ಹುಬ್ಬಳ್ಳಿಯಲ್ಲಿ ಅದ್ಧೂರಿ ರಾಮೋತ್ಸವ ದೀಪಾವಳಿ!

| Published : Jan 23 2024, 01:47 AM IST

ಹುಬ್ಬಳ್ಳಿಯಲ್ಲಿ ಅದ್ಧೂರಿ ರಾಮೋತ್ಸವ ದೀಪಾವಳಿ!
Share this Article
  • FB
  • TW
  • Linkdin
  • Email

ಸಾರಾಂಶ

. ಮಹಾನಗರದಲ್ಲಿ ಸರಿಸುಮಾರು 2 ಲಕ್ಷ ಮನೆಗಳಿಗೆ ಮಂತ್ರಾಕ್ಷತೆ ವಿತರಿಸಲಾಗಿತ್ತು. ಅದರಂತೆ ಸಾರ್ವಜನಿಕರು ಸ್ಪಂದಿಸಿ ಹಬ್ಬದಂತೆ ಆಚರಿಸಿದ್ದಾರೆ.

ಹುಬ್ಬಳ್ಳಿ: ಅಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿ ಪ್ರತಿಷ್ಠಾ ಮಹೋತ್ಸವದಂಗವಾಗಿ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಅಕ್ಷರಶಃ ಹಬ್ಬದಂತೆ ಆಚರಿಸಲಾಯಿತು. ಬೆಳಗಿನ ಜಾವದಿಂದಲೇ ದೇವಸ್ಥಾನಗಳಲ್ಲಿ ಸಾಮೂಹಿಕ ಶ್ರೀರಾಮಜಪ ನಿರಂತರವಾಗಿ ನಡೆಯುತ್ತಿದ್ದರೆ, ಗಲ್ಲಿ ಗಲ್ಲಿಗಳಲ್ಲಿ ಪೂಜೆ- ಪುನಸ್ಕಾರ, ಅನ್ನಸಂತರ್ಪಣೆ ನಡೆಸಿದರೆ, ಸಂಜೆ ವೇಳೆಗೆ ದೀಪಾವಳಿಯಂತೆ ದೀಪೋತ್ಸವ ಆಚರಿಸಿದ್ದು ವಿಶೇಷ. ಕೆಲವೆಡೆ ಹಿಂದೂ ಮುಸ್ಲಿಂ ಸಮಾಜ ಬಾಂಧವರೆಲ್ಲರೂ ಸೇರಿಕೊಂಡು ಆಚರಿಸುವ ಮೂಲಕ ಕೋಮು ಸೌಹಾರ್ದ ಮೆರೆದರು. ಇನ್ನು ವ್ಯಾಪಾರಸ್ಥರು ಸ್ವಯಂ ಪ್ರೇರಿತವಾಗಿ ಅಂಗಡಿ ಮುಗ್ಗಟ್ಟುಗಳನ್ನು ಬಂದ್‌ ಮಾಡಿ ರಾಮೋತ್ಸವದಲ್ಲಿ ಪಾಲ್ಗೊಂಡಿದ್ದು ವಿಶೇಷ.

ಕಳೆದ ಹತ್ತು ದಿನಗಳಿಂದ ನಗರದಲ್ಲಿ ಅದ್ಧೂರಿಯಾಗಿ ರಾಮೋತ್ಸವ ಆಚರಿಸಲು ಸಿದ್ಧತೆ ನಡೆಸಿದ್ದರು. ಮನೆ ಮನೆಗಳಿಗೆ ಮಂತ್ರಾಕ್ಷತೆ ವಿತರಿಸಿ ಯಾವ ರೀತಿ ಆಚರಣೆ ಮಾಡಬೇಕು ಎಂಬುದರ ಜಾಗೃತಿ ಮೂಡಿಸಿದ್ದರು. ಮಹಾನಗರದಲ್ಲಿ ಸರಿಸುಮಾರು 2 ಲಕ್ಷ ಮನೆಗಳಿಗೆ ಮಂತ್ರಾಕ್ಷತೆ ವಿತರಿಸಲಾಗಿತ್ತು. ಅದರಂತೆ ಸಾರ್ವಜನಿಕರು ಸ್ಪಂದಿಸಿ ಹಬ್ಬದಂತೆ ಆಚರಿಸಿದ್ದಾರೆ. ಶ್ರೀರಾಮನನ್ನು ಸ್ವಾಗತಿಸಿದ್ದಾರೆ.

