ಕಾರಟಗಿಯಲ್ಲಿ ಅದ್ಧೂರಿ ವಾಸವಿ ಜಯಂತಿ

| Published : May 19 2024, 01:49 AM IST

ಸಾರಾಂಶ

ಇಲ್ಲಿನ ಆರ್ಯವೈಶ್ಯ ಸಮಾಜದ ಕುಲದೇವತೆ ವಾಸವಿ ಅಮ್ಮನವರ ಜಯಂತಿಯನ್ನು ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಕಾರಟಗಿ

ಇಲ್ಲಿನ ಆರ್ಯವೈಶ್ಯ ಸಮಾಜದ ಕುಲದೇವತೆ ವಾಸವಿ ಅಮ್ಮನವರ ಜಯಂತಿಯನ್ನು ಆಚರಿಸಲಾಯಿತು.

ನವಲಿ ರಸ್ತೆಯಲ್ಲಿನ ವಾಸವಿ ನಗರದ ವಾಸವಿ ಕನ್ನಿಕಾಪರಮೇಶ್ವರಿ ದೇವಸ್ಥಾನ ಹಾಗೂ ಕಲ್ಯಾಣ ಮಂಟಪದಲ್ಲಿ ಜಯಂತಿ ಅಂಗವಾಗಿ ವಿಶೇಷ ಕಾರ್ಯಕ್ರಮ ನಡೆದವು. ಬೆಳಗ್ಗೆ ವಾಸವಿ ದೇವಸ್ಥಾನದಲ್ಲಿ ಬ್ರಾಹ್ಮೀ ಮುಹೂರ್ತದಲ್ಲಿ ಪಂಚಾಮೃತ ಅಭಿಷೇಕ, ಪುಷ್ಪಾಲಂಕಾರ, ವಾಸವಿ ಅಮ್ಮನವರಿಗೆ ಹೋಮ, ಪೂರ್ಣಾಹುತಿ ಮತ್ತು ಮಹಾಮಂಗಳಾರತಿ ಜರುಗಿದವು

ಇದಕ್ಕೂ ಮುನ್ನ ಕೆರೆಬಸವೇಶ್ವರ ದೇವಸ್ಥಾನದಿಂದ ವಾಸವಿ ಅಮ್ಮನವರಿಗೆ ವಿಶೇಷ ಪೂರ್ಣ ಕುಂಭದ ಭವ್ಯ ಮೆರವಣಿಗೆ ಕಾರಟಗಿ-ಕನಕಗಿರಿ ರಸ್ತೆಯಲ್ಲಿ ವಿಜೃಂಭಣೆಯಿಂದ ನಡೆಯಿತು. ನಂತರ ಮಹಾಪ್ರಸಾದ ಕಾರ್ಯಕ್ರಮ ನಡೆಯಿತು. ಅರ್ಚಕ ಪ್ರದೀಪ್ ಆಚಾರ್ ನೇತೃತ್ವದಲ್ಲಿ ಎಲ್ಲ ಧಾರ್ಮಿಕ ಕಾರ್ಯಕ್ರಮ, ಪೂಜೆಗಳು ನಡೆದವು.

ಸಂಜೆ ನಂತರ ಅಮ್ಮನವರಿಗೆ ಪಲ್ಲಕ್ಕಿ ಸೇವೆ ಮತ್ತು ಮಹಾಮಂಗಳಾರತಿ, ತೊಟ್ಟಿಲು ಸೇವೆ ಸೇರಿದಂತೆ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು.

ಸಚಿವರ ಭೇಟಿ:ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ವಾಸವಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ಆರ್ಯವೈಶ್ಯ ಸಮಾಜದ ಹಿರಿಯರು ಹಾಗೂ ಉದ್ಯಮಿಗಳಾದ ಎಸ್.ಇ. ಪ್ರಹ್ಲಾದ್ ಶ್ರೇಷ್ಠಿ ಮತ್ತು ಪಿ.ಗೋವಿಂದರಾಜ್ ಸಮಾಜದಿಂದ ಸಚಿವರನ್ನು ಸನ್ಮಾನಿಸಿದರು.

ಜಯಂತಿ ಹಿನ್ನೆಲೆ ವಾಸವಿ ದೇವಸ್ಥಾನದ ಪ್ರಾಂಗಣದಲ್ಲಿ ಮಹಿಳೆಯರು ಹಾಗೂ ಮಕ್ಕಳಿಗೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಆರ್ಯವೈಶ್ಯ ಸಮಾಜದ ಗೌರವಾಧ್ಯಕ್ಷ ಪ್ರಹ್ಲಾದ್ ಶ್ರೇಷ್ಠಿ, ಅಧ್ಯಕ್ಷ ಗೋವಿಂದರಾಜ್ ಶ್ರೇಷ್ಠಿ, ನಾಗರಾಜ್ ಶ್ರೇಷ್ಠಿ, ವೀರೇಶ್ ಯಾಡ್ಕಿ, ವಾಸುದೇವ ಯಾಡ್ಕಿ ಶ್ರೇಷ್ಠಿ, ಪಿ. ಗುರುವಾಜ್ ಶ್ರೇಷ್ಠಿ, ಎಸ್.ಇ. ರಾಘವೇಂದ್ರ ಶ್ರೇಷ್ಠಿ, ಶರಣಪ್ಪ ಯಾಡ್ಕಿ, ಅನಂತಯ್ಯ ಶ್ರೇಷ್ಠಿ, ಆರ್ಯವೈಶ್ಯ ಯುವಕ ಸಂಘದ ನರಸಯ್ಯ ಶ್ರೇಷ್ಠಿ, ಸತ್ಯನಾರಾಯಣ ಶ್ರೇಷ್ಠಿ, ರಾಮಚಂದ್ರ ಶ್ರೇಷ್ಠಿ, ಲಕ್ಷ್ಮೀ ನಾರಾಯಣ ಶ್ರೇಷ್ಠಿ, ರಾಘವೇಂದ್ರ ಶ್ರೇಷ್ಠಿ ಗುಂಡೂರು, ಸೇರಿದಂತೆ ವಾಸವಿ ಮಹಿಳಾ ಸಂಘದ ಅಧ್ಯಕ್ಷೆ ಸಾವಿತ್ರಿ ಚಳ್ಳೂರು, ಉಪಾಧ್ಯಕ್ಷೆ ವಿಜಯಲಕ್ಷ್ಮೀ ನಾಡಂಗ ಇತರರು ಇದ್ದರು.