ಹಾವೇರಿ ನಗರದ ಕಲ್ಲು ಮಂಟಪ ರಸ್ತೆಯಲ್ಲಿ ಗಣೇಶ ಚತುರ್ಥಿಯಂದು ಪ್ರತಿಷ್ಠಾಪಿಸಿದ್ದ ಹಿಂದೂ ಮಹಾ ಗಣಪತಿ ಮೂರ್ತಿಯ ವಿಸರ್ಜನೆ ಅಂಗವಾಗಿ ಶನಿವಾರ ಶೋಭಾಯಾತ್ರೆ ಅದ್ಧೂರಿಯಾಗಿ ನಡೆಯಿತು. ಕಳೆದ 42 ದಿನಗಳ ಕಾಲ ಭಕ್ತಿಯಿಂದ ಪೂಜಿಸಲ್ಪಟ್ಟ ಗಣೇಶ ಮೂರ್ತಿಗೆ ಭಕ್ತರು ಭಾವಪೂರ್ಣ ವಿದಾಯ ಹೇಳಿದರು.

ಹಾವೇರಿ: ನಗರದ ಕಲ್ಲು ಮಂಟಪ ರಸ್ತೆಯಲ್ಲಿ ಗಣೇಶ ಚತುರ್ಥಿಯಂದು ಪ್ರತಿಷ್ಠಾಪಿಸಿದ್ದ ಹಿಂದೂ ಮಹಾ ಗಣಪತಿ ಮೂರ್ತಿಯ ವಿಸರ್ಜನೆ ಅಂಗವಾಗಿ ಶನಿವಾರ ಶೋಭಾಯಾತ್ರೆ ಅದ್ಧೂರಿಯಾಗಿ ನಡೆಯಿತು. ಕಳೆದ 42 ದಿನಗಳ ಕಾಲ ಭಕ್ತಿಯಿಂದ ಪೂಜಿಸಲ್ಪಟ್ಟ ಗಣೇಶ ಮೂರ್ತಿಗೆ ಭಕ್ತರು ಭಾವಪೂರ್ಣ ವಿದಾಯ ಹೇಳಿದರು.

ಸ್ಥಳೀಯ ಕಾಗಿನೆಲೆ ವೃತ್ತದ ಬಳಿ ಇರುವ ಕಲ್ಲು ಮಂಟಪ ರಸ್ತೆಯಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಎಲ್‌ಇಡಿ ಲೈಟ್ ವಾಲ್ವ್ ಮೇಲೆ ಕುಳಿತಿರುವ ಭಂಗಿಯಲ್ಲಿದ್ದ ಗಣೇಶ ಮೂರ್ತಿ ಶೋಭಾಯಾತ್ರೆಯ ಪ್ರಮುಖ ಆಕರ್ಷಣೆಯಾಗಿತ್ತು. ಮೂರ್ತಿಯ ವೈಶಿಷ್ಟ್ಯವನ್ನು ಕಣ್ತುಂಬಿಕೊಳ್ಳಲು ರಸ್ತೆಯುದ್ದಕ್ಕೂ ಜನರು ನೆರೆದಿದ್ದರು.

ಹರಸೂರು ಬಣ್ಣದಮಠದ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ಯುವ ಉದ್ಯಮಿ ಗುಡ್ಡನಗೌಡ ಅಂದಾನಿಗೌಡ್ರ, ಉಮೇಶ ಕರಿಗಾರ ಸೇರಿದಂತೆ ಪ್ರಮುಖರು ಬೃಹತ್ ಶೋಭಾಯಾತ್ರೆಗೆ ಚಾಲನೆ ನೀಡಿದರು. ಕಲ್ಲು ಮಂಟಪ ರಸ್ತೆಯಿಂದ ಆರಂಭಗೊಂಡ ಶೋಭಾಯಾತ್ರೆ ಸುಭಾಸ್ ವೃತ್ತ, ರೈಲ್ವೆ ಸ್ಟೇಷನ್ ರಸ್ತೆ, ಪುರದ ಓಣಿ, ಎಂ.ಜಿ. ರಸ್ತೆ, ದ್ಯಾಮವ್ವನ ಪಾದಗಟ್ಟಿ, ಜೆ.ಪಿ. ವೃತ್ತ ಹಾಗೂ ಹೊಸಮನಿ ಸಿದ್ದಪ್ಪ ವೃತ್ತದ ಮಾರ್ಗವಾಗಿ ಸಾಗಿತು.

ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿದ ಮೆರವಣಿಗೆಯನ್ನು ವೀಕ್ಷಿಸಲು ಸಾವಿರಾರು ಸಾರ್ವಜನಿಕರು ರಸ್ತೆಯ ಇಕ್ಕೆಲಗಳಲ್ಲಿ ಜಮಾಯಿಸಿದ್ದರು. 42 ದಿನಗಳ ಕಾಲ ಗಣೇಶನ ಆರಾಧನೆ ನಡೆಸಿದ ಬಳಿಕ ನಡೆದ ವಿಸರ್ಜನಾ ಶೋಭಾಯಾತ್ರೆ ಭಕ್ತರ ಸಂಭ್ರಮಕ್ಕೆ ಸಾಕ್ಷಿಯಾಯಿತು. ವಿಶೇಷ ಅಲಂಕಾರ, ಗಣೇಶ ಮೂರ್ತಿಯ ವೈಶಿಷ್ಟ್ಯ ಹಾಗೂ ಯುವಜನರ ಉತ್ಸಾಹದಿಂದ ಹಿಂದೂ ಮಹಾ ಗಣಪತಿಯ ಶೋಭಾಯಾತ್ರೆ ಗಮನ ಸೆಳೆಯಿತು.

ಡಿಜೆ ಹಾಡುಗಳಿಗೆ ಯುವಜನರ ಕುಣಿತ: ಶೋಭಾಯಾತ್ರೆಯಲ್ಲಿ ಮೂರು ಡಿಜೆಗಳು ಯುವಜನರ ಪ್ರಮುಖ ಆಕರ್ಷಣೆಯಾಗಿದ್ದವು. ಸಿನಿಮಾ ಗೀತೆಗಳು ಹಾಗೂ ರಿಮಿಕ್ಸ್ ಹಾಡುಗಳ ಅಬ್ಬರಕ್ಕೆ ಯುವಕರು, ಯುವತಿಯರು ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು. ಮಕ್ಕಳೂ ಸಂಭ್ರಮದಿಂದ ಪಾಲ್ಗೊಂಡು ಶೋಭಾಯಾತ್ರೆಯ ಉತ್ಸಾಹವನ್ನು ಹೆಚ್ಚಿಸಿದರು. ಡಿಜೆ ಸಂಗೀತದ ಲಯಕ್ಕೆ ತಕ್ಕಂತೆ ಯುವಜನರು ಕುಣಿಯುತ್ತಿದ್ದ ದೃಶ್ಯಗಳು ಶೋಭಾಯಾತ್ರೆಗೆ ಮತ್ತಷ್ಟು ಕಳೆ ತಂದವು.

ಪೊಲೀಸ್ ಬಂದೋಬಸ್ತ್: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ ಮಾರ್ಗದರ್ಶನದಲ್ಲಿ ಡಿವೈಎಸ್‌ಪಿ ಗಿರಿಮಲ್ಲ ತಳಕಟ್ಟಿ, ಶಹರ ಸಿಪಿಐ ಮೋತಿಲಾಲ್ ಪವಾರ ನೇತೃತ್ವದ ಪೊಲೀಸ್ ಅಕಾರಿ, ಸಿಬ್ಬಂದಿ ವರ್ಗದವರ ತಂಡ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿತ್ತು. ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಿರುವುದು ಕಂಡುಬಂದಿತು.

ಈ ವೇಳೆ ಮುಖಂಡರಾದ ರಮೇಶ ಆನವಟ್ಟಿ, ವರುಣ ಆನವಟ್ಟಿ, ದೀಪಕ ಮಡಿವಾಳರ, ಆದರ್ಶ ಆನವಟ್ಟಿ, ಸಿದ್ದಪ್ಪ ಕುರಿಯವರ ಸೇರಿದಂತೆ ಹಿಂದೂ ಮಹಾಗಣಪತಿ ಸೇವಾ ಸಮಿತಿ ಪದಾಧಿಕಾರಿಗಳು ಹಾಜರಿದ್ದರು.