ನಗರಸಭೆ ಬಳಿ ಗಣೇಶ ಆಗಮಿಸಿದಾಗ ವಿವಿಧ ವರ್ತಕರಿಂದ ಬೃಹತ್‌ ಗಾತ್ರದ ಹೂವಿನ ಹಾರ ಗಣೇಶಗೆ ಅರ್ಪಿಸಲಾಯಿತು

ಹರಪನಹಳ್ಳಿ: ವಿಶ್ವ ಹಿಂದೂ ಪರಿಷತ್ತು ಹಾಗೂ ಬಜರಂಗದಳದವರು ಇಲ್ಲಿಯ ಕೋಟೆ ಆಂಜನೇಯ ದೇವಾಲಯದ ಆವರಣದಲ್ಲಿ ಪ್ರತಿಷ್ಟಾಪಿಸಿದ್ದ ಹಿಂದೂ ಮಹಾ ಗಣಪತಿಯ 11ನೇ ದಿನದ ವಿಸರ್ಜನೆಯ ದಿನ ಗುರುವಾರ ಬೃಹತ್‌ ಶೋಭಾಯಾತ್ರೆ ಅತ್ಯಂತ ವೈಭವದಿಂದ ಜರುಗಿತು.

ಕೋಟೆ ಆಂಜನೇಯ ದೇವಸ್ಥಾನ ಆವರಣದಿಂದ ಮದ್ಯಾಹ್ನ 3.55ಕ್ಕೆ ಮೆರವಣಿಗೆ ಆರಂಭವಾಯಿತು. ಹರಿಹರ ವೃತ್ತಕ್ಕೆ ಆಗಮಿಸಿದಾಗ ಅಲ್ಲಿ ಹರಾಜು ಪ್ರಕ್ರಿಯೆ ಜರುಗಿತು. ಲಡ್ಡು ಪ್ರಸಾದವನ್ನು ತಳವಾರ ನಾಗರಾಜ ಎಂಬಾತ ₹20 ಸಾವಿರಗಳಿಗೆ, ನಾಣ್ಯದ ಹಾರವನ್ನು ಹರಪನಹಳ್ಳಿ ಶ್ರೀಧರ ಎಂಬುವವರು ₹37 ಸಾವಿರಕ್ಕೆ, ನೋಟಿನ ಹಾರವನ್ನು ತಳವಾರ ನಾಗರಾಜ ₹71 ಸಾವಿರಕ್ಕೆ, ಗೋಡಂಬಿ ಹಾರವನ್ನು ಚಿಕ್ಕೇರಿ ನಾಗರಾಜ ₹21 ಸಾವಿರಕ್ಕೆ, ಮುತ್ತಿನ ಹಾರವನ್ನು ವಾಲ್ಮೀಕಿ ನಗರದ ರಾಜಪ್ಪ ₹17 ಸಾವಿರಕ್ಕೆ, ದೊಡ್ಡ ನಾಣ್ಯದ ಹಾರವನ್ನು ಬಾಲ ಗಣಪತಿ ಸಮಿತಿಯವರು ₹55 ಸಾವಿರಕ್ಕೆ, ಬೆಳ್ಳಿಯ ಕಡಬಿನ ಹಾರವನ್ನು ಜೋಯಿಸರ ಕೇರಿಯ ಪ್ರಜ್ವಲ್‌ ₹ 92 ಸಾವಿರಕ್ಕೆ, ಬೆಳ್ಳಿ ಪೂಜಾ ಗಣಪವನ್ನು ವರಕೇರಿ ಅಂಜಿನಪ್ಪ ₹ 62 ಸಾವಿರಕ್ಕೆ, ಕೇಸರಿ ಧ್ವಜವನ್ನು ಗುಂಡಗತ್ತಿ ಮಾರುತಿ ₹29 ಸಾವಿರಕ್ಕೆ ಹರಾಜಿನಲ್ಲಿ ಪಡೆದುಕೊಂಡರು.

