ಗದಗದಲ್ಲಿ ಸಮಾನತೆಯ ರಥಯಾತ್ರೆಗೆ ಭವ್ಯ ಸ್ವಾಗತ

| Published : Apr 23 2025, 12:37 AM IST

ಸಾರಾಂಶ

ಅಖಿಲ ಭಾರತ ಸಮಾನತೆ ಮಂದಿರ ಮಹಾಸಭಾದಿಂದ ಅನಿಲ ಪಿ. ಮೆಣಸಿನಕಾಯಿ ನೇತೃತ್ವದಲ್ಲಿ ನಡೆದ ಸಮಾನತೆ ರಥಯಾತ್ರೆ ನಗರದ ರಾಧಾಕೃಷ್ಣ ಕಾಲನಿಗೆ ಆಗಮಿಸಿದಾಗ ಮಹಿಳೆಯರು, ಸಹೋದರಿಯರು, ಗುರು-ಹಿರಿಯರು ರಥ ಯಾತ್ರೆಗೆ ಜಯವಾಗಲಿ ಸಮಾನತೆ ಬುತ್ತಿ ದೇಶಕ್ಕೆಲ್ಲ ಶಕ್ತಿ ಎಂಬ ಘೋಷಣೆ ಕೂಗುತ್ತ ಹೂಮಳೆ ಸುರಿಸಿ ಬರ ಮಾಡಿಕೊಂಡರು.

ಗದಗ: ಅಖಿಲ ಭಾರತ ಸಮಾನತೆ ಮಂದಿರ ಮಹಾಸಭಾದಿಂದ ಅನಿಲ ಪಿ. ಮೆಣಸಿನಕಾಯಿ ನೇತೃತ್ವದಲ್ಲಿ ನಡೆದ ಸಮಾನತೆ ರಥಯಾತ್ರೆ ನಗರದ ರಾಧಾಕೃಷ್ಣ ಕಾಲನಿಗೆ ಆಗಮಿಸಿದಾಗ ಮಹಿಳೆಯರು, ಸಹೋದರಿಯರು, ಗುರು-ಹಿರಿಯರು ರಥ ಯಾತ್ರೆಗೆ ಜಯವಾಗಲಿ ಸಮಾನತೆ ಬುತ್ತಿ ದೇಶಕ್ಕೆಲ್ಲ ಶಕ್ತಿ ಎಂಬ ಘೋಷಣೆ ಕೂಗುತ್ತ ಹೂಮಳೆ ಸುರಿಸಿ ಬರ ಮಾಡಿಕೊಂಡರು.

ಇಲ್ಲಿಯ ಆಂಜನೇಯಸ್ವಾಮಿ ದೇವಸ್ಥಾನದ ಎದುರಿಗೆ ಸಮಾನತೆಯ ರಥಕ್ಕೆ ಕಳಕಪ್ಪ ನಾಲ್ವಾಡ ಶೆಟ್ಟರ್‌ ವಿಶೇಷ ಪೂಜೆ ಸಲ್ಲಿಸಿದರು.

ಈ ವೇಳೆ ನ್ಯಾಯವಾದಿ ರವಿಕಾಂತ್ ಅಂಗಡಿ ಮಾತನಾಡಿ, ಹಿಂದುಗಳಿಗೆ ಭಗವದ್ಗೀತೆ, ಮುಸ್ಲಿಮರಿಗೆ ಕುರಾನ್, ಕ್ರಿಶ್ಚಿಯನ್ನರಿಗೆ ಬೈಬಲ್ ಎಷ್ಟು ಮುಖ್ಯವೋ ಸಮಾನತೆ ವಿಚಾರ ವಿಶ್ವಕ್ಕೆ ನೀಡಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಬರೆದ ಸಂವಿಧಾನ ಗ್ರಂಥವು ಅಷ್ಟೇ ಮುಖ್ಯವಾಗಿದೆ. ಇಂದಿನ ಹಾಗೂ ಮುಂದಿನ ಪೀಳಿಗೆ ಸಮಾನತೆಯಿಂದ ಸಾಗಲು ನಮ್ಮ ಸಮಾನತೆ ಯಾತ್ರೆಯ ಸಂದೇಶ ಪ್ರೇರಣೆಯಾಗಲಿದೆ ಎಂದರು.

