ಕೊಪ್ಪರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ದ ಶೃಂಗೇರಿ ಜಿಲ್ಲೆಯಿಂದ ಭಾನುವಾರ ಮಧ್ಯಾಹ್ನ 3ಕ್ಕೆ ಕೊಪ್ಪದ ಮೇಲಿನ ಪೇಟೆಯ ಟೋಲ್ ಗೇಟ್‌ನಿಂದ ಭವ್ಯ ಪಥಸಂಚಲನ ಅತ್ಯಂತ ಶಿಸ್ತುಬದ್ಧವಾಗಿ ನಡೆಯಿತು. ನಾಲ್ಕು ತಾಲೂಕು ಗಳಿಂದ ಆಗಮಿಸಿದ್ದ ಸುಮಾರು 1,000ಕ್ಕೂ ಹೆಚ್ಚು ಪೂರ್ಣ ಗಣವೇಶಧಾರಿಗಳು 45 ನಿಮಿಷಗಳ ಕಾಲ ಕೊಪ್ಪದ ರಾಜ ಬೀದಿಗಳಲ್ಲಿ ಒಟ್ಟಾಗಿ ಹೆಜ್ಜೆ ಹಾಕಿದರು.

ಎಲ್ಲಾ 202 ಗ್ರಾಮಗಳಲ್ಲಿ ಶಾಖೆ ನಡೆಸಿ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದ ಜಿಲ್ಲೆ

ಕನ್ನಡಪ್ರಭ ವಾರ್ತೆ ​ಕೊಪ್ಪ

ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ದ ಶೃಂಗೇರಿ ಜಿಲ್ಲೆಯಿಂದ ಭಾನುವಾರ ಮಧ್ಯಾಹ್ನ 3ಕ್ಕೆ ಕೊಪ್ಪದ ಮೇಲಿನ ಪೇಟೆಯ ಟೋಲ್ ಗೇಟ್‌ನಿಂದ ಭವ್ಯ ಪಥಸಂಚಲನ ಅತ್ಯಂತ ಶಿಸ್ತುಬದ್ಧವಾಗಿ ನಡೆಯಿತು. ನಾಲ್ಕು ತಾಲೂಕು ಗಳಿಂದ ಆಗಮಿಸಿದ್ದ ಸುಮಾರು 1,000ಕ್ಕೂ ಹೆಚ್ಚು ಪೂರ್ಣ ಗಣವೇಶಧಾರಿಗಳು 45 ನಿಮಿಷಗಳ ಕಾಲ ಕೊಪ್ಪದ ರಾಜ ಬೀದಿಗಳಲ್ಲಿ ಒಟ್ಟಾಗಿ ಹೆಜ್ಜೆ ಹಾಕಿದರು.

ಪಥಸಂಚಲನದಲ್ಲಿ ಮಾಜಿ ಸಚಿವ ಡಿ. ಎನ್. ಜೀವರಾಜ್ ಸೇರಿದಂತೆ ಹಲವು ಪ್ರಮುಖ ಮುಖಂಡರು ಪೂರ್ಣ ಗಣವೇಶಧಾರಿಗಳಾಗಿ ಪಾಲ್ಗೊಂಡು ಹೆಜ್ಜೆ ಹಾಕಿದ್ದು ವಿಶೇಷ. ​ಪಥಸಂಚಲನದ ಹಾದಿಯುದ್ದಕ್ಕೂ ತಾಯಂದಿರು ಹಾಗೂ ಸಾರ್ವಜನಿಕರು ಪುಷ್ಪಾರ್ಚನೆ ಮೂಲಕ ಸ್ವಯಂಸೇವಕರನ್ನು ಆತ್ಮೀಯವಾಗಿ ಸ್ವಾಗತಿಸಿದರು.

​101ನೇ ವರ್ಷದಿಂದ ಸಮಾಜ ಪರಿವರ್ತನೆ ಸಂಕಲ್ಪ:

ಸಂಘದ ಶತಾಬ್ದಿ ವರ್ಷದ (100ನೇ ವರ್ಷ) ಅಂಗವಾಗಿ ಕಳೆದ ವಿಜಯದಶಮಿಯಿಂದ ಈ ವಿಜಯದಶಮಿಯವರೆಗೆ ಶೃಂಗೇರಿ ಜಿಲ್ಲೆಯಲ್ಲಿ 7 ಪ್ರಮುಖ ಕಾರ್ಯಕ್ರಮಗಳನ್ನು ಅತ್ಯಂತ ಯೋಜನಾಬದ್ಧವಾಗಿ ಆಯೋಜಿಸಲಾಗಿದೆ ಎಂದು ಶೃಂಗೇರಿ ಜಿಲ್ಲಾ ಕಾರ್ಯವಾಹರಾದ ನೂತನ್ ಸೂರ್ಯ ತಿಳಿಸಿದರು.

