ಕನ್ನಡಪ್ರಭ ವಾರ್ತೆ ಕೊರಟಗೆರೆ

ಶಿವರಾತ್ರಿ ಹಬ್ಬದ ಪ್ರಯುಕ್ತ ಪರ್ವಗ್ರುಪ್‌ ನ ಉದ್ಯಮಿ ನಿಲೇಶ್‌ ಅವರ ಸಹಯೋಗದಲ್ಲಿ ತಾಲೂಕಿನ ಸಿದ್ಧರಬೆಟ್ಟದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಸಿದ್ದರಬೆಟ್ಟದ ಮಠದ ಪೀಠಾಧ್ಯಕ್ಷ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮ ಪ್ರಚಾರ, ಧರ್ಮದ ಜಾಗೃತಿ, ಹಾಗೂ ಜನರಿಗೆ ಆಧ್ಯಾತ್ಮಿಕ ಚಿಂತನೆಯನ್ನ ಮೂಡಿಸಬೇಕು ಎನ್ನುವ ಉದ್ದೇಶದಿಂದ ಈ ಬಾರಿ ಸಿದ್ದರಬೆಟ್ಟದಲ್ಲಿ ಅದ್ಧೂರಿ ಜಾಗರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಎಲೆರಾಂಪುರ ಶ್ರೀಗಳು ಮಾರ್ಗದರ್ಶನ ಹಾಗೂ ಉದ್ಯಮಿ ನಿಲೇಶ್ ಅವರ ನೇತೃತ್ವದಲ್ಲಿ ಸಂಜೆ ೬ ಗಂಟೆಗೆ ಪ್ರಾರಂಭವಾದ ಕಾರ್ಯಕ್ರಮ ಬೆಳಗಿನ ಜಾವದವರೆಗೂ ನಡೆಯಲಿದೆ ಎಂದರು.

ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ಹನುಮಂತನಾಥ ಸ್ವಾಮೀಜಿ ಮಾತನಾಡಿ, ಜಿಲ್ಲೆಯಲ್ಲೇ ಎಲ್ಲಿಯೂ ಮಾಡದಂತ ಜಾಗರಣೆ ಕಾರ್ಯಕ್ರಮದದ ಜವಾಬ್ದಾರಿಯನ್ನು ನಿಲೇಶ್‌ ಅವರು ವಹಿಸಿಕೊಂಡಿದ್ದಾರೆ. ಈ ಜಾಗರಣೆ ಕಾರ್ಯಕ್ರಮದಲ್ಲಿ ಹೆಸರಾಂತ ಭಕ್ತಿಗೀತೆ ಗಾಯಕರು, ಚಲನಚಿತ್ರ ನಟರು, ಶಿವ, ನಂದಿ, ಎಲ್‌ಇಡಿ, ಲೇಜರ್ ಶೋ, ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಕೊರಟಗೆರೆ ಸೇರಿದಂತೆ ಜಿಲ್ಲೆಯ ಹೆಚ್ಚು ಹೆಚ್ಚು ಜನರು ಈ ಕಾರ್ಯಕ್ರಮಕ್ಕೆ ಆಗಮಿಸಿ ಶಿವರಾತ್ರಿ ಜಾಗರಣೆ ಯಶಸ್ವಿಗೊಳಿಸಿ ಎಂದು ತಿಳಿಸಿದರು.

ಉದ್ಯಮಿ ನಿಲೇಶ್ ಮಾತನಾಡಿ, ಇತ್ತೀನ ಪೀಳಿಗೆ ಧರ್ಮದ ಬಗ್ಗೆ, ಧರ್ಮ ಜಾಗೃತಿಯ ಅರಿವು ಮೂಡಿಸಲು ಮಹಾಶಿವರಾತ್ರಿ ಹಬ್ಬದಂದು ಸಿದ್ದರಬೆಟ್ಟದ ಶ್ರೀ ಮಠದ ಅವರಣದಲ್ಲಿ ಈ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಅಂದು ಶಿವ ಭಜನೆ, ಹಾಡುಗಳು, ಹಾಸ್ಯ, ಜಾನಪದ ನೃತ್ಯ, ಮನರಂಜನೆ ಕಾರ್ಯಕ್ರಮ ಇರುವುದು ಎಂದರು. ಗೃಹ ಸಚಿವ ಡಾ.ಜಿ.ಪರಮೇಶ್ವರ್ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ. ಕೇಂದ್ರ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ, ಮಧುಗಿರಿ ಶಾಸಕ ರಾಜಣ್ಣ, ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕಿನ ಶಾಸಕರು ವಿಧಾನ ಪರಿಷತ್ ಸದಸ್ಯರು, ವಿವಿಧ ಮಠಾಧೀಶರು, ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.


ಅನುಶ್ರೀ, ಅಂಕಿತಾ ಕುಂಡು , ಅನುಪಮ ಭಟ್ ಭಾಗಿಈ ಕಾರ್ಯಕ್ರಮಕ್ಕೆ ವಿಶ್ವವಾಣಿ ಸಂಪಾದಕ ವಿಶ್ವೇಶ್ವರ ಭಟ್, ಚಲನಚಿತ್ರ ನಟರಾದ ರವಿಚಂದ್ರನ್ ಜಗ್ಗೇಶ್, ಡಾಲಿ ದನಂಜಯ್, ನಿರೂಪಕಿ ಅನುಶ್ರೀ, ಸರಿಗಮಪ ಖ್ಯಾತಿಯ ಕಂಬದ ರಂಗಯ್ಯ, ಅವರಿಂದ ಸಂಗೀತ, ಗಾಯಕಿ ಅಂಕಿತಾ ಕುಂಡು, ಅನುಪಮ ಭಟ್ ಸೇರಿದಂತೆ ಹೆಸರಾಂತ ಸಿನಿಮಾ ನಟರು ರಿಯಾಲಿಟಿ ಶೋ ಸ್ಪರ್ಧಿಗಳು ಹಾಗೂ ಭಕ್ತಿಗೀತೆ ಗಾಯಕರು ಇನ್ನೂ ಅನೇಕ ಗಣ್ಯರು ಆಗಮನ. ನನ್ನ ತವರು ತಾಲೂಕು ಆದ ಕೊರಟಗೆರೆ ತಾಲೂಕಿನ ಸಿದ್ಧರ ತಪೋಭೂಮಿ ಸಿದ್ದರಬೆಟ್ಟದಲ್ಲಿ ಮಹಾಶಿವರಾತ್ರಿ ಅಂಗವಾಗಿ ಅದ್ಧೂರಿಯಾಗಿ ಜಾಗರಣೆ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು, ಧರ್ಮ ರಕ್ಷಣೆ, ಧರ್ಮ ಜಾಗೃತಿ ಸೇರಿದಂತೆ ಧಾರ್ಮಿಕ ಸೇವೆಗಳಿಗೆ ಆದ್ಯತೆ ನೀಡಲಾಗುತ್ತಿದೆ.- ನಿಲೇಶ್ ಉದ್ಯಮಿ ಪರ್ವ ಗ್ರೂಪ್.