ಅನುದಾನ ತಾರತಮ್ಯ: ರಾಜ್ಯ ಸರ್ಕಾರದ ಹೋರಾಟ ಬೆಂಬಲಿಸಿ ಪ್ರತಿಭಟನೆ

| Published : Feb 10 2024, 01:48 AM IST

ಸಾರಾಂಶ

ರಾಜ್ಯದ ತೆರಿಗೆ ಹಣದ ತಾರತಮ್ಯದ ಬಗ್ಗೆ ಕೇಂದ್ರ ಸರ್ಕಾರವು ಜನರ ದಿಕ್ಕನ್ನು ತಪ್ಪಿಸುವ ಕೆಲಸ ಮಾಡುತ್ತಿದೆ. ರಾಜ್ಯದ ಸಂಸದರು ಕೇಂದ್ರದ ನಡೆಯನ್ನು ಪ್ರಶ್ನಿಸದ್ದು ಕನ್ನಡಿಗರಿಗೆ ಮಾಡುತ್ತಿರುವ ಮೋಸ ಎಂದು ಸಿಪಿಐಎಂ ಸಂಘಟನೆಯ ಮುಖಂಡ ಪೀರು ರಾಠೋಡ ಹೇಳಿದರು.

ಗಜೇಂದ್ರಗಡ: ರಾಜ್ಯದ ತೆರಿಗೆ ಹಣದ ತಾರತಮ್ಯದ ಬಗ್ಗೆ ಕೇಂದ್ರ ಸರ್ಕಾರವು ಜನರ ದಿಕ್ಕನ್ನು ತಪ್ಪಿಸುವ ಕೆಲಸ ಮಾಡುತ್ತಿದೆ. ರಾಜ್ಯದ ಸಂಸದರು ಕೇಂದ್ರದ ನಡೆಯನ್ನು ಪ್ರಶ್ನಿಸದ್ದು ಕನ್ನಡಿಗರಿಗೆ ಮಾಡುತ್ತಿರುವ ಮೋಸ ಎಂದು ಸಿಪಿಐಎಂ ಸಂಘಟನೆಯ ಮುಖಂಡ ಪೀರು ರಾಠೋಡ ಹೇಳಿದರು.ಅನುದಾನ ಹಂಚಿಕೆ ತಾರತಮ್ಯ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಸರ್ಕಾರ ಹಾಗೂ ಕೇರಳ ಸರ್ಕಾರಗಳು ನಡೆಸಿದ ಹೋರಾಟ ಬೆಂಬಲಿಸಿ ಇಲ್ಲಿ ಶುಕ್ರವಾರ ಸಿಪಿಐ (ಎಂ) ಸಂಘಟನೆಯಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.

