ಕನ್ನಡಪ್ರಭ ವಾರ್ತೆ ರೋಣ

ವಿಜಯ ದಶಮಿ ಹಬ್ಬದ ನಿಮಿತ್ತ ಬುಧವಾರ ಸಂಜೆ ರೋಣ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಜನತೆ ಪರಸ್ಪರ ಬನ್ನಿ ಹಂಚಿ, ನಾವು ನೀವು ಬಂಗಾರದಂಗ ಇರೋಣ ಎಂದು ಶುಭ ಕೋರಿ ದಸರಾವನ್ನು ಸಂಭ್ರಮದಿಂದ ಆಚರಿಸಿದರು.

ಪಟ್ಟಣದ ಗಜೇಂದ್ರಗಡ ರಸ್ತೆಯಲ್ಲಿರುವ ನಾಗರ ಕಟ್ಟೆಯಲ್ಲಿನ ಶಮಿವೖಕ್ಷ (ಬನ್ನಿ ಗಿಡ)ಕ್ಕೆ ತಾಲೂಕು ಆಡಳಿತ ಹಾಗೂ ಪಾಟೀಲ ಮನೆತನದಿಂದ ವಿವಿದ ಪೂಜೆ ಕೈಂಕರ್ಯ ನೆರವೇರಿಸಲಾಯಿತು. ಪೂಜಾ ಕೈಂಕರ್ಯವನ್ನು ತಾಲೂಕು ಆಡಳಿತ ಪರವಾಗಿ ತಹಸೀಲ್ದಾರ ನಾಗರಾಜ ಕೆ. ಹಾಗೂ ಪಾಟೀಲ ಮನೆತನ ಪರವಾಗಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ‌ ಸಮಿತಿ ತಾಲೂಕು ಅಧ್ಯಕ್ಷ ಮಿಥುನ ಜಿ. ಪಾಟೀಲ ಹಾಗೂ ರೈತರ ಸಮುದಾಯ, ಪಟ್ಟಣದ ಜತನೆ ಸಮಕ್ಷಮ ಶಮಿ ವೃಕ್ಷಕ್ಕೆ ಪೂಜೆ, ಮಂತ್ರಾಕ್ಷತೆ, ವಿವಿಧ ಪೂಜಾ ವಿಧಾನಗಳು ಆಚಾರ್ಯ ಪ್ರಹ್ಲಾದ ಜೋಶಿ ನೇತೃತ್ವದಲ್ಲಿ ಜರುಗಿತು.

ಪೂಜಾ ಕೈಂಕರ್ಯದ ಬಳಿಕ ಪ್ರಾಚೀನ ಕಾಲದ ಖಡ್ಗ (ಆಯುಧ)ದಿಂದ ಶಮಿ ವೃಕ್ಷದಲ್ಲಿನ ಪತ್ರೆ(ಬನ್ನಿ)ಯನ್ನು ಕತ್ತರಿಸಿ ದೇವರಿಗೆ ಸಮರ್ಪಿಸಲಾಯಿತು. ಬಳಿಕ ಶಮಿ ಪತ್ರೆಯನ್ನು ಅಡ್ಡ ಪಲ್ಲಕ್ಕಿಯಲ್ಲಿಟ್ಟು ಮೆರವಣಿಗೆ ಮೂಲಕ ಶ್ರೀ ಮಾರುತೇಶ್ವರ ದೇವಸ್ಥಾನ, ಶ್ರೀ ವೀರಭ್ರದ್ರೇಶ್ವರ ದೇವಸ್ಥಾನ ತೆರಳಿ ಅಲ್ಲಿನ ದೇವರಿಗೆ ಸಮರ್ಪಿಸಲಾಯಿತು. ಆ ಬಳಿಕ ಅಲ್ಲಿ ನೆರೆದ ಜನತೆ ಪರಸ್ಪರ ಬನ್ನಿ ಮುಡಿಯುವ ಮೂಲಕ ಬನ್ನಿ ಹಬ್ಬಕ್ಕೆ ಅಧಿಕೃತ ಚಾಲನೆ ನೀಡಲಾಯಿತು.

ರೋಣ ಪಟ್ಟಣ ಸೇರಿದಂತೆ ತಾಲೂಕಿನ ಸಂದಿಗವಾಡ, ಹಿರೇಮಣ್ಣೂರ, ಸವಡಿ, ಜುಗಳೂರ, ಹಿರೇಹಾಳ, ಕೊತಬಾಳ, ಹುಲ್ಲೂರ, ಮುದೇನಗುಡಿ, ಚಿಕ್ಕಮಣ್ಣೂರ, ಮುಗಳಿ, ತಳ್ಳಿಹಾಳ, ಹೊನ್ನಿಗನೂರ, ಮಾಡಲಗೇರಿ, ನೈನಾಪೂರ, ಬೆಳವಣಕಿ, ಕೌಜಗೇರಿ, ಮಾಳವಾಡ, ಯಾವಗಲ್ಲ, ಹೊನ್ನಾಪೂರ, ಕುರಹಟ್ಟಿ, ಬಳಗೋಡ ಸೇರಿದಂತೆ ತಾಲೂಕಿನಾದ್ಯಂತ ಸಡಗರ, ಸಂಭ್ರಮದಿಂದ ಬನ್ನಿ ಹಬ್ಬ ಆಚರಿಸಲಾಯಿತು.