ಸಾರಾಂಶ
ಕನ್ನಡಪ್ರಭ ವಾರ್ತೆ ಸುರಪುರ ಕರ್ನಾಟಕ ಸಂಭ್ರಮ-50ರ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹೊರಟಿರುವ ಇತಿಹಾಸ ಸಾರುವ ಕನ್ನಡ ರಥಯಾತ್ರೆಗೆ ಭಾನುವಾರ ಕೆಂಭಾವಿ ಪಟ್ಟಣದಲ್ಲಿ ಜನತೆಯಿಂದ ಅದ್ಧೂರಿ ಸ್ವಾಗತ ಕೋರಲಾಯಿತು.
ಹುಣಸಗಿ ತಾಲೂಕಿನಿಂದ ಸುರಪುರ ತಾಲೂಕಿಗೆ ಪ್ರಥಮವಾಗಿ ಆಗಮಿಸಿದ ರಥವನ್ನು ಮುಂಜಾನೆ 11 ಗಂಟೆಗೆ ನಾಡಕಚೇರಿ ಬಳಿ ತಾಲೂಕು ಮಟ್ಟದ ಅಧಿಕಾರಿಗಳು ಸ್ವಾಗತಿಸಿದರು. ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಕೆಂಭಾವಿ ಪಟ್ಟಣದ ಹಿರಿಯ ಸಾಹಿತಿ ಲಿಂಗನಗೌಡ ಮಾಲಿ ಪಾಟೀಲ ಮಾತನಾಡಿ, ಮೊದಲು ಮೈಸೂರು ಎಂಬ ಹೆಸರನ್ನು ಕರ್ನಾಟಕ ಎಂದು ನಾಮಕರಣ ಮಾಡಿದ ದಿನವನ್ನು ಕನ್ನಡ ಸಂಭ್ರಮ ಎಂದು ಕರೆಯುತ್ತಿದ್ದೇವೆ ಎಂದರು.ಅತ್ಯಂತ ಸರಳ, ಸುಂದರ ಭಾಷೆಯಾಗಿರುವ ಕನ್ನಡ ಭಾಷೆಯನ್ನು ಪ್ರತಿಯೊಬ್ಬ ಕನ್ನಡಿಗರು ಹೆಮ್ಮೆಯಿಂದ ಕಲಿಯಬೇಕು. ಕೇವಲ ಮೆರವಣಿಗೆ, ಬರವಣಿಗೆಗೆ ಕನ್ನಡ ಸೀಮಿತವಾಗದೆ ಹೆಮ್ಮೆಯಿಂದ ಪ್ರತಿಯೊಬ್ಬ ಕನ್ನಡಿಗರು ರಾಜ್ಯದ ಉದ್ದಗಲಕ್ಕೂ ಕನ್ನಡ ಮಾತನಾಡಿದಾಗ ಮಾತ್ರ ಕನ್ನಡ ಪದಕ್ಕೆ ವಿಶಿಷ್ಟ ಅರ್ಥ ದೊರಕಲು ಸಾಧ್ಯ ಎಂದರು.
ನಂತರ ನಾಡ ಕಚೇರಿ ಮೂಲಕ ಅಂಬಿಗರ ಚೌಡಯ್ಯ ವೃತ್ತ, ಎಸ್.ಬಿ.ಐ ವೃತ್ತ, ಬಸವೇಶ್ವರ ವೃತ್ತದ ಮಾರ್ಗವಾಗಿ ಭೋಗೇಶ್ವರ ದೇವಸ್ಥಾನದಲ್ಲಿ ರಥಕ್ಕೆ ಬೀಳ್ಕೊಡಲಾಯಿತು. ಮೆರವಣಿಗಯಲ್ಲಿ ಡೊಳ್ಳು ಕುಣಿತ, ಗಟ್ಟಿಮೇಳ, ವಿವಿಧ ಶಾಲಾ ಮಕ್ಕಳಿಂದ ಡೆಂಬಲ್ಸ್, ಲೇಜಿಮ್, ಕನ್ನಡದ ಪದ್ಯಗಳು ಎಲ್ಲರ ಗಮನ ಸೆಳೆದವು.ಹಿರೇಮಠದ ಶ್ರೀ ಚನ್ನಬಸವ ಶಿವಾಚಾರ್ಯರು, ತಹಸೀಲ್ದಾರ್ ವಿಜಯಕುಮಾರ, ತಾಲೂಕು ಪಂಚಾಯತ್ ಅಧಿಕಾರಿ ಬಸವರಾಜ ಸಜ್ಜನ, ಪುರಸಭೆ ಮುಖ್ಯಾಧಿಕಾರಿ ಯುಸೂಫ್, ಉಪ ತಹಸೀಲ್ದಾರ ಮಲ್ಲಿಕಾರ್ಜುನ ಪಾಟೀಲ, ಕಂದಾಯ ನಿರೀಕ್ಷಕ ರಾಜೇಸಾಬ, ಹಿರಿಯ ಪತ್ರಕರ್ತ ಸಂಜೀವರಾವ ಕುಲಕರ್ಣಿ, ಸಾಹಿತಿಗಳಾದ ಡಾ. ಯಂಕನಗೌಡ, ನಿಂಗನಗೌಡ ದೇಸಾಯಿ, ಬಸವರಾಜ ಭಂಟನೂರ, ಯಮುನೇಶ ಯಾಳಗಿ, ಕಸಾಪ ತಾಲೂಕು ಅಧ್ಯಕ್ಷ ಶರಣಬಸಪ್ಪ ಯಾಳವಾರ, ಎಚ್. ರಾಠೋಡ, ವೆಂಕಟೇಶಗೌಡ, ರಾಘವೇಂದ್ರ ಭಕ್ರಿ, ಸೇರಿದಂತೆ, ಕರವೇ ಮುಖಂಡರು, ಎಲ್ಲ ಶಾಲೆಯ ಮುಖ್ಯಶಿಕ್ಷಕರು, ಶಿಕ್ಷಕರು, ಕನ್ನಡಾಭಿಮಾನಿಗಳು, ರೈತ ಸಂಘದ ಮುಖಂಡರು, ವಿವಿಧ ಸಂಘಟನೆಯ ಮುಖಂಡರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಮೆರವಣಿಗೆಯಲ್ಲಿ ಖ್ಯಾತ ತಬಲಾ ವಾದಕ ಯಮುನೇಶ ಯಾಳಗಿ ಅವರು ನುಡಿಸಿದ ತಮಟೆಯ ಮೇಳಕ್ಕೆ ಪತ್ರಕರ್ತರಾದ ವಿಜಯಾಚಾರ್ಯ ಪುರೋಹಿತ, ಹಳ್ಳೇರಾವ ಕುಲಕರ್ಣಿ, ವೀರಣ್ಣ ಕಲಕೇರಿ, ಡಾ. ಯಂಕನಗೌಡ ಜೊತೆ ತಹಸೀಲ್ದಾರ್ ವಿಜಯಕುಮಾರ, ಬಸವರಾಜ ಸಜ್ಜನ ಅವರು ಲೇಜಿಮ್ ಆಡುವ ಮೂಲಕ ಎಲ್ಲರ ಗಮನ ಸೆಳೆದರು.