಂಭ್ರಮದಿಂದ ಹಬ್ಬ ಆಚರಿಸಲು ಭಾನುವಾರ ಮಾರುಕಟ್ಟೆಯಲ್ಲಿ ಜನರು ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿದ್ದು ಕಂಡುಬಂದಿತು.

ನಗರದ ಮಾರುಕಟ್ಟೆಯಲ್ಲಿ ಹೂವು ಹಣ್ಣು, ಬಾಳೆಕಂಬ, ಮಾವಿನತೊರಣ, ಕಬ್ಬು, ಫಲಾವಳಿಗೆ ಕಟ್ಟಲು ನಾನಾ ರೀತಿಯ ಫಲ, ತರಕಾರಿ ಖರೀದಿ ಭರಾಟೆ ಜೋರಾಗಿ ನಡೆಯಿತು. ಪಟಾಕಿ, ಗಣೇಶನ ಮಂಟಪ ತಯಾರಿಗಾಗಿ ಬಣ್ಣಬಣ್ಣದ ಹೂಹಾರ, ವಿದ್ಯುತ್ ದೀಪಾಲಂಕಾರ ಸಾಮಗ್ರಿಗಳ ಖರೀದಿಯೂ ಜೋರಾಗಿತ್ತು.

ನಗರದ ಮೈಲಾರ ಮಹಾದೇವಪ್ಪ ವೃತ್ತ, ಗಾಂಧಿ ಸರ್ಕಲ್, ನಗರಸಭೆ ಮುಂಭಾಗ, ಜೆ.ಪಿ. ವೃತ್ತ, ಜೆ.ಎಚ್. ಪಟೇಲ್ ವೃತ್ತ, ಹುಕ್ಕೇರಿಮಠ ರಸ್ತೆ, ಗುತ್ತಲ ರಸ್ತೆ, ಹೈಸ್ಕೂಲ್ ರೋಡ, ಹೂವಿನ ಮಾರುಕಟ್ಟೆ, ಎಲ್‌ಬಿಎಸ್ ಮಾರುಕಟ್ಟೆ ಸೇರಿದಂತೆ ನಗರದ ವಿವಿಧೆಡೆ ಹೆಚ್ಚು ಜನಸಂದಣಿ ಕಂಡುಬರುವ ಸಾರ್ವಜನಿಕ ಪ್ರದೇಶಗಳಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪನೆಗಾಗಿ ಹೂವು, ಹಣ್ಣು, ಬಾಳೆದಿಂಡು, ತಳಿರು ತೋರಣ, ಅಲಂಕಾರಿಕ ವಸ್ತುಗಳು, ವಿದ್ಯುತ್ ದೀಪಾಲಂಕಾರ ಸಾಮಗ್ರಿಗಳ ಖರೀದಿಯಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿದ್ದರು.

ಗಗನಕ್ಕೇರಿದ ಹೂವುಗಳು:

ಗಣೇಶ ಚೌತಿ ಹಿನ್ನೆಲೆ ಹೂವಿನ ಮಾರುಕಟ್ಟೆಗಳಲ್ಲಿ ಹೂವುಗಳ ದರವೂ ಗಗನಕ್ಕೇರಿದೆ. ಇನ್ನೂ ಹಣ್ಣುಗಳೂ ಸ್ವಲ್ಪ ದುಬಾರಿ ಎನಿಸಿದರೂ ಖರೀದಿ ಮಾಡುವ ಅನಿವಾರ್ಯತೆ ಎದುರಾಗಿದೆ. ವ್ಯಾಪಾರಿಗಳೊಂದಿಗೆ ಚೌಕಾಸಿ ಮಾಡಿ ಖರೀದಿ ಮಾಡುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿ ಕಂಡುಬಂದವು. ಬಾಳೆ ಹಣ್ಣು ಡಜನ್‌ಗೆ ₹ 40ರಿಂದ 50 ಇದ್ದರೆ, ಚೆಂಡು ಹೂವು ಮಾರಿಗೆ ₹ 40-50, ಬಾಳೆಕಂಬ ಒಂದು ಜತೆಗೆ ₹ 40ರಿಂದ 70ಗಳಿಗೆ ಮಾರಾಟವಾಗುತ್ತಿವೆ.

ಹೂವುಗಳ ದರ (ಕೆಜಿಗೆ) ರು.ಗಳಲ್ಲಿ

ಕನಕಾಂಬರಿ 1,600-1800

ಕಾಕಡಾ ಮಲ್ಲಿಗೆ 800-1,000

ಸುಗಂಧರಾಜ 250-300

ಕೆಂಪು ಚೆಂಡುಹೂ 40-60

ಹಳದಿ ಚೆಂಡು ಹೂ 40-70

ಅಸ್ಟ್ರಾಹೂವು 250 -350

ಪೆಟಲ್ ಗುಲಾಬಿ ಹೂವು 250-300

ಮಿಲ್ಕ್ ವೈಟ್ 350-450

ಸೇವಂತಿಗೆ 250-300

ಮಾರಿಗೋಲ್ಡ್ 250 -300 ಹಣ್ಣುಗಳ ದರ (ಕೆಜಿಗೆ) ರು.ಗಳಲ್ಲಿ

ಸೇಬು 150-180

ಬಾಳೆ ಹಣ್ಣು (ಡಜನ್‌ಗೆ) 40-50

ಮೊಸಂಬಿ 100-140

ಸೀತಾಫಲ 120-140

ಚಿಕ್ಕು 80-100

ದಾಳಿಂಬೆ 180-200

ಕಪ್ಪ್ಪು ದ್ರಾಕ್ಷಿ 220-250

ಪೇರಲ 80-100

ಮಿಕ್ಸ್ ಹಣ್ಣು 150-200

ಮದ್ದು ಮಾರಾಟ ಸ್ಥಳ ನಿಗದಿ:

