ಸಂವಿಧಾನ ಜಾಗೃತಿ ಜಾಥಾಕ್ಕೆ ಅರಕಲಗೂಡಲ್ಲಿ ಪೂರ್ಣಕುಂಭ ಸ್ವಾಗತ

| Published : Feb 13 2024, 12:50 AM IST

ಸಂವಿಧಾನ ಜಾಗೃತಿ ಜಾಥಾಕ್ಕೆ ಅರಕಲಗೂಡಲ್ಲಿ ಪೂರ್ಣಕುಂಭ ಸ್ವಾಗತ
Share this Article
  • FB
  • TW
  • Linkdin
  • Email

ಸಾರಾಂಶ

ಸೋಮವಾರ ಅರಕಲಗೂಡು ತಾಲೂಕಿಗೆ ಆಗಮಿಸಿದ ಸಂವಿಧಾನ ಮಹತ್ವ ಮತ್ತು ಸಂವಿಧಾನದ ಕುರಿತು ಅರಿವು ಮೂಡಿಸುವ ಸಂವಿಧಾನ ಜಾಗೃತಿ ಜಾಥಾಕ್ಕೆ ಮಲ್ಲಿಪಟ್ಟಣದಲ್ಲಿ ಪೂರ್ಣಕುಂಭ ಸ್ವಾಗತದೊಂದಿಗೆ ಅದ್ಧೂರಿಯಾಗಿ ಆಮಂತ್ರಿಸಲಾಯಿತು.

ಸಂವಿಧಾನ ಅರಿವು । ನೂರಾರು ಮಹಿಳೆಯರಿಂದ ಆತ್ಮೀಯ ಆಮಂತ್ರಣ । ಡಾ.ಬಿ.ಆರ್‌.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ

ಕನ್ನಡಪ್ರಭ ವಾರ್ತೆ ಅರಕಲಗೂಡು

ಸೋಮವಾರ ತಾಲೂಕಿಗೆ ಆಗಮಿಸಿದ ಸಂವಿಧಾನ ಮಹತ್ವ ಮತ್ತು ಸಂವಿಧಾನದ ಕುರಿತು ಅರಿವು ಮೂಡಿಸುವ ಸಂವಿಧಾನ ಜಾಗೃತಿ ಜಾಥಾಕ್ಕೆ ಮಲ್ಲಿಪಟ್ಟಣದಲ್ಲಿ ಪೂರ್ಣಕುಂಭ ಸ್ವಾಗತದೊಂದಿಗೆ ಅದ್ಧೂರಿಯಾಗಿ ಆಮಂತ್ರಿಸಲಾಯಿತು.

ನೂರಾರು ಮಂದಿ ಮಹಿಳೆಯರು ಪೂರ್ಣಕುಂಭ ಸ್ವಾಗತದೊಂದಿಗೆ ಸಂವಿಧಾನ ಜಾಗೃತಿ ಜಾಥಾವನ್ನು ಬರಮಾಡಿಕೊಂಡರು.

ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ ನೇತೃತ್ವದಲ್ಲಿ ಮುಖಂಡರು, ಸ್ತ್ರೀಶಕ್ತಿ ಸಂಘದ ಸದಸ್ಯರು, ವಿದ್ಯಾರ್ಥಿಗಳು ವಿವಿಧ ಕಲಾತಂಡಗಳು ಮೆರವಣಿಗೆಯಲ್ಲಿ ಸಾಗಿ ಮಲ್ಲಿಪಟ್ಟಣ ಬಸ್ ನಿಲ್ದಾಣದ ಬಳಿ ಸಮಾವೇಶಗೊಂಡವು.

ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ, ಇಒ ಡಾ. ಅಶೋಕ್, ಮಲ್ಲಿಪಟ್ಟಣ ಗ್ರಾಪಂ ಅಧ್ಯಕ್ಷ ಯೋಗೇಶ್ ಕುಮಾರ್, ಉಪಾಧ್ಯಕ್ಷೆ ಸುಮಿತ್ರಮ್ಮ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್, ಉಪನ್ಯಾಸಕ ಬಸವರಾಜು, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

ಬಳಿಕ ಉಪನ್ಯಾಸಕ ಬಸವರಾಜು ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬದುಕುತ್ತಿರುವ ಪ್ರತಿಯೊಬ್ಬರೂ ಸಂವಿಧಾನದ ಆಶಯಗಳನ್ನು ತಿಳಿಸುವ ನಿಟ್ಟಿನಲ್ಲಿ ಸರ್ಕಾರ ರಾಜ್ಯದ ಪ್ರತಿಯೊಂದು ಹಳ್ಳಿಗಳಲ್ಲಿ ಸಂವಿಧಾನ ಜಾಗೃತಿ ಜಾಥಾವನ್ನು ಕೈಗೊಂಡು ಅರಿವು ಮೂಡಿಸುತ್ತಿದೆ. ಇತ್ತೀಚೆಗೆ ಸಾರ್ವಜನಿಕವಾಗಿ ದೇಶದ ಸಂವಿಧಾನ ಕುರಿತು ಸಮೀಕ್ಷೆ ನಡೆಸಿದ ವೇಳೆ ಶೇ.45ರಷ್ಟು ಮಂದಿಗೆ ಸಂವಿಧಾನ ಬಗ್ಗೆ ಸಣ್ಣ ಪ್ರಮಾಣದ ಅರಿವು ಇಲ್ಲ. ದೇಶದಲ್ಲಿ ಎಲ್ಲರೂ ಸಮಾನರು ಎಂಬುದನ್ನು ಸಂವಿಧಾನ ಕೊಟ್ಟಿದೆ. ಇದನ್ನು ತಿಳಿಸುವ ನಿಟ್ಟಿನಲ್ಲಿ ಈ ಜಾಗೃತಿ ಜಾಥಾ ಸ್ವಾಗತಾರ್ಹ ಕಾರ್ಯಕ್ರಮವಾಗಿದೆ ಎಂದರು.

