ಕುಡುಒಕ್ಕಲಿಗರ ಭವನ ನಿರ್ಮಾಣಕ್ಕೆ ಅನುದಾನದ ಭರವಸೆ

| Published : Oct 01 2024, 01:33 AM IST

ಸಾರಾಂಶ

ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡುವ ಮೂಲಕ ಅವರನ್ನು ಪ್ರೋತ್ಸಾಹಿಸಿ ಉನ್ನತ ಶಿಕ್ಷಣಕ್ಕೆ ಅಣಿಗೊಳಿಸುವ ಪ್ರಯತ್ನ ಶ್ಲ್ಯಾಘನೀಯ

ಗದಗ: ಅಪೂರ್ಣಗೊಂಡಿರುವ ಗದುಗಿನ ಕುಡುಒಕ್ಕಲಿಗರ ಭವನ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಒದಗಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ಅವರು ಭಾನುವಾರ ಬಿಂಕದಕಟ್ಟಿ ಪ್ರಾಣಿಸಂಗ್ರಹಾಲಯದ ಹತ್ತಿರವಿರುವ ಕುಡುಒಕ್ಕಲಿಗರ ಭವನದಲ್ಲಿ ಅಖಿಲ ಕರ್ನಾಟಕ ಲಿಂಗಾಯತ ಕುಡುಒಕ್ಕಲಿಗರ ಸಂಘ ಕೇಂದ್ರ ಕಚೇರಿ ಗದಗ ಇದರ ವಾರ್ಷಿಕ ಮಹಾಸಭೆ ಹಾಗೂ ಪ್ರತಿಭಾ ಪುರಸ್ಕಾರ, ಮಾಜಿ ಸೈನಿಕರ ಮತ್ತು ವಿಶೇಷ ಸಾಧಕರ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಕುಡುಒಕ್ಕಲಿಗ ಸಮಾಜ ಬಾಂಧವರು ದಾನಧರ್ಮಕ್ಕೆ ಹೆಸರಾದವರು ಆದಾಗ್ಯೂ ಸಮುದಾಯ ಭವನ ಅಪೂರ್ಣಗೊಂಡಿದ್ದು, ಈ ಬಗ್ಗೆ ಸಮಾಜ ಬಾಂಧವರು ಸಂಘಟಿತರಾಗಿ ಅನುದಾನಕ್ಕೆ ಮುಂದಾದರೆ ಕ್ರಮ ಜರುಗಿಸುವುದಾಗಿ ಹೇಳಿ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡುವ ಮೂಲಕ ಅವರನ್ನು ಪ್ರೋತ್ಸಾಹಿಸಿ ಉನ್ನತ ಶಿಕ್ಷಣಕ್ಕೆ ಅಣಿಗೊಳಿಸುವ ಪ್ರಯತ್ನ ಶ್ಲ್ಯಾಘನೀಯ ಎಂದರು.

ಮುಖ್ಯ ಅತಿಥಿ ಅಖಿಲ ಕರ್ನಾಟಕ ಲಿಂಗಾಯತ ಕುಡುಒಕ್ಕಲಿಗರ ಮಹಾಸಭಾದ ಅಧ್ಯಕ್ಷ ಬಿ.ಬಿ. ಪಾಟೀಲ, ಕೃಷಿ ಸಾಧಕ ಪರಮೇಶ್ವರಪ್ಪ ಜಂತ್ಲಿ ಮುಂತಾದವರು ಮಾತನಾಡಿದರು. ಎಸ್ಸೆಸ್ಸೆಲ್ಸಿಹಾಗೂ ಪಿಯುಸಿಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದುಕೊಂಡ ಸಮಾಜದ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ ಮಾತನಾಡಿದರು. ನಿಂಗಪ್ಪ ಹಳ್ಳದ, ಹಾಲೇಶ ಉಪನಾಳ, ವಸಂತಪ್ಪ ಕನಾಜ, ಸಿ.ಬಿ. ಹೊನ್ನಪ್ಪನವರ, ನಗರಸಭೆಯ ಸದಸ್ಯ ಚಂದ್ರು ಕರಿಸೋಮನಗೌಡ್ರ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಶರಣಪ್ಪ ದಿಡ್ಡಿಮನಿ ಸ್ವಾಗತಿಸಿದರು, ನಡುವಿನಮನಿ ನಿರೂಪಿಸಿದರು. ಸಿದ್ರಾಮಪ್ಪ ಗೋಜನೂರ ವಂದಿಸಿದರು.