ಕನ್ನಡಪ್ರಭ ವಾರ್ತೆ ಮಳವಳ್ಳಿ

ತಾಲೂಕಿನ ಬೊಪ್ಪೇಗೌಡನಪುರ (ಬಿಜಿಪುರ) ಹೋಬಳಿಯ ಚೊಟ್ಟನಹಳ್ಳಿಯಲ್ಲಿ ಸಿದ್ದಪ್ಪಾಜಿಯವರ ದೊಡ್ಡ ಸೇವೆಯ ಅನ್ನಸಂತರ್ಪಣೆ ಅದ್ಧೂರಿಯಾಗಿ ನಡೆಯಿತು.

ಗ್ರಾಮದಲ್ಲಿ 15 ವರ್ಷಗಳ ನಂತರ ನಡೆದ ಘನನೀಲಿ ಸಿದ್ದಪ್ಪಾಜಿಯವರ ದೊಡ್ಡ ಸೇವೆ ಕಾರ್ಯಕ್ರಮವನ್ನು ಚೊಟ್ಟನಹಳ್ಳಿ, ಕೆಂಚನದೊಡ್ಡಿ, ಕೂನನಕೊಪ್ಪಲು, ವಿ.ಆರ್.ಎಸ್.ದೊಡ್ಡಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ಸೇರಿಕೊಂಡು ಆಚರಣೆ ಮಾಡಿಕೊಂಡು ಬರುತ್ತಿದ್ದು, ಅಂದರಂತೆ ಚೊಟ್ಟನಹಳ್ಳಿ ಕೆರೆ ಬಳಿಯ ಸಿದ್ದಪ್ಪಾಜಿ ತೋಪಿನಲ್ಲಿ ಮಂಗಳವಾರ ಬೆಳಗ್ಗೆ 11 ಗಂಟೆಗೆ ದೇವರ ಬಿರುದುಗಳು ‘ಸರಿಗೆ, ಕಂಡಾಯ, ಬಸವ, ಪೂಜೆ, ಮೂಲಪಾನಿಗಳೊಂದಿಗೆ ಹೂ ಹೊಂಬಾಳೆ ಪೂಜೆ ಮೆರವಣಿಗೆ ನಡೆಯಿತು.

ನಂತರ ತೋಪಿಗೆ ಆಗಮಿಸಿದ ಮಳವಳ್ಳಿ ಮಂಟೇಸ್ವಾಮಿ ಮಠದ ಎಂ.ಎಲ್.ವರ್ಚಸ್ವಿ ಶ್ರೀಕಂಠಸಿದ್ದಲಿಂಗರಾಜೇ ಅರಸ್ ಅವರನ್ನು ಸಿದ್ದಪ್ಪಾಜಿ ಸೇವಾ ಟ್ರಸ್ಟ್‌ನ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಸೇರಿ ಅದ್ಧೂರಿಯಾಗಿ ಸ್ವಾಗತಿಸಿದರು.

ಗ್ರಾಮದ ವೀರಭದ್ರಸ್ವಾಮಿ ದೇವಸ್ಥಾನ ಹಾಗೂ ಸಿದ್ದಪ್ಪಾಜಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮಹಾ ಮಂಗಳಾರತಿ ಮಾಡಿದ ನಂತರ ಸಿದ್ದಪ್ಪಾಜಿ ಸತ್ತಿಗೆ, ಬಸವ, ಸಿದ್ದಪ್ಪಾಜಿ ಕಂಡಾಯಗಳು ಹಾಗೂ ಎಲ್ಲ ದೇವರ ಬಿರುದುಗಳಿಗೆ ಹೂವು ಹೊಂಬಾಳೆ ಹಾಗೂ ಮಂಗಳವಾದ್ಯಗಳೊಂದಿಗೆ ಕೆರೆಯ ಬಳಿಯ ಸಿದ್ದಪ್ಪಾಜಿ ತೋಪಿನವರೆಗೂ ಎಂ.ಎಲ್.ವರ್ಚಸ್ವಿ ಶ್ರೀಕಂಠಸಿದ್ದಲಿಂಗರಾಜೇ ಅರಸ್ ಅವರು ಕಾಲ್ನಡಿಗೆಯಲ್ಲಿ ತೆರಳಿ ಬಳಿಕ ಪೂಜೆ ಸಲ್ಲಿಸಿದರು.