ಕೇಂದ್ರ ಸರ್ಕಾರವು ರಾಜ್ಯಕ್ಕೆ ಅನುದಾನ ಹಂಚಿಕೆಯಲ್ಲಿ ಸಾಕಷ್ಟು ತಾರತಮ್ಯ ಮಾಡುತ್ತಿದ್ದು, ದಕ್ಷಿಣ ಭಾರತ ರಾಜ್ಯಗಳನ್ನು ನಿರ್ಲಕ್ಷ್ಯ ಮಾಡುತ್ತಿದೆ. ಕೇಂದ್ರ ಸರ್ಕಾರವು ಕೆಲ ರಾಜ್ಯಗಳ ಮೇಲೆ ತನ್ನ ಅಧಿಕಾರ ದುರುಪಯೋಗ, ಹಸ್ತಕ್ಷೇಪದ ಮೂಲಕ ಒಕ್ಕೂಟ ವ್ಯವಸ್ಥೆಗೆ ಭಂಗ ತರಲು ಯತ್ನಿಸುತ್ತಿದೆ ಎಂದು ದೂರಿದ ಅವರು, ನಾವು ಸಣ್ಣವರಿದ್ದಾಗಿನಿಂದ ಹನುಮ ದೇವರನ್ನು ಪೂಜಿಸುತ್ತಾ ಬೆಳೆದಿದ್ದೇವೆ. ಹನುಮ ಧ್ವಜವನ್ನು ಕಟ್ಟಿದರೆ ಮಾತ್ರ ಹನುಮ ಜಯಂತಿ ಎಂದು ಬಿಜೆಪಿ ಹನುಮ ಜಯಂತಿ ಆಚರಿಸಲು ಯತ್ನಿಸುತ್ತಿದ್ದು ರಾಷ್ಟ್ರಧ್ವಜ ಇಳಿಸಿ ಹನುಮ ಧ್ವಜವನ್ನು ಹಾರಿಸಲು ಯತ್ನಿಸುತ್ತಿರುವುದು ಕಣ್ಣೆದುರುಗಿರುವ ಸತ್ಯವಾಗಿದೆ. ದೇಶವನ್ನು ಅಭಿವೃದ್ಧಿ ಪಥದತ್ತ ಸಾಗಿಸಲು ಶ್ರಮಿಸಬೇಕಿದ್ದ ಸರ್ಕಾರವು ಸೂಕ್ಷ್ಮ ವಿಷಯಗಳನ್ನು ಮುಂದಿಟ್ಟುಕೊಂಡು ದೇಶವನ್ನು ಆಳಲೆತ್ನಿಸುತ್ತಿದೆ. ಪರಿಣಾಮ ಅನುದಾನ ಹಂಚಿಕೆ ವಿಷಯವನ್ನು ಪ್ರಸ್ತಾಪಿಸಿದರೆ ಮೋದಿ ಸರ್ಕಾರ ಅದರ ಬಗ್ಗೆ ಉತ್ತರ ನೀಡುವುದಿಲ್ಲ, ರೈತರ, ದಿನದಲಿತರ ಬಗೆಗಿನ ಸಮಸ್ಯೆಗಳಿಗೆ ಪರಿಹಾರ ಒದಗಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ದೂರಿದರು.

ಮುಖಂಡ ಮಾರುತಿ ಚಿಟಗಿ ಮಾತನಾಡಿ, ಕೇಂದ್ರ ಪ್ರಾಯೋಜಿತ ಯೋಜನೆಗಳ ರಾಜ್ಯಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಒಕ್ಕೂಟ ಸರ್ಕಾರವು ಮಧ್ಯಪ್ರವೇಶ ಮಾಡಬಾರದು. ರಾಜ್ಯದಲ್ಲಿ ಬರಗಾಲ ಪರಿಹಾರದ ಭಾಗವಾಗಿ ಕೃಷಿ ಕೂಲಿಕಾರರಿಗೆ, ಅಸಂಘಟಿತ ಕಾರ್ಮಿಕರಿಗೆ ಸೂಕ್ತ ಪರಿಹಾರ ನೀಡಬೇಕು ಹಾಗೂ ದಕ್ಷಿಣ ರಾಜ್ಯಗಳಿಗೆ ಅನುದಾನ ಹಂಚಿಕೆಯಲ್ಲಿ ಮಾಡುತ್ತಿರುವ ತಾರತಮ್ಯ ನೀತಿಯನ್ನು ಕೈಬಿಡಬೇಕು ಎಂದು ಒತ್ತಾಯಿಸಿದ ಅವರು, ರಾಜ್ಯದ ಹಿತವನ್ನು ಕಾಯುವಲ್ಲಿ ವಿಫಲವಾಗಿರುವ ಸಂಸದರನ್ನು ಮನೆಗೆ ಕಳುಹಿಸಲು ಜನತೆ ಉತ್ಸುಕವಾಗಿದ್ದು, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಜನತೆ ತಕ್ಕ ಉತ್ತರ ನೀಡಲಿದ್ದಾರೆ ಎಂದರು.

ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ ಮನವಿ ಸ್ವೀಕರಿಸಿದರು.

ಮೈಬು ಹವಾಲ್ದಾರ್, ಬಾಲು ರಾಠೋಡ, ತುಕರಾಂ ಚವ್ಹಾಣ, ಅಂದಪ್ಪ ಕುರಿ, ಆನಂದ ರಾಠೋಡ, ರೇಣುಕಪ್ಪ ರಾಠೋಡ, ಚನ್ನಪ್ಪ ಗುಗಲೋತ್ತರ, ವಿರೇಶ ಇಟಗಿ ಸೇರಿ ಇತರರು ಇದ್ದರು.