ಸಾರಾಂಶ
- ಮೆರವಣಿಗೆ ಬಜರಂಗದಳ ಮುಖಂಡ ಪ್ರಭಂಜನ್ ಸೂರ್ಯ ಚಾಲನೆ । ಶ್ರೀಗಳು, ಗಣ್ಯರ ಉಪಸ್ಥಿತಿ - - - ಕನ್ನಡಪ್ರಭ ವಾರ್ತೆ ಚನ್ನಗಿರಿ
ಪಟ್ಟಣದ ಊರ ಬಾಗಿಲ ಶ್ರೀ ಹನುಮಂತ ದೇವರ ದೇವಾಲಯದ ಸಭಾ ಮಂಟಪದಲ್ಲಿ ವಿಶ್ವ ಹಿಂದೂ ಪರಿಷತ್ತು-ಬಜರಂಗ ದಳ ವತಿಯಿಂದ ಪ್ರತಿಷ್ಠಾಪಿಸಿದ್ದ ಹಿಂದೂ ಮಹಾಗಣಪತಿ ಮೂರ್ತಿ ಶೋಭಾಯಾತ್ರೆ, ವಿಸರ್ಜನೆ ಕಾರ್ಯಕ್ರಮ ಭಾನುವಾರ ಅದ್ಧೂರಿಯಾಗಿ ನಡೆಯಿತು.ಸಭಾ ಮಂಟಪದಿಂದ ಮಧ್ಯಾಹ್ನ 12 ಗಂಟೆಗೆ ಅಲಂಕೃತ ಟ್ರ್ಯಾಕ್ಟರ್‌ನಲ್ಲಿ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಮಹಾಸ್ವಾಮೀಜಿ, ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ, ತುಮ್ಕೋಸ್ ಮಾಜಿ ಅಧ್ಯಕ್ಷ ಎಚ್.ಎಸ್. ಶಿವಕುಮಾರ್, ಬಜರಂಗದಳದ ದಕ್ಷಿಣ ಪ್ರಾಂತ ಸಂಯೋಜಕ ಪ್ರಭಂಜನ್ ಸೂರ್ಯ ಮೆರವಣಿಗೆ ಚಾಲನೆ ವೇಳೆ ಉಪಸ್ಥಿತರಿದ್ದರು. ಚಂಡೆ, ನಾಸಿಕ್ ಡೋಲ್, ತಮಟೆ, ಗೊಂಬೆ ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಶೋಭಾಯಾತ್ರೆಗೆ ಮೆರಗು ನೀಡಿದವು. ಡಿ.ಜೆ,ಯ ಸಂಗೀತಕ್ಕೆ ಯುವಕರು, ಮಹಿಳೆಯರು, ಮಕ್ಕಳು ಹೆಜ್ಜೆ ಹಾಕಿ, ಸಂಭ್ರಮಿಸಿದರು. ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ, ಹಿಂದೂ ಸ್ವರಾಜ್ಯ ಸಂಸ್ಥಾಪಕ ಛತ್ರಪತಿ ಶಿವಾಜಿ, ಭಾರತಮಾತೆ, ಶ್ರೀರಾಮ, ಆಂಜನೇಯ ಮೂರ್ತಿಗಳನ್ನು ಹೊತ್ತ ವಾಹನಗಳು ಶೋಭಾಯಾತ್ರೆಯಲ್ಲಿ ವಿಶೇಷ ಆಕರ್ಷಣೆಯಾಗಿದ್ದವು.
ಮೆರವಣಿಗೆ ಮಾರ್ಗದ ಉದ್ದಕ್ಕೂ ಕೇಸರಿ ಬಾವುಟಗಳು, ತೋರಣಗಳಿಂದ ಸಿಂಗರಿಸಲಾಗಿತ್ತು. ವೃತ್ತಗಳಲ್ಲಿ ಚನ್ನಗಿರಿಯ ವೀರ ಧೋಂಡಿಯಾವಾಘ್, ಇಮ್ಮಡಿ ಪುಲಿಕೇಶಿ, ವೀರ ಸಾವರ್ಕರ್, ಆಂಜನೇಯ ಸ್ಥಬ್ಧಚಿತ್ರಗಳು ಗಮನ ಸೆಳೆಯುವಂತಿದ್ದವು. ಸಾವಿರಾರು ಜನರು ಕೇಸರಿ ಬಣ್ಣದ ಶಾಲು, ಧ್ವಜಗಳನ್ನು ಹಿಡಿದು ತಿರುಗಿಸುತ್ತಾ ಜೈ ಶ್ರೀರಾಮ್ ಎಂಬ ಘೋಷಣೆಗಳ ಮೊಳಗಿಸಿದರು.ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಗಣಪತಿ ಮೂರ್ತಿಗೆ ಬೃಹತ್ ಗಾತ್ರದ ಹಾರಗಳನ್ನು ಹಾಕಿ, ಪುಷ್ಪವೃಷ್ಠಿಗೈದು ಭಕ್ತಿ ಸಮರ್ಪಿಸಿದರು. ಅಲ್ಲಲ್ಲಿ ಜನರಿಗೆ ತಂಪುಪಾನೀಯ, ಕುಡಿಯುವ ನೀರು, ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.
