ನ್ಯಾಮತಿಯಲ್ಲಿ ಕನ್ನಡ ಜ್ಯೋತಿ ರಥಯಾತ್ರೆಗೆ ಅದ್ಧೂರಿ ಸ್ವಾಗತ

| Published : Oct 28 2024, 01:15 AM IST

ನ್ಯಾಮತಿಯಲ್ಲಿ ಕನ್ನಡ ಜ್ಯೋತಿ ರಥಯಾತ್ರೆಗೆ ಅದ್ಧೂರಿ ಸ್ವಾಗತ
Share this Article
  • FB
  • TW
  • Linkdin
  • Email

ಸಾರಾಂಶ

ನ್ಯಾಮತಿ ಪಟ್ಟಣಕ್ಕೆ ಶುಕ್ರವಾರ ರಾತ್ರಿ ಆಗಮಿಸಿದ ಕನ್ನಡ ಜ್ಯೋತಿ ರಥಯಾತ್ರೆಯನ್ನು ಜನಪ್ರತಿನಿಧಿಗಳು ಹಾಗೂ ಕನ್ನಡಾಭಿಮಾನಿಗಳು ಹಾಜರಿದ್ದು ಸಂಭ್ರಮದಿಂದ ಸ್ವಾಗತಿಸಿ, ಮೆರವಣಿಗೆ ನಡೆಸಿದರು.

- ಶಾಸಕ ಡಿ.ಜಿ.ಶಾಂತನಗೌಡ, ತಹಸೀಲ್ದಾರ್‌ ಇನ್ನಿತರರು ಭಾಗಿ - - - ಕನ್ನಡಪ್ರಭ ವಾರ್ತೆ ನ್ಯಾಮತಿ

ಪಟ್ಟಣಕ್ಕೆ ಶುಕ್ರವಾರ ರಾತ್ರಿ ಆಗಮಿಸಿದ ಕನ್ನಡ ಜ್ಯೋತಿ ರಥಯಾತ್ರೆಯನ್ನು ಜನಪ್ರತಿನಿಧಿಗಳು ಹಾಗೂ ಕನ್ನಡಾಭಿಮಾನಿಗಳು ಹಾಜರಿದ್ದು ಸಂಭ್ರಮದಿಂದ ಸ್ವಾಗತಿಸಿ, ಮೆರವಣಿಗೆ ನಡೆಸಿದರು.

ಮಂಡ್ಯದಲ್ಲಿ ಡಿ.20ರಿಂದ 22ರವರೆಗೆ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಈ ಸಮ್ಮೇಳನ ನಿಮಿತ್ತ ಕನ್ನಡ ಜ್ಯೋತಿ, ಜೋಡಿಡೆತ್ತುಗಳನ್ನು ಹಿಡಿದ ರೈತ, ಕನ್ನಡಕ್ಕಾಗಿ ಕನ್ನಡ ಕಂಪೆರೆದ ಸಾಹಿತಿಗಳ ಭಾವಚಿತ್ರಗಳನ್ನು ಹೊತ್ತ ಭುವನೇಶ್ವರಿ ರಥದ ಯಾತ್ರೆ ನಾಡಿನಾದ್ಯಂತ ಸಂಚರಿಸುತ್ತಿದೆ.

ಪಟ್ಟಣದ ಶ್ರೀಶೈಲ ಚಿತ್ರಮಂದಿರ ಬಳಿ ಹೊನ್ನಾಳಿ-ನ್ಯಾಮತಿ ಕ್ಷೇತ್ರ ಶಾಸಕ ಡಿ.ಜಿ.ಶಾಂತನಗೌಡ ಅವರು ಕನ್ನಡಾಂಬೆ, ಭುವನೇಶ್ವರಿ ತಾಯಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ರಥವನ್ನು ಸ್ವಾಗತಿಸಿದರು. ರಥಯಾತ್ರೆ ಪಟ್ಟಣಕ್ಕೆ ತಡವಾಗಿ ಆಗಮಿಸಿದರೂ, ಅದ್ಧೂರಿಯಾಗಿ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು. ತಹಸೀಲ್ದಾರ್‌ ಎಚ್‌.ಬಿ.ಗೋವಿಂದಪ್ಪ, ತಾಪಂ ಇಒ ರಾಘವೇಂದ್ರ, ಪಪಂ ಮುಖ್ಯಾಧಿಕಾರಿ ಪಿ.ಗಣೇಶ್‌ ರಾವ್‌, ವಿವಿಧ ಕಚೇರಿ ಸಿಬ್ಬಂದಿ, ಕಸಾಪ ಸದಸ್ಯರು, ಸ್ತ್ರೀಶಕ್ತಿ ಸಂಘಟನೆಗಳು, ಕನ್ನಡಾಭಿಮಾನಿಗಳು, ಪೊಲೀಸ್‌ ಇಲಾಖೆ, ಗೃಹ ರಕ್ಷಕ ದಳ ಸಿಬ್ಬಂದಿ ಹಾಗೂ ಇತರರು ಭಾಗವಹಿಸಿದ್ದರು.

ಮಹಂತೇಶ್ವರ ರಸ್ತೆ ಮಾರ್ಗವಾಗಿ ಮೆರವಣಿಗೆ ಆರಂಭವಾಯಿತು. ಕಿತ್ತೂರು ರಾಣಿ ಚೆನ್ನಮ್ಮ ವೃತ್ತ, ನೆಹರೂ ರಸ್ತೆ ಮಾರ್ಗವಾಗಿ ರಥವು ಸಾಗಿತು. ದಾರಿಯುದ್ದಕ್ಕೂ ಪಟಾಕಿ ಸಿಡಿಸಿದ ಕನ್ನಡಾಭಿಮಾನಿಗಳು ಕುಣಿದು ಕುಪ್ಪಳಿಸಿದರು. ಶ್ರೀ ಭುವನೇಶ್ವರಿ ತಾಯಿಗೆ ಜಯವಾಗಲಿ ಎಂದು ಜೈಕಾರ ಹಾಕಿದರು. ಸವಳಂಗ, ಚಿನ್ನಿಕಟ್ಟೆ, ಜಯನಗರದವರೆಗೆ ಪಟ್ಟಣದ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪಟ್ಟಣ ಪಂಚಾಯಿತಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಪೊಲೀಸ್‌ ಇಲಾಖೆ, ಕನ್ನಡಪರ ಸಂಘಟನೆಗಳು ರಥಯಾತ್ರೆಯೊಂದಿಗೆ ಸಂಚರಿಸಿದವು. ಸುರಹೊನ್ನೆ ಬಳಿವರೆಗೆ ರಥಯಾತ್ರೆ ಸಾಗಿ ಶಿಕಾರಿಪುರ ಗಡಿಯಲ್ಲಿ ಬೀಳ್ಕೊಡಲಾಯಿತು.

- - - (-ಫೋಟೋ:)