ಕನ್ನಡಪ್ರಭ ವಾರ್ತೆ ಮಹಾಲಿಂಗಪುರಪಟ್ಟಣದ ಶ್ರೀಗುರು ಮಹಾಲಿಂಗೇಶ್ವರ ಜಾತ್ರೆಯ ಅಂಗವಾಗಿ ಮಹಾಲಿಂಗಪುರದಲ್ಲಿ ಭಕ್ತಿ, ಸಂಪ್ರದಾಯ ಮತ್ತು ಸೌಹಾರ್ದತೆಯ ಪ್ರತೀಕವಾದ ಬೃಹತ್ ರೊಟ್ಟಿ ಜಾತ್ರೆ ಭಕ್ತಿಭಾವದಿಂದ ಜರುಗಿತು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಪಟ್ಟಣದ ಶ್ರೀಗುರು ಮಹಾಲಿಂಗೇಶ್ವರ ಜಾತ್ರೆಯ ಅಂಗವಾಗಿ ಮಹಾಲಿಂಗಪುರದಲ್ಲಿ ಭಕ್ತಿ, ಸಂಪ್ರದಾಯ ಮತ್ತು ಸೌಹಾರ್ದತೆಯ ಪ್ರತೀಕವಾದ ಬೃಹತ್ ರೊಟ್ಟಿ ಜಾತ್ರೆ ಭಕ್ತಿಭಾವದಿಂದ ಜರುಗಿತು.

ಪಟ್ಟಣದ ವಿವಿಧ ಬಡಾವಣೆಗಳ ಸಾವಿರಾರು ಮಹಿಳೆಯರು ತಮ್ಮ ಮನೆಗಳಲ್ಲಿಯೇ ಅತ್ಯಂತ ಶ್ರದ್ಧೆ ಹಾಗೂ ಪರಿಶ್ರಮದಿಂದ ಮಡಿ-ಮೈಲಿಗೆಯನ್ನು ಕಾಪಾಡಿಕೊಂಡು ರೊಟ್ಟಿಗಳನ್ನು ಸಿದ್ಧಪಡಿಸಿ, ಶ್ರೀಗುರು ಮಹಾಲಿಂಗೇಶ್ವರನಿಗೆ ಸಮರ್ಪಿಸುವ ಪುಣ್ಯದ ಕಾರ್ಯದಲ್ಲಿ ಪಾಲ್ಗೊಂಡರು. ಮಹಿಳೆಯರ ಕೈಯಲ್ಲಿ ತಯಾರಾದ ಸಾವಿರಾರು ರೊಟ್ಟಿಗಳು ಕೇವಲ ಆಹಾರವಾಗಿರದೆ, ಭಕ್ತಿಯ ಸಂಕೇತವಾಗಿ, ತಾಯಂದಿರ ಶ್ರಮದ ಪ್ರತೀಕವಾಗಿ ಹಾಗೂ ನಮ್ಮ ನೆಲದ ಸಂಪ್ರದಾಯದ ಜೀವಂತ ಸಾಕ್ಷಿಯಾಗಿ ಗಮನ ಸೆಳೆದವು. ಬೃಹತ್ ರೊಟ್ಟಿ ಸಮರ್ಪಣಾ ಕಾರ್ಯಕ್ರಮಕ್ಕೆ ಎಲ್ಲ ಗಣ್ಯರು ಚಾಲನೆ ನೀಡಿದರು. ರೊಟ್ಟಿ ಮೆರವಣಿಗೆ ಸಾಗುತ್ತಿದ್ದಂತೆ ಡೋಲು, ಗೊಂಬೆ ಕುಣಿತ, ಕರಡಿ ಮಜಲು ಸೇರಿದಂತೆ ವಿವಿಧ ಜಾನಪದ ವಾದ್ಯಗಳ ಸದ್ದು ಪಟ್ಟಣದವನ್ನು ಮತ್ತಷ್ಟು ಭಕ್ತಿಮಯಗೊಳಿಸಿತು. ಮೆರವಣಿಗೆಯಲ್ಲಿ ಮಹಿಳೆಯರು, ಯುವಕರು, ಹಿರಿಯರು ಸೇರಿದಂತೆ ಎಲ್ಲ ವರ್ಗದ ಜನರು ಉತ್ಸಾಹದಿಂದ ಹೆಜ್ಜೆ ಹಾಕಿದರು. ಅಡುಗೆ ಮನೆಯಲ್ಲಿ ತಯಾರಾದ ರೊಟ್ಟಿ, ದೇವಸ್ಥಾನದ ಸನ್ನಿಧಿಗೆ ತಲುಪಿದ ಕ್ಷಣ ಭಕ್ತಿಯ ಹಬ್ಬವಾಗಿ ಪರಿವರ್ತನೆಯಾಯಿತು.