ಹಾವೇರಿ: ಗಣೇಶ ಚತುರ್ಥಿ ಹಬ್ಬದ ಅಂಗವಾಗಿ ಸಾರ್ವಜನಿಕರ ಸುರಕ್ಷತೆ ಹಿತದೃಷ್ಟಿಯಿಂದ ಹಾಗೂ ಅಹಿತಕರ ಘಟನೆಗಳನ್ನು ತಪ್ಪಿಸಲು ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ ಸೆ.10ರಿಂದ ಸೆ.24ರ ವರೆಗೆ ಮದ್ದು ಮಾರಾಟ ಮಾಡಲು ಜಿಲ್ಲೆಯ ವಿವಿಧೆಡೆ ಸ್ಥಳ ನಿಗದಿಗೊಳಿಸಿ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಆದೇಶ ಹೊರಡಿಸಿದ್ದಾರೆ.

ಅಧಿಕೃತವಾಗಿ ಪರವಾನಿಗೆ ಪಡೆದ ಮಾರಾಟಗಾರರು ಮಾತ್ರ ಕೇವಲ ಹಸಿರು ಪಟಾಕಿಗಳನ್ನಷ್ಟೇ ತಾತ್ಕಾಲಿಕ ಶೆಡ್ಡುಗಳನ್ನು ಅಗ್ನಿಶಾಮಕ ಇಲಾಖೆಯ ನಿರ್ದೇಶನದಂತೆ ನಿರ್ಮಿಸಿಕೊಂಡು, ಎಲ್ಲ ಸುರಕ್ಷತಾ ವ್ಯವಸ್ಥೆಗಳನ್ನು ಅಳವಡಿಸಿಕೊಂಡು, ಆಯಾ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ ಹಾಗೂ ಗ್ರಾಮ ಪಂಚಾಯತಿಯವರಿಂದ ಪ್ರತ್ಯೇಕ ಅನುಮತಿ, ನಿರಾಕ್ಷೇಪಣಾ ಪತ್ರ ಪಡೆದುಕೊಂಡು ಮಾರಾಟ ಮಾಡಲು ಆದೇಶಿಸಲಾಗಿದೆ.

ಮದ್ದು ಮಾರಾಟ ಸ್ಥಳ:

ಹಾವೇರಿ ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನ, ಹೊಸರಿತ್ತಿ ಪ್ಲಾಟ್‌ನಲ್ಲಿ, ರಾಣಿಬೆನ್ನೂರು ತಾಲೂಕು ಕ್ರೀಡಾಂಗಣ, ಮೆಡ್ಲೇರಿ ಬಯಲು ಜಾಗ, ಹಲಗೇರಿ ಬಯಲು ಜಾಗ, ಬ್ಯಾಡಗಿ ತಾಲೂಕು ಕ್ರೀಡಾಂಗಣ, ಹಿರೇಕೆರೂರು ಪೊಲೀಸ್ ಮೈದಾನದ ಬಯಲು ಪ್ರದೇಶ, ಚಿಕ್ಕೇರೂರು ಗ್ರಾಮ ಪಂಚಾಯತಿ ಖುಲ್ಲಾ ಜಾಗೆ, ಹಂಸಭಾವಿ ಗ್ರಾಮದ ಖುಲ್ಲಾ ಜಾಗೆ, ರಟ್ಟಿಹಳ್ಳಿ ಪಟ್ಟಣದ ಖುಲ್ಲಾ ಜಾಗೆ, ಮಾಸೂರ ಗ್ರಾಮದ ಖುಲ್ಲಾ ಜಾಗೆ ಹಾಗೂ ಹಿರೇಮೊರಬ ಗ್ರಾಮದ ಖುಲ್ಲಾ ಜಾಗೆ, ಶಿಗ್ಗಾಂವಿ ಪುರಸಭೆ ವ್ಯಾಪ್ತಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಬಯಲು ಜಾಗೆ, ಬಂಕಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಯಲು ಪ್ರದೇಶ, ತಡಸ ಗ್ರಾ.ಪಂ.ಆಸ್ತಿ, ಮುತ್ತಳ್ಳಿ ಬಯಲು ಜಾಗೆ, ಹುಲಗೂರ ಗ್ರಾ.ಪಂ. ಖುಲ್ಲಾ ಜಾಗೆ, ಸವಣೂರ ಹಾಗೂ ಹಾನಗಲ್ಲ ತಾಲೂಕು ಕ್ರೀಡಾಂಗಣ, ಅಕ್ಕಿಆಲೂರ ಗ್ರಾಪಂ ಖುಲ್ಲಾ ಜಾಗೆ ನಿಗಪಡಿಸಲಾಗಿದೆ.