ಭಾರತ ಸಮಾನತೆ ಮಂದಿರ ಪ್ರತಿಷ್ಠಾಪನೆಯ ಮಹಾಸಭಾದ ಸಂಸ್ಥಾಪಕ ಅನಿಲ ಮೆಣಸಿನಕಾಯಿ ಮಾತನಾಡಿ, ಸರ್ವರೂ ಸಮಾನತೆ ಸೌಹಾರ್ದತೆಯಿಂದ ಬಾಳಬೇಕು ಎಂಬ ಸಂಕಲ್ಪ ತೊಟ್ಟು ದೇಶದಲ್ಲಿ ಪ್ರಥಮವಾಗಿ ಸಮಾನತೆ ಮಂದಿರ ಕಟ್ಟುವ ಸಂಕಲ್ಪ ಮಾಡಿದ್ದು, ಸಮಾನತೆ ಮಂದಿರದಲ್ಲಿ ಸಮಾನತೆಯ ಸದ್ಗುರುಗಳ ಮೂರ್ತಿ ಪ್ರತಿಷ್ಠಾಪನೆ ಮಾಡಿ ಆ ಸದ್ಗುರುಗಳ ಮೂರ್ತಿ ಪೂಜೆಗೆ ಸೀಮಿತಗೊಳಿಸದೇ ಸಮಾನತೆ ಮಂದಿರ ಭವಿಷ್ಯತ್ತಿನಲ್ಲಿ ವಿಶ್ವ ಜ್ಞಾನ ಮಂದಿರವನ್ನಾಗಿ ಮಾಡಲಾಗುವುದು ಎಂದರು.

ಗದಗ ಜಿಲ್ಲೆಯಲ್ಲಿ ಸಮಾನತೆಯ ಜ್ಞಾನ ಮಂದಿರ ಕಟ್ಟುವ ಸಂಕಲ್ಪ ನಮ್ಮದಾಗಿದೆ. ಅದರ ಪೂರ್ವಕವಾಗಿ ಸಮಾನತೆ ರಥಯಾತ್ರೆಯೊಂದಿಗೆ ಸಮಾನತೆ ಬುತ್ತಿ ಸರ್ವರೂ ಸವಿಯಬೇಕೆಂಬ ಬಯಕೆ ನಮ್ಮದಾಗಿದೆ. ಈ ಪವಿತ್ರ ಕಾರ್ಯದಲ್ಲಿ ತಾವೆಲ್ಲ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಯಲ್ಲಪ್ಪ ಬದಾಮಿ, ಸಂತೋಷ್ ನಡಗಡ್ಡಿ, ಶಿವು ಕಟ್ಟಿ, ಮಾರುತಿ ಕರಿ ಸಕ್ರಣ್ಣವರ, ಬಸಪ್ಪ ಗಾಣಿಗೇರ, ಸಿದ್ದಣ್ಣ ಪಲ್ಲೇದ, ವಸಂತ ಪಡಗದ, ಕಾರ್ತಿಕ್ ಶಿಗ್ಲಿಮಠ, ಅಯ್ಯಪ್ಪ ಅಂಗಡಿ, ಬಸವಣ್ಣೆಯ್ಯ ಹಿರೇಮಠ, ಮಂಜುನಾಥ ಮ್ಯಾಗೇರಿ, ಈಶಣ್ಣ ಪಟ್ಟಣಶೆಟ್ಟರ, ಬಾಬು ಎಲಿಗಾರ, ಗೋವಿಂದ ಗುತ್ತಿ ಮುಂತಾದವರು ಉಪಸ್ಥಿತರಿದ್ದರು.