ರಾಯಚೂರಿನಿಂದ ಆಗಮಿಸಿದ ಬಿಜೆಪಿ ಪಾದಯಾತ್ರೆಯನ್ನು ಗಂಗಾವತಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತಿಸಿದರು. 6ನೇ ದಿನದ ಪಾದಯಾತ್ರೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಮಹಿಳೆಯರು ಪೂರ್ಣ ಕಂಭದೊಂದಿಗೆ ಸ್ವಾಗತಿಸಿದರು.
ರಾಮಮೂರ್ತಿ ನವಲಿ
ಗಂಗಾವತಿ: ರಾಯಚೂರಿನಿಂದ ಆಗಮಿಸಿದ ಬಿಜೆಪಿ ಪಾದಯಾತ್ರೆಯನ್ನು ಗಂಗಾವತಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತಿಸಿದರು. 6ನೇ ದಿನದ ಪಾದಯಾತ್ರೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಮಹಿಳೆಯರು ಪೂರ್ಣ ಕಂಭದೊಂದಿಗೆ ಸ್ವಾಗತಿಸಿದರು. ಜಂಗಮರ ಕಲ್ಗುಡಿ ಗ್ರಾಮದಿಂದ ಗಂಗಾವತಿ ವಿಧಾನಸಭಾ ಕ್ಷೇತ್ರದ ವಿದ್ಯಾನಗರಕ್ಕೆ ಆಗಮಿಸಿದ ವಿಜಯೇಂದ್ರ ಅವರಿಗೆ ಜೆಸಿಬಿ ಮೇಲೆ ನಿಂತು ಪುಷ್ಪ ಸಮರ್ಪಿಸಿದರು. ಅಲ್ಲದೆ ಬೃಹತ್ ಗಾತ್ರದ ಮಾಲೆ ಹಾಕಿ ಸ್ವಾಗತಿಸಿದರು. ಶಾಸಕ ಗಾಲಿ ಜನಾರ್ದನ ರೆಡ್ಡಿ ಮತ್ತು ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾಲೆ ಸಮರ್ಪಿಸಿದರು.ರಾರಾಜಿಸಿದ ಧ್ವಜಗಳು: ಪಾದಯಾತ್ರೆಯಲ್ಲಿ ಸಾವಿರಾರು ಕಾರ್ಯಕರ್ತರ ಕೈಯಲ್ಲಿ ಬಿಜೆಪಿ ಬಾವುಟ ಮತ್ತು ಶಾಸಕ ಗಾಲಿ ಜನಾರ್ದನ ರೆಡ್ಡಿ ಮತ್ತು ಅವರ ಪತ್ನಿ ಲಕ್ಷ್ಮಿ ಅರುಣಾ ಚಿತ್ರಗಳ ಬಾವುಟಗಳು ರಾರಾಜಿಸಿದವು. ರಾಣಾ ಪ್ರತಾಪ್ ವೃತ್ತ ಮತ್ತು ಶ್ರೀ ಚೆನ್ನಬಸವಸ್ವಾಮಿ ವೃತ್ತ, ಮಹಾವೀರ ವೃತ್ತ ಸೇರಿದಂತೆ ವಿವಿಧ ವೃತ್ತಗಳಲ್ಲಿ ಕಾರ್ಯಕರ್ತರು ಹೂಮಾಲೆ ಹಾಕಿ ಜಯಘೋಷ ಹಾಕಿದರು.
ಪೂರ್ಣಕುಂಭ: ವಿದ್ಯಾನಗರದಲ್ಲಿ ಬಿಜೆಪಿ ಪಾದಯಾತ್ರೆಯಲ್ಲಿ ಆಗಮಿಸಿದ ಮುಖಂಡರಿಗೆ ಮಹಿಳೆಯರು ಆರತಿ ಬೆಳಗಿ ಪೂರ್ಣಕುಂಭ ಸ್ವಾಗತ ನೀಡಿದರು. ಸುಮಾರು 10 ಕಿಮೀ ದೂರದ ವರೆಗೂ ಕುಂಭ ಹೊತ್ತು ಸಾಗಿದರು.ಮಹಿಳೆಯರ ಡೊಳ್ಳುಕುಣಿತ: ಪಾದಯಾತ್ರೆ ಸಿಬಿಎಸ್ ವೃತ್ತದ ಬಳಿ ಬರುತ್ತಿದ್ದಂತೆಯೇ ಮಹಿಳೆಯರು ಡೊಳ್ಳು ಬಾರಿಸಿದರು. ತಾಷಾಕ್ಕೆ ಹೆಜ್ಜೆ ಹಾಕಿದ ಮಹಿಳೆಯರು, ಧ್ವನಿವರ್ಧಕಗಳಲ್ಲಿ ಮೋದಿ ಹೆಸರು ಕೇಳಿ ಬರುತ್ತಿದ್ದಂತೆಯೇ, ಕುಣಿತ ಗಮನ ಸೆಳೆದರು.
ದುರ್ಗಾದೇವಿ, ಚನ್ನಬಸವಸ್ವಾಮಿ ದರ್ಶನ: ನಗರದ ಗ್ರಾಮದೇವತೆ ದುರ್ಗಾದೇವಿ ಮತ್ತು ಶ್ರೀ ಚೆನ್ನಬಸವಸ್ವಾಮಿ ಮಠಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭೇಟಿ ನೀಡಿ, ದರ್ಶನ ಪಡೆದರು. ವಿಜಯೇಂದ್ರ ಅವರನ್ನು ಮಠದ ವತಿಯಿಂದ ಗೌರವಿಸಲಾಯಿತು.