ಮಹಿಳೆಯರು ತಾವು ಪ್ರೀತಿಯಿಂದ ತಯಾರಿಸಿದ ರೊಟ್ಟಿಗಳನ್ನು ಹೊತ್ತು ಸಾಗುತ್ತಿದ್ದ ದೃಶ್ಯ ನೋಡುಗರ ಮನಮುಟ್ಟುವಂತಿತ್ತು. ತಲೆಮಾರುಗಳಿಂದ ನಡೆದುಕೊಂಡು ಬಂದಿರುವ ಈ ಸಂಪ್ರದಾಯದಲ್ಲಿ ನಮ್ಮ ದೇವರಿಗೆ ನಮ್ಮ ಕೈಯಿಂದ ಮಾಡಿದ ಅಡುಗೆಯನ್ನು ಅರ್ಪಿಸಬೇಕು ಎಂಬ ಭಕ್ತಿಯ ಭಾವನೆ ಎದ್ದು ಕಾಣುತ್ತಿತ್ತು. ಮೆರವಣಿಗೆ ಶ್ರೀಗುರು ಮಹಾಲಿಂಗೇಶ್ವರ ದೇವಸ್ಥಾನದ ಆವರಣ ತಲುಪಿದ ಬಳಿಕ ರೊಟ್ಟಿಗಳನ್ನು ದೇವರಿಗೆ ಸಮರ್ಪಿಸಲಾಯಿತು. ಬಳಿಕ ಮಠದ ವತಿಯಿಂದ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಭಕ್ತಾದಿಗಳು ಹಾಗೂ ರೊಟ್ಟಿ ತಯಾರಿಸಿದ ತಾಯಂದಿರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಯಿತು.

ಸೆ.24ರಂದು ಬಸವೇಶ್ವರ ವೃತ್ತದಿಂದ ಪಟ್ಟಣದ ದಕ್ಷಿಣ ಹಾಗೂ ಪೂರ್ವ ಭಾಗ ಸೇರಿದಂತೆ ವಿವಿಧ ಪ್ರದೇಶಗಳಿಂದ ರೊಟ್ಟಿ ಮೆರವಣಿಗೆ ನಡೆಯಲಿದೆ. ಒಲವಿನಿಂದ ಮಾಡಿದ ರೊಟ್ಟಿ, ಭಕ್ತಿಯಿಂದ ಹೊತ್ತ ಮೆರವಣಿಗೆ, ಒಗ್ಗಟ್ಟಿನಿಂದ ಸೇರಿದ ಜನಸಾಗರ ಮಹಾಲಿಂಗಪುರದ ಜಾತ್ರೆಯ ವೈಭವಕ್ಕೆ ರೊಟ್ಟಿ ಜಾತ್ರೆ ಮತ್ತಷ್ಟು ಮೆರಗು ತಂದಿತು.

ಪಟ್ಟಣದ ವಿವಿಧ ಬಡಾವಣೆಯ ಹಿರಿಯರು, ವಿವಿಧ ಸಮಾಜಗಳ ಮುಖಂಡರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಯುವಕರು ಹಾಗೂ ಭಕ್ತರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀಗುರು ಮಹಾಲಿಂಗೇಶ್ವರನ ಕೃಪೆಗೆ ಪಾತ್ರರಾದರು.