ಪಾಂಚಜನ್ಯ ಗಣಪತಿ ಅದ್ಧೂರಿ ಶೋಭಾಯಾತ್ರೆ

| Published : Sep 06 2025, 01:01 AM IST

ಸಾರಾಂಶ

ಪಾಂಚಜನ್ಯ ಗಣಪತಿ ಶೋಭಾಯಾತ್ರೆಯು ಸಾಲಗಾಮೆ ರಸ್ತೆ, ಅರಳೇಪೇಟೆ ರಸ್ತೆ, ಬಸವೇಶ್ವರ ದೇವಸ್ಥಾನ, ಹೊಸಲೈನ್ ರಸ್ತೆ, ಬಿ.ಎಂ. ರಸ್ತೆ, ಸುಭಾಷ್ ಚೌಕ ಇತರೆ ರಾಜ ಬೀದಿಗಳಲ್ಲಿ ಸಾಗಿತು. ಶ್ರೀರಾಮನ ಪ್ರತಿಮೆ, ಕೆಂಪೇಗೌಡ, ಯೋಧನ ಕಟೌಟ್, ಗೋವುಗಳು ಹಾಗೂ ಡಿಜೆಗಳು ಆಕರ್ಷಣೆಯಾಗಿದ್ದವು. ಶೋಭಾಯಾತ್ರೆಯಲ್ಲಿ ಶಾಸಕರಾದ ಎಚ್.ಪಿ. ಸ್ವರೂಪ್ ಪ್ರಕಾಶ್, ಸಿಮೆಂಟ್ ಮಂಜು, ಎಚ್.ಕೆ. ಸುರೇಶ್, ಮಾಜಿ ಶಾಸಕ ಹಾಗೂ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂ ಜೆ. ಗೌಡ ಪಾಲ್ಗೊಂಡಿದ್ದರು.

ಕನ್ನಡಪ್ರಭ ವಾರ್ತೆ ಹಾಸನ

ನಗರದ ಜಿಲ್ಲಾ ಕಸಾಪ ಭವನ ಆವರಣದಲ್ಲಿ ಪ್ರತಿಷ್ಠಾಪಿತವಾಗಿದ್ದ ಪಾಂಚಜನ್ಯ ಹಿಂದೂ ಗಣಪತಿ ವಿಸರ್ಜನಾ ಶೋಭಾಯಾತ್ರೆ ಬುಧವಾರ ಮಧ್ಯಾಹ್ನ ಅದ್ಧೂರಿಯಾಗಿ ಆರಂಭಗೊಂಡಿತು. ಜನರು ಡಿಜೆ ಹಾಡಿಗೆ ಕುಣಿದು ಕುಪ್ಪಳಿಸಿದರು. ಮಧ್ಯಾಹ್ನ ೧.೪೦ಕ್ಕೆ ಪ್ರಾರಂಭವಾದ ಪಾಂಚಜನ್ಯ ಗಣಪತಿ ಶೋಭಾಯಾತ್ರೆಯು ಸಾಲಗಾಮೆ ರಸ್ತೆ, ಅರಳೇಪೇಟೆ ರಸ್ತೆ, ಬಸವೇಶ್ವರ ದೇವಸ್ಥಾನ, ಹೊಸಲೈನ್ ರಸ್ತೆ, ಬಿ.ಎಂ. ರಸ್ತೆ, ಸುಭಾಷ್ ಚೌಕ ಇತರೆ ರಾಜ ಬೀದಿಗಳಲ್ಲಿ ಸಾಗಿತು. ಶ್ರೀರಾಮನ ಪ್ರತಿಮೆ, ಕೆಂಪೇಗೌಡ, ಯೋಧನ ಕಟೌಟ್, ಗೋವುಗಳು ಹಾಗೂ ಡಿಜೆಗಳು ಆಕರ್ಷಣೆಯಾಗಿದ್ದವು. ಶೋಭಾಯಾತ್ರೆಯಲ್ಲಿ ಶಾಸಕರಾದ ಎಚ್.ಪಿ. ಸ್ವರೂಪ್ ಪ್ರಕಾಶ್, ಸಿಮೆಂಟ್ ಮಂಜು, ಎಚ್.ಕೆ. ಸುರೇಶ್, ಮಾಜಿ ಶಾಸಕ ಹಾಗೂ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂ ಜೆ. ಗೌಡ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿದ್ದೇಶ್ ನಾಗೇಂದ್ರ, ಪಾಂಚಜನ್ಯ ಗಣೇಶ ಸಮಿತಿಯ ಅಧ್ಯಕ್ಷ ವಾಸು, ಗೌರವಾಧ್ಯಕ್ಷ ದಯಾನಂದ್, ಕಾರ್ಯದರ್ಶಿ ವೇಣುಗೋಪಾಲ್, ರವಿಸೋಮು ಸೇರಿದಂತೆ ನೂರಾರು ಹಿಂದೂಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು, ವಿದ್ಯಾರ್ಥಿ-ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಮೆರವಣಿಗೆಯಲ್ಲಿ ಮೂವರು ಡಿಜೆ ಸೌಂಡ್‌ಗಳ ತಾಳಕ್ಕೆ ಯುವಕ-ಯುವತಿಯರು ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಮಧ್ಯೆ ಮಳೆ ಸುರಿದರೂ ಉತ್ಸಾಹ ಕಡಿಮೆಯಾಗದೆ, ನೆನೆಯುತ್ತಲೇ ಜನರು ನೃತ್ಯ-ಸಂಗೀತದಲ್ಲಿ ತೊಡಗಿದ್ದರು. ಶ್ರೀಕೃಷ್ಣ, ಕೆಂಪೇಗೌಡ, ಆಪರೇಷನ್ ಸಿಂದೂರ, ಅಯೋಧ್ಯ ರಾಮ, ಡಾ. ಬಿ.ಆರ್. ಅಂಬೇಡ್ಕರ್, ಕಾಮಧೇನು ಮುಂತಾದ ಸ್ತಬ್ಧಚಿತ್ರಗಳು ವಿಶೇಷ ಆಕರ್ಷಣೆ ಆಗಿದ್ದವು. ಕೇಸರಿ ಬಾವುಟಗಳು ಮೆರವಣಿಗೆಗೆ ಶೋಭೆ ಹೆಚ್ಚಿಸಿದ್ದವು. ಜನಸಂದಣಿಗೆ ಅನ್ನಸಂತರ್ಪಣೆ, ಪಾನಕ ವಿತರಣೆ ವ್ಯವಸ್ಥೆ ಕೂಡ ಮಾಡಲಾಗಿತ್ತು.ಸಮಾರಂಭದ ಹಿನ್ನೆಲೆಯಲ್ಲಿ ಮುನ್ನೆಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಎಸ್ಪಿ ಮೊಹಮದ್ ಸುಜೀತಾ ಅವರ ಮಾರ್ಗದರ್ಶನದಲ್ಲಿ ೮೦೦ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜಿಸಲ್ಪಟ್ಟಿದ್ದರು. ಭದ್ರತೆಗಾಗಿ ಅಕ್ಕಪಕ್ಕದ ಜಿಲ್ಲೆಗಳಿಂದಲೂ ಸಿಬ್ಬಂದಿ ಕರೆಸಿಕೊಳ್ಳಲಾಯಿತು. ದಕ್ಷಿಣ ವಲಯ ಐಜಿಪಿ ಡಾ. ಬೋರಲಿಂಗಯ್ಯ ಸ್ವತಃ ಹಾಸನ ನಗರದಲ್ಲಿ ಶಿಬಿರ ಹೂಡಿ ಪರಿಸ್ಥಿತಿ ಪರಿಶೀಲಿಸಿದರು ಶಾಂತಿ ಕಾಪಾಡಿದರು. ಶೋಭಾಯಾತ್ರೆ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಹಾಸನ ನಗರದಲ್ಲಿ ಬೆಳಗ್ಗೆಯಿಂದ ಮಧ್ಯರಾತ್ರಿವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿತ್ತು.

