ಅನುದಾನ ಕಡಿತ: ಅಂಗನವಾಡಿ ನೌಕರರಿಂದ ಪ್ರತಿಭಟನೆ

| Published : Feb 08 2024, 01:32 AM IST

ಅನುದಾನ ಕಡಿತ: ಅಂಗನವಾಡಿ ನೌಕರರಿಂದ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಶಹಾಪುರ ನಗರದ ಬಸವೇಶ್ವರ ವೃತ್ತದಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರು ಕೇಂದ್ರ ಸರ್ಕಾರದ ಬಜೆಟ್ ಪ್ರತಿ ದಹಿಸಿ ಪ್ರತಿಭಟಿಸಿದರು.

ಕನ್ನಡಪ್ರಭ ವಾರ್ತೆ ಶಹಾಪುರ

ಅಂಗನವಾಡಿ ನೌಕರರು ಹಲವಾರು ಸೌಲಭ್ಯ ವಂಚಿತರಾಗಿದ್ದು, ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ನಗರದ ಬಸವೇಶ್ವರ ವೃತ್ತದಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಸಿಐಟಿಯು ಸಂಯೋಜಿತದಲ್ಲಿ ಪ್ರತಿಭಟನೆ ನಡೆಸಿ, ಕೇಂದ್ರ ಸರಕಾರದ ಬಜೆಟ್ ಪ್ರತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದೆ.

ಈ ವೇಳೆ ಮಾತನಾಡಿದ ಸಂಘದ ತಾಲೂಕಾಧ್ಯಕ್ಷೆ ಬಸಲಿಂಗಮ್ಮ ನಾಟೇಕಾರ್, ಕೇಂದ್ರ ಸರ್ಕಾರವು ಅನುದಾನ ಕಡಿತಗೊಳಿಸಿದ್ದರಿಂದ 2 ಕೋಟಿ ತಾಯಂದಿರು ಹಾಗೂ 8 ಕೋಟಿ ಮಕ್ಕಳ ಆರೋಗ್ಯ, ಆಹಾರ ಮತ್ತು ಶಿಕ್ಷಣದ ಹಕ್ಕನ್ನು ಕಸಿದುಕೊಂಡಂತಾಗಿದೆ. ಕೇಂದ್ರ ಸರ್ಕಾರವು ಬಜೆಟ್‌ನಲ್ಲಿ ಐಸಿಡಿಎಸ್ ಯೋಜನೆಯಲ್ಲಿ 300 ಕೋಟಿ ರು. ಅನುದಾನ ಕಡಿತಗೊಳಿಸಿದ್ದು, ಇದು ಗರ್ಭಿಣಿಯರಿಗೆ, ಬಾಣಂತಿಯರಿಗೆ ಹಾಗೂ ಮಕ್ಕಳಿಗೆ ಮಾಡಿದ ಅನ್ಯಾಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾನೂನು ಪ್ರಕಾರ ಹತ್ತು ವರ್ಷದಿಂದ ಸೇವೆ ಸಲ್ಲಿಸುತ್ತಿರುವ ಕಾರ್ಯಕರ್ತೆಯರನ್ನು ಕಾಯಂಗೊಳಿಸಬೇಕು. ಆದರೆ ಗೌರವ ಧನದ ಹೆಸರಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಮೇಲೆ ದೌರ್ಜನ್ಯವಾಗುತ್ತಿದೆ ಎಂದು ಕಿಡಿಕಾರಿದರು.

ಸಂಘದ ವಡಗೇರಾ ತಾಲೂಕು ಕಾರ್ಯದರ್ಶಿ ಚಂದಮ್ಮ ನಾಯ್ಕಲ್‌ ಮಾತನಾಡಿದರು. ಸಿಐಟಿಯು ತಾಲೂಕು ಸಂಚಾಲಕ ಮಲ್ಲಯ್ಯ ಪೋಲಂಪಲ್ಲಿ, ಸಂಘದ ಉಪಾಧ್ಯಕ್ಷೆ ರೇಣುಕಾ ಹೊಸಮನಿ ಗೋಗಿ, ಮಹಾನಂದ ಸಗರ್, ಸಂಘದ ಖಜಾಂಚಿ ಮಹಾದೇವಿ ಕಾಡಮಗೇರಾ, ಶಾರದಾದೇವಿ ನಂದಿಹಳ್ಳಿ, ಅಕ್ಷರ ದಾಸೋಹ ನೌಕರ ಸಂಘದ ತಾಲೂಕು ಕಾರ್ಯದರ್ಶಿ ಈರಮ್ಮ ಹಯ್ಯಾಳಕರ್, ಚಂದ್ರಕಲಾ ಶಿರವಾಳ, ಅನ್ನಪೂರ್ಣ ಶಹಾಪುರ, ಬಸಲಿಂಗಮ್ಮ ಸಿರವಾಳ, ಸುಧಾ ಸಗರ್, ಕವಿತಾ ಶಹಾಪುರ ಸೇರದಂತೆ ಇತರರಿದ್ದರು.