4 ತಾಲೂಕುಗಳಲ್ಲಿ ತರುಣರ ಸಮಾವೇಶ, ಗೃಹ ಸಂಪರ್ಕ ಅಭಿಯಾನದ ಮೂಲಕ 28,000ಕ್ಕೂ ಹೆಚ್ಚು ಮನೆಗಳ ಭೇಟಿ, ಜಿಲ್ಲೆಯ 36 ಕಡೆಗಳಲ್ಲಿ (ಕೊಪ್ಪ ತಾಲೂಕೊಂದರಲ್ಲೇ 14 ಕಡೆ) ಹಿಂದೂ ಸಮಾಜೋತ್ಸವ, ಸದ್ಭಾವನಾ ಸಭೆಗಳು ಹಾಗೂ ಪ್ರಮುಖ ನಾಗರಿಕರ ಗೋಷ್ಠಿಯನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ವಿವರಿಸಿದರು.

​ರಾಷ್ಟ್ರಮಟ್ಟದಲ್ಲಿ ಶೃಂಗೇರಿ ಜಿಲ್ಲೆಯ ಸಾಧನೆ ಉಲ್ಲೇಖ:

ಆಗಸ್ಟ್‌ನಲ್ಲಿ ಜಿಲ್ಲೆಯ 202 ಗ್ರಾಮಗಳಲ್ಲಿ ರಕ್ಷಾಬಂಧನ ಆಚರಿಸಿ, ಶಾಖಾ ಸಪ್ತಾಹದಲ್ಲಿ ಜಿಲ್ಲೆಯ ಎಲ್ಲಾ 202 ಗ್ರಾಮಗಳಲ್ಲಿ ಒಟ್ಟು 223 ಶಾಖೆಗಳನ್ನು ನಡೆಸುವ ಮೂಲಕ ಕಟ್ಟಕಡೆ ವ್ಯಕ್ತಿಯನ್ನೂ ತಲುಪಲು ಸಾಧ್ಯವಾಯಿತು. ಅಖಿಲ ಭಾರತೀಯ ಕಾರ್ಯ ಕಾರಿ ಮಂಡಳಿ ಬೈಠಕ್‌ನಲ್ಲಿ ಸರಕಾರ್ಯವಾಹರಾದ ದತ್ತಾತ್ರೇಯ ಹೊಸಬಾಳೆ ಶೃಂಗೇರಿ ಜಿಲ್ಲೆಯ ಎಲ್ಲಾ ಗ್ರಾಮ ಗಳಲ್ಲಿ ಶಾಖೆಗಳಲ್ಲಿ ಕಾರ್ಯ ನಡೆದಿರುವುದನ್ನು ವಿಶೇಷವಾಗಿ ಉಲ್ಲೇಖಿಸಿರುವುದು ನಮಗೆ ಹೆಮ್ಮೆ ಜೊತೆಗೆ ಜವಾಬ್ದಾರಿ ಹೆಚ್ಚಿಸಿದೆ ಎಂದರು.

ಕಳೆದ 100 ವರ್ಷಗಳಲ್ಲಿ ಎಲ್ಲಾ ಗ್ರಾಮಗಳನ್ನು ತಲುಪುವ ಗುರಿ ಸಾಧಿಸಿದ್ದೇವೆ. 101ನೇ ವರ್ಷದಿಂದ ವ್ಯಕ್ತಿ ನಿರ್ಮಾಣದಿಂದ ರಾಷ್ಟ್ರ, ರಾಷ್ಟ್ರ ನಿರ್ಮಾಣದಿಂದ ಸಮಾಜ ಮತ್ತು ವ್ಯವಸ್ಥಾ ಪರಿವರ್ತನೆ ಎಂಬ ಧ್ಯೇಯದೊಂದಿಗೆ ಪ್ರತಿ ಸ್ವಯಂಸೇವಕರು ತಮ್ಮ ಗ್ರಾಮದಲ್ಲಿ ನಿತ್ಯ ಶಾಖೆ, ವಾರಕ್ಕೊಮ್ಮೆ ಮಿಲನ ಅಥವಾ ತಿಂಗಳಿಗೊಮ್ಮೆ ಸಾಂಗಿಕ್ ನಡೆಸುವ ಮೂಲಕ ಸಕಾರಾ ತ್ಮಕ ಬದಲಾವಣೆ ತರಲು ಸಂಕಲ್ಪ ಮಾಡಬೇಕು. ಸಂಘ ಯಾರ ವಿರುದ್ಧವೂ ಕೆಲಸ ಮಾಡಲ್ಲ. ಸಂಪರ್ಕಕ್ಕೆ ಬಾರದ ವರನ್ನೂ ಪ್ರೀತಿಯಿಂದ ಸಂಪರ್ಕಿಸಿ ನಮ್ಮವರನ್ನಾಗಿ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.

ಶೃಂಗೇರಿ ಜಿಲ್ಲಾ ಸಂಘಚಾಲಕ ಟಿ. ಕೆ. ನಾರಾಯಣ (ಕೊಪ್ಪ), ವಿಭಾಗ ಸೇವಾ ಪ್ರಮುಖರಾದ ರಾಜೇಂದ್ರ ಕುಮಾರ್ (ಬಿ. ಎಚ್. ಕೈಮರ) ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಭಾಗ ಶಾರೀರಿಕ ಪ್ರಮುಖರಾದ ಆದಿತ್ಯ ಹರಿಹರಪುರ ಮುಂತಾದವರಿದ್ದರು.