ನಗರದ ಪೋಸ್ಟ್ ಸರ್ಕಲ್ ಬಳಿಯ ವಿರಾಟ್ ಹಿಂದೂ ಮಹಾಸಭಾ ಸಮಿತಿಯ ಗಣೇಶ, ಮೆಡ್ಲೇರಿ ರಸ್ತೆ ಗಂಗಾಜಲ ಚೌಡೇಶ್ವರಿ ದೇವಸ್ಥಾನದ ಬಳಿಯ ಅನ್ನದಾತ ಸಂಸ್ಥೆಯ ಗಣೇಶ ಹಾಗೂ ಕಾಕಿ ಗಲ್ಲಿಯ ವಿಜಯಲಕ್ಷ್ಮೀ ಹವ್ಯಾಸಿ ಕ್ರೀಡಾ ಸಂಘದ ಗಣೇಶ ಮೂರ್ತಿಗಳು ತ್ರಿವೇಣಿ ಸಂಗಮದ ರೀತಿಯಲ್ಲಿ ಒಂದಾಗಿ ಮೆರವಣಿಗೆಯಲ್ಲಿ ಸಾಗಿದವು.

ರಾಣಿಬೆನ್ನೂರು: ನಗರದಲ್ಲಿ ಬುಧವಾರ ಸಾರ್ವಜನಿಕ ಗಣೇಶ ಮೂರ್ತಿಗಳ ಸಾಮೂಹಿಕ ಶೋಭಾಯಾತ್ರೆ ಅದ್ಧೂರಿಯಾಗಿ ಜರುಗಿತು. ನಗರದ ಮೂರು ಪ್ರಮುಖ ಗಣೇಶ ಮೂರ್ತಿಗಳು ಒಂದೇ ಮೆರವಣಿಗೆಯಲ್ಲಿ ಸಂಗಮಗೊಂಡಿದ್ದು, ಭಕ್ತರ ಸಂಭ್ರಮಕ್ಕೆ ಸಾಕ್ಷಿಯಾಯಿತು.

ನಗರದ ಪೋಸ್ಟ್ ಸರ್ಕಲ್ ಬಳಿಯ ವಿರಾಟ್ ಹಿಂದೂ ಮಹಾಸಭಾ ಸಮಿತಿಯ ಗಣೇಶ, ಮೆಡ್ಲೇರಿ ರಸ್ತೆ ಗಂಗಾಜಲ ಚೌಡೇಶ್ವರಿ ದೇವಸ್ಥಾನದ ಬಳಿಯ ಅನ್ನದಾತ ಸಂಸ್ಥೆಯ ಗಣೇಶ ಹಾಗೂ ಕಾಕಿ ಗಲ್ಲಿಯ ವಿಜಯಲಕ್ಷ್ಮೀ ಹವ್ಯಾಸಿ ಕ್ರೀಡಾ ಸಂಘದ ಗಣೇಶ ಮೂರ್ತಿಗಳು ತ್ರಿವೇಣಿ ಸಂಗಮದ ರೀತಿಯಲ್ಲಿ ಒಂದಾಗಿ ಮೆರವಣಿಗೆಯಲ್ಲಿ ಸಾಗಿದವು.

ನಗರದ ಅಂಚೆ ವೃತ್ತದಿಂದ ಆರಂಭಗೊಂಡ ಶೋಭಾಯಾತ್ರೆ ದೊಡ್ಡಪೇಟೆ, ಚಕ್ಕಮಕ್ಕಿ ಸರ್ಕಲ್, ಎಂ.ಜಿ. ರಸ್ತೆ, ದುರ್ಗಾ ಸರ್ಕಲ್, ಕುರುಬಗೇರಿ ಕ್ರಾಸ್, ಹಲಗೇರಿ ಕ್ರಾಸ್ ಮೂಲಕ ಬಸ್ ನಿಲ್ದಾಣ ತಲುಪಿತು. ಬಸ್ ನಿಲ್ದಾಣದ ಬಳಿ ಮಹಾ ಮಂಗಳಾರತಿ ಹಾಗೂ ವಿಶೇಷ ಸಿಡಿಮದ್ದು ಪ್ರದರ್ಶನ ನಡೆಯಿತು. ಲಕ್ಷಾಂತರ ಭಕ್ತರು ಹಾಗೂ ಸಾರ್ವಜನಿಕರು ಮೆರವಣಿಗೆಯನ್ನು ಕಣ್ತುಂಬಿಕೊಂಡರು. ಬಳಿಕ ಮೆರವಣಿಗೆ ಎನ್.ವಿ. ಹೋಟೆಲ್‌ವರೆಗೆ ಸಾಗಿತು. ಅಲ್ಲಿಂದ ಹರಿಹರದ ಸಮೀಪ ತುಂಗಭದ್ರಾ ನದಿಯಲ್ಲಿ ಗಣೇಶ ಮೂರ್ತಿಗಳನ್ನು ವಿಸರ್ಜಿಸಲಾಯಿತು.

