ಸಾರಾಂಶ
ಹುಬ್ಬಳ್ಳಿ: ಇಸ್ಲಾಂ ಧರ್ಮದ ಪ್ರವರ್ತಕ ಪ್ರವಾದಿ ಮೊಹಮ್ಮದ ಪೈಗಂಬರ್ ಅವರ 1500ನೇ ಜನ್ಮದಿನದ ಅಂಗವಾಗಿ ನಗರದಲ್ಲಿ ಈದ್ ಮಿಲಾದ್ ಹಬ್ಬದ ಆಚರಣೆ ಮತ್ತು ಮೆರವಣಿಗೆ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು.
ನಗರದ ಇಸ್ಲಾಂಪುರ, ಕೇಶ್ವಾಪುರ, ಸಿಬಿಟಿಯಿಂದ ಆರಂಭಗೊಂಡ ಮೆರವಣಿಗೆಗೆ ಮುಸ್ಲಿಂ ಧರ್ಮ ಗುರುಗಳು ಹಾಗೂ ಮುಖಂಡರು ಚಾಲನೆ ನೀಡಿದರು.ಮಧ್ಯಾಹ್ನ ಆರಂಭಗೊಂಡ ಮೆರವಣಿಗೆ ರಾತ್ರಿಯವರೆಗೆ ನಡೆಯಿತು. ಮೆರವಣಿಗೆಯಲ್ಲಿ ಮುಸ್ಲಿಂ ಬಂಧುಗಳು ಪ್ರವಾದಿ ಮೊಹಮ್ಮದ ಪೈಗಂಬರ್ ಪರ ಘೋಷಣೆ ಕೂಗಿದರು ಅಲ್ಲದೇ, ಅವರ ಜೀವನ ಸಂದೇಶ ಸಾರಿದರು. ಇದೇ ವೇಳೆ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಮಾರ್ಗದ ಮಧ್ಯೆ ಶರಬತ್, ಮಜ್ಜಿಗೆ ವಿತರಿಸುವ ಮೂಲಕ ಭಕ್ತಿ ಸಮರ್ಪಿಸಿದರು.
ಗೋಪನಕೊಪ್ಪ, ಕೇಶ್ವಾಪುರ, ಮಂಟೂರು ರಸ್ತೆ, ಯಲ್ಲಾಪುರ ಓಣಿ, ಬಮ್ಮಾಪುರ ಚೌಕ್, ಆನಂದನಗರ ಸೇರಿದಂತೆ ನಗರದ ವಿವಿಧೆಡೆ ಇರುವ ನೂರಕ್ಕೂ ಹೆಚ್ಚು ಮಸೀದಿಗಳಿಂದ ಮೆರವಣಿಗೆ ಹೊರಟು ಆಸಾರ ಹೊಂಡದಲ್ಲಿರುವ ಮಸೀದಿ ತಲುಪಿದರು. ಅಲ್ಲಿ ಪೆಟ್ಟಿಗೆಯಲ್ಲಿ ಸಂರಕ್ಷಣೆ ಮಾಡಿಟ್ಟಿರುವ ಮೊಹಮ್ಮದ್ ಪೈಗಂಬರರ ಮುಹ್-ಎ-ಮುಬಾರಕ್ (ಕೇಶ ದರ್ಶನ) ದರ್ಶನ ಪಡೆದರು. ಅದರಂತೆ ದೇಶದ ಪ್ರಗತಿ ಹಾಗೂ ಎಲ್ಲ ಧರ್ಮದ ಜನರ ಶ್ರೇಯಸ್ಸಿಗಾಗಿ ಮಸೀದಿ, ದರ್ಗಾಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದು ಗಮನ ಸೆಳೆಯಿತು.ಇಸ್ಲಾಂಪುರ ರಸ್ತೆಯ ದಾರುಲ್ ಉಲುಮ್ ಅಹಲೆ ಸುನ್ನತ ಗೌಸಿಯಾ ವತಿಯಿಂದ ನಡೆದ ಮೆರವಣಿಗೆಯ ನೇತೃತ್ವವನ್ನು ಹುಬ್ಬಳ್ಳಿ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಎ.ಎಂ.ಹಿಂಡಸಗೇರಿ ವಹಿಸಿದ್ದರು.ಈ ವೇಳೆ ಸಮುದಾಯದ ಮುಖಂಡರು, ಧರ್ಮಗುರುಗಳು, ಮಕ್ಕಳು ಮೆರವಣಿಗೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಮೆರವಣಿಗೆಯು ಬಂಕಾಪುರ ಚೌಕ್, ಯಲ್ಲಾಪುರ ಓಣಿ, ರಾಧಾಕೃಷ್ಣ ಗಲ್ಲಿ, ದುರ್ಗದ ಬೈಲ, ಕಾಳಮ್ಮನ ಅಗಸಿ, ಬಮ್ಮಾಪುರ ಚೌಕ್, ಪೆಂಡಾರಗಲ್ಲಿ ಮೂಲಕ ಸಾಗಿ ಅಸಾರ ಹೊಂಡದಲ್ಲಿರುವ ಮೊಹಲ್ಲಾ ತಲುಪಿತು. ಹೊಸ ಬಟ್ಟೆಹಾಗೂ ಸಾಂಪ್ರದಾಯಿಕ ಪೇಟ ಧರಿಸಿದ್ದ ಸಾವಿರಾರು ಮುಸ್ಲಿಮರು, ಕುರಾನ್ ಪಠಣ ಮಾಡುತ್ತ ಸಾಗಿದ್ದು ಗಮನ ಸೆಳೆಯಿತು.