ಸಿದ್ದಪ್ಪಾಜಿ ತೋಪಿನಲ್ಲಿ ದೊಡ್ಡಸೇವೆ ದೇವರ ಕಾರ್ಯಗಳ ಜೊತೆಗೆ ಅನ್ನಸಂತರ್ಪಣೆಗೆ ಚಾಲನೆ ನೀಡಲಾಯಿತು. ಐದು ಗ್ರಾಮಗಳ ಹರಕೆ ಹೊತ್ತ ನೂರಾರು ಭಕ್ತರು ವಿಜೃಂಭಣೆಯ ಅನ್ನಸಂತರ್ಪಣೆ ಕಾರ್ಯ ನಡೆಸಿದರು. ಮಾಂಸಾಹಾರ ತಯಾರಿಸಿ ಸುಮಾರು ಯಾವುದೇ ಗೊಂದಲವಾಗದಂತೆ 4 ಕಡೆ ಪ್ರತ್ಯೇಕವಾಗಿ ಸುಮಾರು 20 ಸಾವಿರ ಭಕ್ತರಿಗೆ ಪ್ರಸಾದ ಬಡಿಸಲಾಯಿತು.

ಗ್ರಾಮದ ಪ್ರಮುಖ ರಸ್ತೆ ಸೇರಿದಂತೆ ದೇವಸ್ಥಾನದಲ್ಲಿ ವಿದ್ಯುತ್ ದೀಪಾಲಂಕಾರ ಹಾಗೂ ಫ್ಲೆಕ್ಸ್ ಗಳ ಅಬ್ಬರ ಜೋರಾಗಿತ್ತು. ಮತ್ತೊಂದೆಡೆ ಯಾವುದೇ ರಾಜಕೀಯ ಪಕ್ಷಗಳ ನಾಯಕ ಭಾವಚಿತ್ರವಿಲ್ಲದೇ ಸಿದ್ದಪ್ಪಾಜಿ, ಎಂ.ಎಲ್.ವರ್ಚಸ್ವಿ ಶ್ರೀಕಂಠಸಿದ್ದಲಿಂಗರಾಜೇ ಅರಸ್ ಹಾಗೂ ಸ್ಥಳೀಯ ಮುಖಂಡರನ್ನು ಒಳಗೊಂಡು ಪಕ್ಷಾತೀತವಾಗಿ ಅಳವಡಿಸಿದ ಫ್ಲೆಕ್ಸ್ ಗಳನ್ನು ಗಮನ ಸೆಳೆಯಿತು. ಅಲ್ಲದೇ, ಇಂಥ ಬರಗಾಲದಲ್ಲೂ ಸಿದ್ದಪ್ಪಾಜಿ ತೋಪಿನ ಕೆರೆಯ ತುಂಬಿರುವುದು ದೃಶ್ಯ ಎಲ್ಲರ ಕಣ್ಮನ ಸೆಳೆಯುತ್ತಿತ್ತು.

ಸಿದ್ದಪ್ಪಾಜಿ ದೊಡ್ಡಸೇವೆ ಅಂಗವಾಗಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಸ್ಥಳೀಯ ಮುಖಂಡರೊಂದಿಗೆ ಆಗಮಿಸಿದ ದೇವರ ದರ್ಶನ ಪಡೆದು ಮಾತನಾಡಿ, ಇಂಥ ದೊಡ್ಡಸೇವೆಗೆ ಎಲ್ಲರೂ ಒಗ್ಗೂಡಿರುವುದು ಬೆಳವಣಿಗೆಯಾಗಿದೆ. ಧಾರ್ಮಿಕ ಆಚರಣೆ ಹಾಗೂ ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಬೇಡ ಎಂದರು. ಮಾಜಿ ಶಾಸಕ ಕೆ.ಅನ್ನದಾನಿ ಸಹ ಮುಖಂಡರೊಂದಿಗೆ ಭೇಟಿ ನೀಡಿ ದೇವರ ದರ್ಶನ ಪಡೆದುಕೊಂಡರು.

--------------

7ಕೆಎಂಎನ್ ಡಿ17

ಮಳವಳ್ಳಿ ತಾಲೂಕಿನ ಚೊಟ್ಟನಹಳ್ಳಿಯಲ್ಲಿ ಸಿದ್ದಪ್ಪಾಜಿಯವರ ದೊಡ್ಡ ಸೇವೆಯ ಅನ್ನಸಂತರ್ಪಣೆ ಅದ್ದೂರಿಯಾಗಿ ನಡೆಯಿತು.