ಸಂವಿಧಾನ ರಚನೆಯ 22 ಸಮಿತಿಗಳಲ್ಲಿ ಕರಡು ಸಮಿತಿಯ ಪಾತ್ರ ಅತ್ಯಂತ ಪ್ರಮುಖವಾದದು. ಸಮಿತಿ ಅಧ್ಯಕ್ಷರಾಗಿದ್ದ ಅಂಬೇಡ್ಕರ್ ಅವರ ಸಮಿತಿಯಲ್ಲಿ 7 ಮಂದಿ ಸದಸ್ಯರು ಇದ್ದರು. ಈ ಪೈಕಿ ಬಹುತೇಕ ಪಾತ್ರ ನಿರ್ವಹಿಸಿದವರು ಅಂಬೇಡ್ಕರ್ ಅವರು. ವಿಶ್ವಸಂಸ್ಥೆ ಅಂಬೇಡ್ಕರ್ ಅವರ ಪರಿಶ್ರಮವನ್ನು ಪರಿಗಣಿಸಿ ವಿಶ್ವರತ್ನವನ್ನು ಕೊಟ್ಟು ಗೌರವಿಸಿದೆ. ಇದು ಪ್ರತಿಯೊಬ್ಬ ಭಾರತೀಯನಿಗೆ ಸಿಕ್ಕ ದೊಡ್ಡಗೌರವ. ಭಾರತ ಸಂವಿಧಾನದಲ್ಲಿ 395 ವಿಧಿಗಳು ಇವೆ. 8 ಪರಿಶಿಷ್ಟಗಳು, 22ಭಾಗಗಳು ಇವೆ. ಸಂವಿಧಾನ ಜಾರಿಗೆ ಬಂದಾಗ 8 ಅಧಿಕೃತ ಭಾಷೆಗಳು ಇವೆ. ಈಗ ಭಾರತ ಸಂವಿಧಾನ ಕೆಲವು ತಿದ್ದುಪಡಿಗಳನ್ನು ಒಳಗೊಂಡಂತೆ 448 ವಿಧಿ, 25 ಅಧ್ಯಾಯಗಳು, 12 ಪರಿಶಿಷ್ಟಗಳು, 22 ಅಧಿಕೃತ ಭಾಷೆಗಳನ್ನು ಒಳಗೊಂಡಿದೆ. ಸಂವಿಧಾನ ಮೂಲಪ್ರತಿ ಇಂಗ್ಲೀಷ್ ಮತ್ತು ಹಿಂದಿಯಲ್ಲಿ ಇರುವುದನ್ನು ಕಾಣುತ್ತೇವೆ. ಇಂದಿಗೂ ಕೂಡ ಸಂಸತ್ತಿನಲ್ಲಿ ಮೂಲ ಪ್ರತಿಯನ್ನು ಸಂರಕ್ಷಿಸಿ ಇಟ್ಟಿರುವುದನ್ನು ಕಾಣುತ್ತೇವೆ ಎಂದು ಮಾಹಿತಿ ನೀಡಿದರು.

ಇದಕ್ಕೂ ಮುನ್ನ ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ ಸಂವಿಧಾನದ ಪ್ರಸ್ತಾವನೆಯನ್ನು ಬೋಧಿಸಿದರು. ತಾಪಂ ಇಒ ಡಾ.ಅಶೋಕ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರವಿಕುಮಾರ್, ಗ್ರಾಪಂ ಅಧ್ಯಕ್ಷ ಯೋಗೇಶ್ ಕುಮಾರ್, ಉಪಾಧ್ಯಕ್ಷೆ ಸುಮಿತ್ರಮ್ಮ ಇದ್ದರು.

ಸಂವಿಧಾನ ಜಾಗೃತಿ ಜಾಥಾವನ್ನು ಮಲ್ಲಿಪಟ್ಟಣ ಗ್ರಾಮ ಪಂಚಾಯಿತಿಯ ಪ್ರಮುಖ ಬೀದಿಗಳಲ್ಲಿ ಪೂರ್ಣಕುಂಭ,ವಾದ್ಯಗಳೊಂದಿಗೆ ಮೆರವಣಿಗೆ ಮಾಡಲಾಯಿತು. ಅರಕಲಗೂಡು ತಾಲೂಕು ಮಲ್ಲಿಪಟ್ಟಣದಲ್ಲಿ ಸೋಮವಾರ ನಡೆದ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ ಸಂವಿಧಾನದ ಪ್ರಸ್ತಾವನೆಯನ್ನು ಬೋಧಿಸಿದರು.