ಕಾನೂನು ಸುವ್ಯಸ್ಥೆ ಕಾಪಾಡುವ ಉದ್ದೇಶದಿಂದ ಐಜಿಪಿ ರಮೇಶ್, ಎಎಸ್‌ಪಿ ಮಂಜುನಾಥ್, ಸಂತೋಷ್ ವಿಜಯಕುಮಾರ್, ಸ್ಯಾಮ್ ವರ್ಗೀಸ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.- - -
ಬಾಕ್ಸ್* ಚಾಲನೆ ವೇಳೆ ಬೆಂಬಲಿಗರ ವಾಕ್ಸಮರ
ಗಣೇಶ ಮೆರಣಿಗೆಗೆ ಚಾಲನೆ ನೀಡುವ ವಿಚಾರದಲ್ಲಿ ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ, 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಎಚ್.ಎಸ್. ಶಿವಕುಮಾರ್ ಬೆಂಬಲಿಗರ ಮಧ್ಯೆ ವಾಕ್ಸಮರ ಸೇರ್ಪಟ್ಟು ತಳ್ಳಾಟ-ನೂಕಾಟ ಸಹ ನಡೆಯಿತು. ಮೆರಣಿಗೆಗೆ ಸಿದ್ಧಗೊಳಿಸಿದ್ದ ವಾಹನ ಬಳಿ ಬಂದ ಉಭಯ ಜನನಾಯಕರು ವಾಹನದ ಮೇಲೇರಲು ಮುಂದಾದರು. ಆಗ ಸಮಿತಿಯ ಪ್ರಮುಖರು ಈ ಇಬ್ಬರನ್ನೂ ಬಿಟ್ಟು, ಬಜರಂಗ ದಳದ ದಕ್ಷಿಣ ದಕ್ಷಿಣ ಪ್ರಾಂತದ ಸಂಯೋಜಕ ಪ್ರಭಂಜನ್ ಸೂರ್ಯ ಅವರಿಂದ ಗಣಪತಿ ಮೆರಣಿಗೆಗೆ ಚಾಲನೆ ನೀಡಲಾಯಿತು.ಶೋಭಾಯಾತ್ರೆ ಗಣಪತಿ ವೃತ್ತ ತಲುಪುತ್ತಿದ್ದಂತೆಯೇ ಡಿ.ಜೆ. ಸೌಂಡ್ ಸಿಸ್ಟಂ ಹೊತ್ತ ವಾಹನದ ಮೇಲೆ ಬಿಜೆಪಿ ಮುಖಂಡ ಮಾಡಾಳು ಮಲ್ಲಿಕಾರ್ಜುನ್ ಕುಳಿತುಕೊಂಡಿದ್ದರು. ಎಚ್.ಎಸ್. ಶಿವಕುಮಾರ್ ಬೆಂಬಲಿಗರು ಇದಕ್ಕೆ ಅಕ್ಷೇಪಣೆ ವ್ಯಕ್ತ ಪಡಿಸಿ, ಕೆಲಕಾಲ ಡಿ.ಜೆ. ಸೌಂಡ್ ಬಂದ್ ಮಾಡಿದರು. ಆಗ ಇಬ್ಬರೂ ಮುಖಂಡರ ಬೆಂಬಲಿಗರ ಮಧ್ಯೆ ವಾಗ್ವಾದ ನಡೆಯಿತು. ಅನಂತರ ಡಿ.ಜೆ. ಸೌಂಡ್ಸ್ ಹೊತ್ತ ವಾಹನದ ಒಂದು ತುದಿಯಲ್ಲಿ ಎಚ್.ಎಸ್. ಶಿವಕುಮಾರ್, ಮತ್ತೊಂದು ತುದಿಯಲ್ಲಿ ಮಾಡಾಳು ಮಲ್ಲಿಕಾರ್ಜುನ್ ಅವರನ್ನು ಕೂರಿಸಿ, ಮೆರವಣಿಗೆ ಮುಂದುವರಿಸಿದ್ದು ವಿಶೇಷವಾಗಿತ್ತು.
- - - -22ಕೆಸಿಎನ್ಜಿ1: ಗಣಪತಿ ಹೊತ್ತ ವಾಹನವನ್ನು ಚಾಲನೆ ಮಾಡುತ್ತಾ ಶೋಭಾಯಾತ್ರೆಗೆ ಚಾಲನೆ ನೀಡಿದ ಬಜರಂಗ ದಳದ ದಕ್ಷಿಣ ಪ್ರಾಂತ ಸಂಯೋಜಕ ಪ್ರಭಂಜನ್ ಸೂರ್ಯ. -22ಕೆಸಿಎನ್ಜಿ2: ಡಿ.ಜೆ. ಸೌಂಡ್‌ನ ಸಂಗೀತಕ್ಕೆ ಹೆಜ್ಜೆ ಹಾಕುತ್ತೀರುವ ಯುವಜನರು. -22ಕೆಸಿಎನ್‌ಜಿ3: ಗಣಪತಿ ಮೆರವಣಿಗೆಗೆ ಚಾಲನೆಯಲ್ಲಿ ಪಾಲ್ಗೊಂಡ ಹಿರೇಮಠದ ಶ್ರೀಗಳು, ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ, ತುಮ್ಕೋಸ್ ಮಾಜಿ ಅಧ್ಯಕ್ಷ ಎಚ್.ಎಸ್. ಶಿವಕುಮಾರ್.