ಕನ್ನಡಪ್ರಭ ವಾರ್ತೆ ಬೆಳಗಾವಿ ಶ್ರವಣಬೆಳಗೊಳದ ಪ.ಪೂ. ಜಗದ್ಗುರು ಸ್ವಸ್ತಿ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ ಭಾನುವಾರ ಮೊದಲ ಬಾರಿಗೆ ಬೆಳಗಾವಿ ನಗರಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಸಮಸ್ತ ಜೈನ ಸಮಾಜದ ವತಿಯಿಂದ ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಶ್ರವಣಬೆಳಗೊಳದ ಪ.ಪೂ. ಜಗದ್ಗುರು ಸ್ವಸ್ತಿ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ ಭಾನುವಾರ ಮೊದಲ ಬಾರಿಗೆ ಬೆಳಗಾವಿ ನಗರಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಸಮಸ್ತ ಜೈನ ಸಮಾಜದ ವತಿಯಿಂದ ಅದ್ಧೂರಿಯಾಗಿ ಸ್ವಾಗತಿಸಲಾಯಿತು.ನಗರದ ಹಳೆ ಪಿಬಿ ರಸ್ತೆಯ ಪ್ಯಾಟಸನ್ ಸಂಸ್ಥೆ ಬಳಿ ಭಾನುವಾರ ಸಂಜೆ 4 ಗಂಟೆಗೆ ಆಗಮಿಸಿದ ಶ್ರೀಗಳಿಗೆ ಜೈನ ಸಮಾಜದ ಮುಖಂಡರು ಹಾಗೂ ಗಣ್ಯರು ಪುಷ್ಪಾರ್ಚನೆ ಮಾಡಿ ಭವ್ಯ ಸ್ವಾಗತ ಕೋರಿದರು. ಜೈನ ಸಮಾಜದ ಮುಖಂಡ ಭರತ ಪಾಟೀಲ ಹಾಗೂ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ದಂಪತಿ ಶ್ರೀಗಳಿಗೆ ಪಾದಪೂಜೆ ನೆರವೇರಿಸಿದರು.
ಶಾಸಕ ಸಂಜಯ ಪಾಟೀಲ, ಭರತೇಶ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವಿನೋದ ದೊಡ್ಡಣ್ಣವರ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷ ಸುನೀಲ ಹನಮಣ್ಣವರ, ಹಿರಿಯ ನ್ಯಾಯವಾದಿ ರವಿರಾಜ ಪಾಟೀಲ, ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ, ಮಾಣಿಕಬಾಗ ದಿಗಂಬರ ಜೈನ ಬೋರ್ಡಿಂಗ್ ಅಧ್ಯಕ್ಷ ಪುಷ್ಪಕ ಹಣಮಣ್ಣವರ, ಕಾರ್ಯದರ್ಶಿ ಸನ್ಮತಿ ಕಸ್ತೂರಿ, ಪ್ರಮೋದ ಪಾಟೀಲ ಸೇರಿದಂತೆ ಸಮಾಜದ ಗಣ್ಯರು ಶ್ರೀಗಳಿಗೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ಸಮರ್ಪಿಸಿದರು.ನಂತರ ಸುಂದರವಾಗಿ ಅಲಂಕರಿಸಿದ್ದ ರಥದಲ್ಲಿ ಶ್ರೀಗಳು ಆಸೀನರಾದ ಬಳಿಕ ಭವ್ಯ ಮೆರವಣಿಗೆ ಆರಂಭಗೊಂಡಿತು. ಬೆಳಗಾವಿ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಸುಮಾರು 33 ಮಹಿಳಾ ಮಂಡಳಿಗಳ ಸದಸ್ಯರು ಧಾರ್ಮಿಕ ಘೋಷಣೆಗಳನ್ನು ಮೊಳಗಿಸುತ್ತ, ಶ್ರೀಗಳಿಗೆ ಜಯಘೋಷ ಕೂಗುತ್ತ ಮೆರವಣಿಗೆಯಲ್ಲಿ ಪಾಲ್ಗೊಂಡರು.
ಮೆರವಣಿಗೆಯಲ್ಲಿ ಕುದುರೆಗಳು, ವಿವಿಧ ವಾದ್ಯಮೇಳಗಳು, ಲೇಜಿಮ್ ಹಾಗೂ ಕೋಲಾಟ ತಂಡಗಳು ವಿಶೇಷ ಮೆರುಗು ನೀಡಿದವು. ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಭಕ್ತರು ಶ್ರೀಗಳ ದರ್ಶನ ಪಡೆದು ಭಕ್ತಿ ಸಮರ್ಪಿಸಸಿದರು.ಹಳೆ ಪಿಬಿ ರಸ್ತೆಯಿಂದ ಆರಂಭಗೊಂಡ ಮೆರವಣಿಗೆ ಬಹೋಸುರ ಬಸವಣ ಗಲ್ಲಿ, ಶಹಾಪುರ ಕೋರೆ ಗಲ್ಲಿ, ಗೋವಾವೇಸ್, ಮಹಾವೀರ ಭವನ ಹಾಗೂ ಹಿಂದವಾಡಿ ಮಾರ್ಗವಾಗಿ ಗೋಮಟೇಶ ವಿದ್ಯಾಪೀಠ ತಲುಪಿತು. ಅಲ್ಲಿ ಕಾಣಿಕೆ ಅರ್ಪಣೆ ಹಾಗೂ ಅತಿಥಿಗಳ ಸನ್ಮಾನ ಕಾರ್ಯಕ್ರಮಗಳು ನಡೆದವು.