1000ಕ್ಕೂ ಹೆಚ್ಚು ದೇವಾಲಯ: ಗಣೇಶ, ಶಿವ, ಶ್ರೀರಾಮಮಂದಿರ, ಹುಲಿಗೆಮ್ಮ ದೇವಿ ದೇವಸ್ಥಾನ, ಆಂಜನೇಯ ದೇವಾಲಯ, ಕರಿಯಮ್ಮದೇವಿ ದೇವಸ್ಥಾನ ಹೀಗೆ 1000ಕ್ಕೂ ಅಧಿಕ ದೇವಾಲಯಗಳಲ್ಲಿ ಶ್ರೀರಾಮನ ಪ್ರತಿಷ್ಠಾ ಮಹೋತ್ಸವದಂಗವಾಗಿ ವಿವಿಧ ಕಾರ್ಯಕ್ರಮಗಳು ನಡೆದಿವೆ. ಬೆಳಗ್ಗೆ 6ರಿಂದಲೇ ಶ್ರೀರಾಮನ ಸಾಮೂಹಿಕ ಭಜನೆ ಮಾಡಲಾಗಿದೆ. ಎಲ್ಲೆಡೆ ಜೈ ಶ್ರೀರಾಮ, ಶ್ರೀರಾಮ ಜಯ ರಾಮ, ಜಯ ಜಯ ರಾಮ ಎಂಬ ಘೋಷಣೆ ಮೊಳಗುತ್ತಿದ್ದವು. ಬಳಿಕ ವಿಶೇಷ ಪೂಜೆ ಪುನಸ್ಕಾರಗಳು ನಡೆದವು. ಕೆಲ ದೇವಸ್ಥಾನಗಳಲ್ಲಿ ಅಗ್ನಿ ಹೋತ್ರ ಹೋಮ ಮಾಡಿ ಪೂಜೆ ನೆರವೇರಿಸಲಾಯಿತು.

ಕಮರಿಪೇಟೆ, ಮರಾಠಾಗಲ್ಲಿ, ದುರ್ಗದಬೈಲ್‌ ಸೇರಿದಂತೆ ವಿವಿಧೆಡೆ ದೇವಸ್ಥಾನಗಳಲ್ಲಿ ಶ್ರೀರಾಮನ ಪ್ರತಿಷ್ಠಾ ಮಹೋತ್ಸವದಂಗವಾಗಿ ಹೋಮ ಹವನಗಳನ್ನು ನೆರವೇರಿಸಲಾಯಿತು. ನಗರದ 50ಕ್ಕೂ ಅಧಿಕ ಕಡೆಗಳಲ್ಲಿ ಎಲ್‌ಇಡಿ ಸ್ಕ್ರೀನ್‌ ಅಳವಡಿಸಿ ಅಯೋಧ್ಯೆ ಕಾರ್ಯಕ್ರಮದ ನೇರ ವೀಕ್ಷಣೆಗೆ ಮಾಡಲಾಯಿತು.

ಇಡೀ ನಗರದ ರಸ್ತೆಗಳ ಮೇಲೆ ದೊಡ್ಡ ದೊಡ್ಡ ರಂಗೋಲಿ ಬಿಡಿಸಲಾಗಿತ್ತು. ಗಲ್ಲಿ ಗಲ್ಲಿಗಳಲ್ಲಿ ಶ್ರೀರಾಮನ ಕಟೌಟ್‌, ಮೂರ್ತಿಗಳನ್ನಿಟ್ಟು ಪೂಜೆ ಮಾಡಲಾಯಿತು. ಕೆಲವೆಡೆ ಕಟೌಟ್‌ಗಳಿಗೆ ಕ್ಷೀರಾಭಿಷೇಕ ಮಾಡಿದ್ದು ವಿಶೇಷ.