ಧರ್ಮಗುರು ತಾಜುದ್ದೀನ್ ಪೀರಾ ಖಾದ್ರಿ,ಅಂಜುಮನ್ ಸಂಸ್ಥೆ ಅಧ್ಯಕ್ಷ ಎ.ಎಂ. ಹಿಂಡಸಗೇರಿ, ಪಾಲಿಕೆ ಮಾಜಿ ಸದಸ್ಯ ಅಲ್ತಾಫ್ ಕಿತ್ತೂರ, ಪ್ರೊ. ಐ.ಜಿ.ಸನದಿ, ಅಲ್ತಾಫ್ ಹಳ್ಳೂರ, ಯೂಸೂಫ್ ಸವಣೂರ, ಅಬ್ದುಲ್ ವಹಾಬ್ ಮುಲ್ಲಾ, ಆಶ್ರಫ್ ಅಲಿ, ಅನ್ವರ ಮುಧೋಳ, ಶಫಿ ಮುದ್ದೇಬಿಹಾಳ, ಯೂಸೂಪ್ ಸವಣೂರು, ಸಿರಾಜ್ ಅಹ್ಮದ್ ಕುಡಚಿವಾಲೆ, ಬಸೀರ್ ಗುಡಮಾಲ್, ಆಸೀಫ್ ಬಳ್ಳಾರಿ, ಇನಾಯತಖಾನ್ ಪಠಾಣ, ಅಬ್ಬಾಸ್ ಕುಮಟಾಕರ, ಆರೀಫ್ ಮುಜಾವರ್, ಮೆಹಮೂದ್ ಕೋಳೂರ, ಸಮದ್ ಗುಲಬರ್ಗಾ ಸೇರಿದಂತೆ ಇತರರು ಇದ್ದರು.ವಿದ್ಯುತ್ ದೀಪಗಳಿಂದ ಅಲಂಕಾರ: ಈದ್ ಮಿಲಾದ್ ನಿಮಿತ್ತ ನಗರದ ಎಲ್ಲ ಮಸೀದಿ, ದರ್ಗಾಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಕೆಲವು ಕಟ್ಟಡಗಳ ಮೇಲೆ ಹಸಿರು ಧ್ವಜ, ಮಾರ್ಗಗಳಲ್ಲಿ ಹಸಿರು ಬಟ್ಟೆಯ ತೋರಣಗಳನ್ನು ಕಟ್ಟಿಹಬ್ಬದ ಸಂಭ್ರಮ ಹೆಚ್ಚಿಸಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ನಿಗಾ ಇಡುವ ಜತೆಗೆ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಂಡಿದ್ದು ಕಂಡುಬಂದಿತು.
ಹಿಂದೂಗಳಿಂದ ಶರಬತ್ ವಿತರಣೆಇನ್ನು ಇಲ್ಲಿನ ದುರ್ಗದಬೈಲ್ ಸೇರಿದಂತೆ ವಿವಿಧೆಡೆ ಹಿಂದೂ ಬಾಂಧವರು, ಮೆರವಣಿಗೆಯಲ್ಲಿ ಪಾಲ್ಗೊಂಡ ಮುಸ್ಲಿಂ ಸಮಾಜದವರಿಗೆ ಶರಬತ್, ಫ್ರುಟಿ ವಿತರಿಸುವ ಭಾವೈಕ್ಯತೆ ಮೆರೆದರು. ಆಟೋ ಚಾಲಕರ ವ ಮಾಲೀಕರ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ ಸೇರಿದಂತೆ ಮತ್ತಿತರರು ಶರಬತ್ ವಿತರಿಸಿದ್ದು ಕಂಡು ಬಂತು.