ಹರಾಜು ಪ್ರಕ್ರಿಯೆ ನಂತರ ಹರಿಹರ ವೃತ್ತದಿಂದ ಡಿಜೆ ಧ್ವನಿವರ್ಧಕದ ಮೂಲಕ ಸಾವಿರಾರು ಜನರ ಮಧ್ಯ ಆರಂಭವಾದ ಮೆರವಣಿಗೆಗೆ ತೆಗ್ಗಿನಮಠದ ವರಸದ್ಯೋಜಾತ ಸ್ವಾಮೀಜಿ ಹಾಗೂ ಹಿರೇಹಡಗಲಿಯ ಅಭಿನವ ಹಾಲಪ್ಪಜ್ಜ ಸ್ವಾಮೀಜಿಗಳು ಚಾಲನೆ ನೀಡಿದರು.

ಮೆರವಣಿಗೆ ಸಂದರ್ಭದಲ್ಲಿ ದಾರಿಯಲ್ಲಿ ಗೆಳೆಯರ ಬಳಗ, ದುರ್ಗಾಂಬ ಎಗ್‌ ರೈಸ್‌ ಸೆಂಟರ್, ಪವನ್‌ ಎಗ್‌ ರೈಸ್‌ ಸೆಂಟರ, ಕೋಟೆ ಆಂಜನೇಯ ಆಟೋ ನಿಲ್ದಾಣದ ಕಮಿಟಿಯವರಿಂದ ಅನ್ನ ಸಂತರ್ಪಣೆ ಜರುಗಿತು. ನಗರಸಭೆ ಬಳಿ ಗಣೇಶ ಆಗಮಿಸಿದಾಗ ವಿವಿಧ ವರ್ತಕರಿಂದ ಬೃಹತ್‌ ಗಾತ್ರದ ಹೂವಿನ ಹಾರ ಗಣೇಶಗೆ ಅರ್ಪಿಸಲಾಯಿತು.

ಹೀಗೆ ಹೊಸಪೇಟೆ ರಸ್ತೆ ಮೂಲಕ ಹಳೆಬಸ್‌ ನಿಲ್ದಾಣದಲ್ಲಿ ಸ್ವಲ್ಪ ಹೊತ್ತು ಡಿಜೆ ಸೌಂಡ್‌ ಗೆ ಯುವಕ, ಯುವತಿಯರು, ವೃದ್ದರು ವಯಸ್ಸಿನ ಭೇದ ಭಾವವಿಲ್ಲದೆ ಕುಣಿದು ಕುಪ್ಪಳಿಸಿದರು. ಪ್ರವಾಸಿ ಮಂದಿರ ಸರ್ಕಲ್‌ ಬಳಿ ಡಿಜೆ ಬಂದ್‌ ಮಾಡಲಾಯಿತು. ಅಲ್ಲಿಂದ ಗಣೇಶನನ್ನು ನೇರವಾಗಿ ಕಾಯಕದಹಳ್ಳಿ ರಸ್ತೆಯಲ್ಲಿ ರುವ ನಾಯಕನಕೆರೆ ಬಳಿ ನಗರಸಭೆಯವರು ನಿರ್ಮಿಸಿರುವ ವಿಶಾಲವಾದ ಗುಂಡಿಯಲ್ಲಿ ವಿಸರ್ಜನೆ ಮಾಡಲಾಯಿತು.

ವಿಜಯನಗರ ಎಸ್ಪಿ ಎಸ್.ಜಾಹ್ನವಿ ಆಗಮಿಸಿ ಬಂದೋಬಸ್ತ್‌ ಪರಿಶೀಲಿಸಿದರು. ಡಿವೈಎಸ್ಪಿ ಡಾ. ಸಂತೋಷ ಚವ್ಹಾಣ, ಸಿಪಿಐ ಮಹಂತೇಶ ಸಜ್ಜನ ಹಾಗೂ ಬೇರೆ ಬೇರೆ ಕಡೆಯಿಂದ ಆಗಮಿಸಿದ್ದ ಪೊಲೀಸ್‌ ಅಧಿಕಾರಿಗಳು, ಸಾಕಷ್ಟು ಸಿಬ್ಬಂದಿ, ಡಿಆರ್‌ ವಾಹನಗಳು ಕಟ್ಟೆಚ್ಚರ ವಹಿಸಿದ್ದರು.