ಅತ್ತ ಶ್ರೀರಾಮ ಮೂರ್ತಿ ಪ್ರತಿಷ್ಠಾಪನೆ ಆಗುತ್ತಿದ್ದಂತೆ ಇತ್ತ ಭಕ್ತರೆಲ್ಲರೂ ಕುಣಿದು ಕುಪ್ಪಳಿಸಿದರು. ತಮ್ಮ ತಮ್ಮ ಮಕ್ಕಳಿಗೆ ಶ್ರೀರಾಮ, ಸೀತೆ, ಲಕ್ಷ್ಮಣನ ವೇಷ ಹಾಕಿಸಿ ಪಾಲಕರು ಖುಷಿ ಪಟ್ಟರು. ದೊಡ್ಡ ದೊಡ್ಡ ಮ್ಯೂಜಿಕ್‌ ಸಿಸ್ಟ್ಂ ಅಳವಡಿಸಿ ರಾಮನ ಭಕ್ತಗೀತೆಗಳನ್ನು ಹಾಕಲಾಗಿತ್ತು. ಎಲ್ಲರೂ ಭಕ್ತಿಗೀತೆಗಳನ್ನು ಗುನಗುನಿಸುತ್ತಾ ತೆರಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಕೆಲವೆಡೆ ಭಕ್ತಿಗೀತೆಗಳಿಗೆ ತಕ್ಕಂತೆ ಮಹಿಳೆಯರು, ಪುರುಷರು ಹೆಜ್ಜೆ ಹಾಕುತ್ತಿದ್ದರು.

ಪಾನಕ ಕೋಸಂಬರಿ ವಿತರಣೆ: ಎಲ್ಲೆಡೆ ಪಾನಕ, ಶ್ರೀರಾಮನಿಗೆ ಪ್ರಿಯವಾದ ಕೋಸಂಬರಿ ವಿತರಣೆ ನಿರಂತರವಾಗಿತ್ತು. ಬಳಿಕ ಎಲ್ಲೆಡೆ ಅನ್ನಸಂತರ್ಪಣೆ ನಡೆಯಿತು. ದೇಶಪಾಂಡೆನಗರ, ಶಕ್ತಿಕಾಲನಿ, ಅಶೋಕ ನಗರ, ಶಿರೂರು ಪಾರ್ಕ್‌ ದುರ್ಗದಬೈಲ್‌, ಬ್ರಾಡವೇ, ಮರಾಠಾಗಲ್ಲಿ, ಬಿಡ್ನಾಳ ಎಲ್ಲೆಡೆ ಅನ್ನಸಂತರ್ಪಣೆಗೆ ವ್ಯವಸ್ಥೆ ಮಾಡಲಾಗಿತ್ತು.

ಅಂಗಡಿ ಮುಗ್ಗಟ್ಟು ಬಂದ್‌: ನಗರದ ಬಹುತೇಕ ಅಂಗಡಿ ಮುಂಗಟ್ಟುಗಳನ್ನು ವ್ಯಾಪಾರಸ್ಥರೇ ಸ್ವಯಂಪ್ರೇರಿತವಾಗಿ ಬಂದ್‌ ಮಾಡಿ ರಾಮೋತ್ಸವದಲ್ಲಿ ಪಾಲ್ಗೊಂಡಿದ್ದು ವಿಶೇಷ. ಹೀಗಾಗಿ, ವ್ಯಾಪಾರ ವಹಿವಾಟು ನಡೆಯಲಿಲ್ಲ. ಹಾಗಂತ ಪೂರ್ಣ ಮಾರ್ಕೆಟ್‌ ಬಂದ್‌ ಆಗಿರಲಿಲ್ಲ. ಶೇ.80ರಷ್ಟು ಅಂಗಡಿಗಳೆಲ್ಲ ಬಾಗಿಲು ಮುಚ್ಚಿದ್ದವು. ಎಲ್ಲೆಡೆ ಬರೀ ರಾಮನಾಪ ಸ್ಮರಣೆಯೇ ನಡೆದಿತ್ತು.