ಭಕ್ತಿ, ಸಂಭ್ರಮ ಮತ್ತು ಭದ್ರತೆ ಆಗಿ ನಡೆದ ಪಾಂಚಜನ್ಯ ಗಣಪತಿ ಶೋಭಾಯಾತ್ರೆ, ಹಾಸನ ನಗರದ ಜನರಿಗೆ ಸ್ಮರಣೀಯ ಕ್ಷಣಗಳನ್ನು ನೀಡಿತು. ಮೆರವಣಿಗೆಯಲ್ಲಿ ಭಾಗವಹಿಸಿದ್ದ ಮಾಜಿ ಶಾಸಕ ಪ್ರೀತಂ ಜೆ. ಗೌಡ ಮಾಧ್ಯಮದೊಂದಿಗೆ ಮಾತನಾಡಿ, ಪಾಂಚಜನ್ಯ ಹಿಂದೂ ಗಣಪತಿ ವಿಸರ್ಜನಾ ಅಂಗವಾಗಿ ಇಡೀ ಹಿಂದೂ ಜನಾಂಗ ಒಂದಾಗಿ ಶೋಭಾಯಾತ್ರೆ ನಡೆಯುತ್ತಿದೆ. ಯಾವುದೇ ರಾಜಕೀಯ ಅಪೇಕ್ಷೆ ಇಲ್ಲದೆ ಪಾಂಚಜನ್ಯ ಗಣೇಶೋತ್ಸವ ನಡೆಸಲಾಗುತ್ತಿದೆ. ಹಿಂದೆ ೫೦೦ ಜನ ಇದ್ದಂತಹ ಪಾಂಚಜನ್ಯ ಮೆರವಣಿಗೆಯಲ್ಲಿ ಇಂದು ೨೦ ರಿಂದ ೨೫ ಸಾವಿರ ಜನರು ಸೇರುತ್ತಿದ್ದಾರೆ ಎಂದರು.

ಇದೇ ವೇಳೆ ಪಾಂಚಜನ್ಯ ಹಿಂದೂ ಗಣಪತಿ ಸಮಿತಿ ಗೌರವಾಧ್ಯಕ್ಷ ದಯಾನಂದ್, ಅಧ್ಯಕ್ಷ ವಾಸು, ಮೋಹನ್, ಖಜಾಂಚಿ ಸಾಯಿಪ್ರಸಾದ್, ನಿರ್ದೇಶಕ ಶರತ್, ರಕ್ಷಿತ್ ಭಾರಧ್ವಜ್, ಆರ್‌.ಎಸ್.ಎಸ್. ಮುಖಂಡ ಮೋಹನ್, ವಿಕಾಸ್, ಅಭಿ, ಶರತ್, ಮಹಿಪಾಲ್, ಮನು, ಮೊಗಣ್ಣಗೌಡ, ದಾಸರಕೊಪ್ಪಲು, ಮಂಜು, ಕಾಂತರಾಜು ಇತರರು ಉಪಸ್ಥಿತರಿದ್ದರು.