ಶೋಭಾಯಾತ್ರೆಯಲ್ಲಿ ಮಹಿಳೆಯರು ಮತ್ತು ಪುರುಷರಿಗಾಗಿ ಆಯೋಜಿಸಲಾಗಿದ್ದ ವಿಶೇಷ ನೃತ್ಯ ಕಾರ್ಯಕ್ರಮಗಳು ಪ್ರಮುಖ ಆಕರ್ಷಣೆಯಾಗಿದ್ದವು. ನಾಲ್ಕು ಡಿಜೆಗಳೊಂದಿಗೆ ನಡೆದ ಸಂಗೀತಮಯ ಶೋಭಾಯಾತ್ರೆ ಗಮನ ಸೆಳೆಯಿತು. ಯುವಕರು ಸಂಗೀತದ ತಾಳಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಡೊಳ್ಳು ಕುಣಿತ, ಡ್ರಮ್‌ಸೆಟ್ ಹಾಗೂ ಸಮಾಳ ವಾದ್ಯಗಳ ಸದ್ದು ಮೆರವಣಿಗೆಗೆ ಮತ್ತಷ್ಟು ಮೆರುಗು ನೀಡಿತು.

ಮಾಜಿ ಶಾಸಕ ಅರುಣಕುಮಾರ ಪೂಜಾರ, ವಿರಾಟ್ ಹಿಂದೂ ಮಹಾಸಭಾ ಸಮಿತಿ ಅಧ್ಯಕ್ಷ ನಾಗರಾಜ ಪವಾರ, ಅನ್ನದಾತ ಸಂಸ್ಥೆಯ ನಾಗರಾಜ ಸಾಲಗೇರಿ, ಕಾಕಿ ಗಲ್ಲಿಯ ಹವ್ಯಾಸಿ ಕ್ರೀಡಾ ಸಂಘದ ಅಧ್ಯಕ್ಷ ಲಿಂಗರಾಜ ಬೂದನೂರ, ರಾಯಣ್ಣ ಮಾಕನೂರ, ಅಮೋಘ ಬಾದಾಮಿ, ಮಂಜುನಾಥ ಕಬ್ಬಿಣದ, ಮೈಲಪ್ಪ ಗೋಣಿಬಸಮ್ಮನವರ, ಅಭಿಲಾಷ ಬಾದಾಮಿ, ಮೃತ್ಯುಂಜಯ ಕಾಕೋಳ, ಕೊಟ್ರೇಶ ಕಮದೋಡ, ಮಂಗಳಗೌರಿ ಪೂಜಾರ, ಭಾರತಿ ಜಂಬಗಿ, ಅನಿಲ ಸಿದ್ದಾಳಿ, ರಾಜು ಬಣಕಾರ, ಸುಜಾತ ಆರಾಧ್ಯಮಠ, ಭರಮಪ್ಪ ಪೂಜಾರ, ಕುಬೇರಪ್ಪ ಕೊಂಡಜ್ಜಿ, ಮಾಳಪ್ಪ ಪೂಜಾರ, ಬಸವರಾಜ ಹುಲ್ಲತ್ತಿ, ದಯಾನಂದ ಪಾಟೀಲ, ಜಗದೀಶ ಎಲಿಗಾರ, ಶಿವಕುಮಾರ ಹರ್ಕನಾಳ, ರವಿ ತಳವಾರ, ಸಂತೋಷ ಬೆನ್ನೂರ ಮತ್ತಿತರರಿದ್ದರು.