ಮುಸ್ಲಿಮರು ಸಾಥ್‌: ತಾಲೂಕಿನ ಹಳ್ಯಾಳ ಗ್ರಾಮದಲ್ಲಿ ನಡೆದ ರಾಮೋತ್ಸವದಲ್ಲಿ ಮುಸ್ಲಿಂ ಸಮುದಾಯದವರು ಪಾಲ್ಗೊಂಡಿದ್ದು ವಿಶೇಷ. ಅಲ್ಲಿ ನಡೆದ ಅನ್ನಸಂತರ್ಪಣೆಯ ಜವಾಬ್ದಾರಿ ಮುಸ್ಲಿಮರೇ ವಹಿಸಿದ್ದು ವಿಶೇಷ. ಹುಬ್ಬಳ್ಳಿಯಲ್ಲಿ ಅಬ್ದುಲ್‌ ಎಂಬುವವರು ರಾಮೋತ್ಸವದಲ್ಲಿ ಪಾಲ್ಗೊಂಡಿದ್ದರು.

ಸಂಜೆ ದೀಪಾವಳಿ: ಬೆಳಗ್ಗೆ ಭಜನೆ, ವಿಶೇಷ ಕಾರ್ಯಕ್ರಗಳೆಲ್ಲ ನಡೆದರೆ, ಸಂಜೆ ವೇಳೆ ದೀಪೋತ್ಸವ ನಡೆಯಿತು. ಮನೆ ಮನೆಗಳಲ್ಲಿ ದೀಪ ಬೆಳಗಿ ಸಂಭ್ರಮಿಸಿದರು. ದೇವಸ್ಥಾನಗಳಲ್ಲೂ ದೀಪೋತ್ಸವ ನಡೆಯಿತು. ಅಕ್ಷರಶಃ ದೀಪಾವಳಿಯಂತೆ ಆಚರಿಸಿದ್ದು ವಿಶೇಷ.

48 ಗಂಟೆಯಿಂದ ರಾಮಜಪ: ಈ ನಡುವೆ ಕಮರಿಪೇಟೆಯ ರಾಮಮಂದಿರದಲ್ಲಿ ಬರೋಬ್ಬರಿ 48 ಗಂಟೆ ಕಾಲ ನಿರಂತರವಾಗಿ ರಾಮಜಪ ನಡೆಸಿದ್ದು ವಿಶೇಷ. ಮಹಿಳಾ ಭಕ್ತರು ಸರದಿ ಮೇಲೆ ರಾಮನ ಜಪದಲ್ಲಿ ತೊಡಗಿದ್ದರು.

12 ಅಡಿ ಎತ್ತರ ರಾಮನ ಮೂರ್ತಿ: ಗವಳಿಗಲ್ಲಿ ಬರೋಬ್ಬರಿ 12 ಅಡಿ ಎತ್ತರದ ರಾಮನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ₹1.80 ಲಕ್ಷ ವೆಚ್ಚದ ಈ ಮೂರ್ತಿಗೆ, ಭಕ್ತರೇ ದೇಣಿಗೆ ಸಂಗ್ರಹಿಸಿ ತಯಾರಿಸಿದ್ದಾರೆ. ಬೆಳಗಾವಿಯ ಕಲಾವಿದ ಮೂರ್ತಿಯನ್ನು ಸಿದ್ಧಪಡಿಸಿದ್ದು. ಸಾರ್ವಜನಿಕ ದರ್ಶನಕ್ಕೆ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು.

ದಂಪತಿ ಸಹಿತ ಪೂಜೆ: ಕಮರಿಪೇಟೆ ಶ್ರೀರಾಮ ಮಂದಿರದಲ್ಲಿ ಸೋಮವಂಶ, ಸಹಸ್ರಾರ್ಜುನ ಕ್ಷತ್ರೀಯ ಸಮಾಜದಿಂದ ಹೋಮ ಹಮ್ಮಿಕೊಳ್ಳಲಾಗಿತ್ತು. ದಂಪತಿ ಸಮೇತವಾಗಿ ಹೋಮದಲ್ಲಿ ಭಾಗಿಯಾದರು. ಶ್ರೀರಾಮನಾಮಸ್ಮರಣೆ ನಿರಂತರವಾಗಿತ್ತು.